
ಮಾಸ್ಕೋ: ಅಮೆರಿಕ ದಾಳಿ ಬೆನ್ನಲ್ಲೇ ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಾಘ್ಚಿ ಜೊತೆಗೆ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಮಹತ್ವದ ಸಭೆ ನಡೆಸಿದ್ದಾರೆ. ಉಭಯ ನಾಯಕರ ಮಾತುಕತೆಯ ಫೋಟೋಗಳು ಮತ್ತು ವಿಡಿಯೋ ದೃಶ್ಯಾವಳಿಗಳನ್ನು ಸೋಮವಾರ ಕ್ರೆಮ್ಲಿನ್ ಬಿಡುಗಡೆ ಮಾಡಿರುವುದಾಗಿ ಸಿಎನ್ ಎನ್ ವರದಿ ಮಾಡಿದೆ.
ಅಮೆರಿಕದ ವಿರುದ್ಧ ಇರಾನ್ ಪ್ರತೀಕಾರ ತೀರಿಸಿಕೊಳ್ಳುವುದಾಗಿ ಅರಾಘ್ಚಿ ಭಾನುವಾರ ಪ್ರತಿಜ್ಞೆ ಮಾಡಿದ್ದರು. ದಾಳಿ ಹಿನ್ನೆಲೆಯಲ್ಲಿ ಅಮೆರಿಕ ಸರ್ಕಾರವನ್ನು ಅತ್ಯಂತ ಕಠಿಣವಾಗಿ ಖಂಡಿಸಬೇಕು ಎಂದು ವಿಶ್ವಸಂಸ್ಥೆ ಸೆಕ್ರೆಟರಿ-ಜನರಲ್ ಆಂಟೋನಿಯೊ ಗುಟೆರೆಸ್ ಅವರನ್ನು ಒತ್ತಾಯಿಸಿದ್ದರು. ಇರಾನ್ ನ ಪ್ರಮುಖ ಪರಮಾಣು ತಾಣಗಳ ಮೇಲೆ ಅಮೆರಿಕ ದಾಳಿ ನಡೆಸಿದ 48 ಗಂಟೆಗಳ ನಂತರ ಅಬ್ಬಾಸ್ ಅರಾಘ್ಚಿ ರಷ್ಯಾಕ್ಕೆ ಭೇಟಿ ನೀಡಿದ್ದು, ಪುಟಿನ್ ಅವರೊಂದಿಗೆ ಮಾತುಕತೆ ನಡೆಸಿರುವುದು ಜಗತ್ತಿನಾದ್ಯಂತ ಭಾರಿ ಕುತೂಹಲ ಕೆರಳಿಸಿದೆ.
ರಷ್ಯಾ ಇರಾನ್‌ನ ನಿರ್ಣಾಯಕ ಬೆಂಬಲಿಗ" ಆಗಿದ್ದರೂ ಜೂನ್ 13 ರಂದು ಇಸ್ರೇಲ್ ದಾಳಿಯನ್ನು ಪ್ರಾರಂಭಿಸಿದಾಗಿನಿಂದ ಮತ್ತು ಇರಾನ್ ಕ್ಷಿಪಣಿಗಳು, ಡ್ರೋನ್‌ಗಳೊಂದಿಗೆ ಪ್ರತಿಕ್ರಿಯಿಸಿದಾಗಿನಿಂದ ಅದು ಏನನ್ನೂ ಹೇಳಿಲ್ಲ. ಇರಾನ್‌ನ ಪರಮಾಣು ತಾಣಗಳ ಮೇಲಿನ ಅಮೆರಿಕ ಮತ್ತು ಇಸ್ರೇಲ್ ದಾಳಿಯನ್ನು ಕ್ರೆಮ್ಲಿನ್ ಖಂಡಿಸಿದೆ. ಆದರೆ ಇದುವರೆಗೆ ಮಿಲಿಟರಿ ನೆರವಿನ ಯಾವುದೇ ಪ್ರಸ್ತಾಪ ಮಾಡಿಲ್ಲ. ಕೆಲವು ತಿಂಗಳ ಹಿಂದೆ ಇರಾನ್‌ನೊಂದಿಗೆ ಸಹಿ ಹಾಕಲಾದ ಕಾರ್ಯತಂತ್ರದ ಪಾಲುದಾರಿಕೆಯಿಂದ ದೂರವಿರಲು ಅದು ಪ್ರಯತ್ನಿಸಿದೆ ಎಂದು AFP ವರದಿ ತಿಳಿಸಿದೆ.
ಹೀಗಾಗಿ ಈ ಸಭೆ ಮಹತ್ವ ಪಡೆಯಲಿದೆ ಎಂಬ ನಿರೀಕ್ಷೆಯಿದೆ. ಈ ಹೊಸ ಅಪಾಯಕಾರಿ ಪರಿಸ್ಥಿತಿಯಲ್ಲಿ ರಷ್ಯಾದೊಂದಿಗಿನ ನಮ್ಮ ಮಾತುಕತೆಗಳು ನಿಸ್ಸಂಶಯವಾಗಿ ಹೆಚ್ಚಿನ ಪ್ರಾಮುಖ್ಯತೆಯನ್ನು ಪಡೆದುಕೊಳ್ಳಬಹುದು" ಎಂದು ಮಾಸ್ಕೋಗೆ ಬಂದಿಳಿದ ನಂತರ ಅರಾಘ್ಚಿ ರಷ್ಯಾದ ಮಾಧ್ಯಮಕ್ಕೆ ತಿಳಿಸಿದರು.
ಪುಟಿನ್- ಅರಾಘ್ಚಿ ಭೇಟಿಯಿಂದ ಏನನ್ನು ನಿರೀಕ್ಷಿಸಬಹುದು?
ರಷ್ಯಾದ ರಾಜ್ಯ ಸಂಸ್ಥೆ IRNA ಯ ವರದಿಯ ಪ್ರಕಾರ ಇರಾನ್ ವಿರುದ್ಧ ಯುಎಸ್ ಮತ್ತು ಜಿಯೋನಿಸ್ಟ್ ಆಡಳಿತ (ಇಸ್ರೇಲ್) ನಡೆಸಿದ ಮಿಲಿಟರಿ ಆಕ್ರಮಣದ ನಂತರ ಪ್ರಾದೇಶಿಕ ಮತ್ತು ಅಂತರಾಷ್ಟ್ರೀಯ ಬೆಳವಣಿಗೆಗಳ ಬಗ್ಗೆ ಅಧ್ಯಕ್ಷ ಪುಟಿನ್ ಮತ್ತು ರಷ್ಯಾದ ಇತರ ಹಿರಿಯ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಯಲಿದೆ ಎನ್ನಲಾಗಿದೆ.
ಈ ಹಿಂದೆ ಪುಟಿನ್ ಅವರು ಇರಾನ್ ಮತ್ತು ಇಸ್ರೇಲ್ ನಡುವೆ ಮಧ್ಯಸ್ಥಿಕೆ ವಹಿಸಬಹುದೆಂದು ಹೇಳಿದ್ದರು. ಆದರೆ ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಹೇಳಿಕೆ ನಂತರ ಉಲ್ಟಾ ಹೊಡೆದಿದ್ದರು. ತನ್ನದು ಕೇವಲ ಆಲೋಚನೆ ಎಂದಿದ್ದರು. ಜೂನ್ 21 ರಂದು ರಷ್ಯಾದ ವಿದೇಶಾಂಗ ಸಚಿವಾಲಯವು ಯುಎಸ್ ದಾಳಿಯನ್ನು "ಬೇಜವಾಬ್ದಾರಿ" ಎಂದು ಖಂಡಿಸಿತ್ತು. ಮಿಲಿಟರಿ ಹಸ್ತಕ್ಷೇಪದ ವಿರುದ್ಧ ಎಚ್ಚರಿಕೆ ನೀಡಿತ್ತು.
Advertisement