
ವಾಷಿಂಗ್ಟನ್: ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿಕೊಂಡಂತೆ ಇರಾನ್ ನ ಪರಮಾಣು ಘಟಕಗಳನ್ನು ಗುರಿಯಾಗಿಸಿ ಅಮೆರಿಕ ನಡೆಸಿದ ದಾಳಿಯಲ್ಲಿ ಟೆಹರಾನ್ ನ ಪರಮಾಣು ಯೋಜನೆ ನಾಶಪಡಿಸುವ ಬದಲು ಕೆಲವು ತಿಂಗಳ ಕಾಲ ಹಿಮ್ಮೆಟ್ಟಿಸಿದೆ ಎಂದು ಯುಎಸ್ ಗುಪ್ತಚರ ವರದಿಗಳು ತಿಳಿಸಿವೆ.
ವಾರಾಂತ್ಯದಲ್ಲಿ ನಡೆದ ದಾಳಿ ವೇಳೆಯಲ್ಲಿ ಇರಾನ್‌ನ ಯುರೇನಿಯಂ ಸಂಗ್ರಹವನ್ನು ಸಂಪೂರ್ಣವಾಗಿ ತೊಡೆದುಹಾಕುವಲ್ಲಿ ಸಾಧ್ಯವಾಗಿಲ್ಲ ಎಂದು ರಕ್ಷಣಾ ಗುಪ್ತಚರ ಏಜೆನ್ಸಿಯ ಮೂಲಗಳನ್ನು ಉಲ್ಲೇಖಿಸಿ ಯುಎಸ್ ಮಾಧ್ಯಮ ಮಂಗಳವಾರ ವರದಿ ಮಾಡಿದೆ.
ದಾಳಿಯು ರಹಸ್ಯ ಕಟ್ಟಡಗಳನ್ನು ನಾಶಪಡಿಸದೆ ಪರಮಾಣು ತಾಣಗಳ ಪ್ರವೇಶ ದ್ವಾರವನ್ನು ಮಾತ್ರ ನಾಶಪಡಿಸಲಾಗಿದೆ ಎಂದು ವರದಿಗಳು ಹೇಳಿವೆ. ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಕ್ಯಾರೋಲಿನ್ ಲೀವಿಟ್ ಅವರು ಮೌಲ್ಯಮಾಪನದ ಸತ್ಯಾಸತ್ಯತೆಯನ್ನು ದೃಢಪಡಿಸಿದ್ದಾರೆ. ಆದರೆ ಅದು ತಪ್ಪು ಮತ್ತು 'ಉನ್ನತ ರಹಸ್ಯವಾಗಿದೆ ಎಂದು ಹೇಳಿದ್ದಾರೆ.
ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ವರ್ಚಸ್ಸಿಗೆ ಧಕ್ಕೆ ತರುವ ಹಾಗೂ ಇರಾನ್ ನ ಪರಮಾಣು ತಾಣಗಳ ದಾಳಿ ನಡೆಸಿದ ಕೆಚ್ಚೆದೆಯ ಪೈಲಟ್ ಗಳನ್ನು ಅಪಖ್ಯಾತಿಗೊಳಿಸುವ ಸ್ಪಷ್ಟ ಪ್ರಯತ್ನವಾಗಿದೆ" ಎಂದು ಲೀವಿಟ್ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ.
ಗುರಿಯನ್ನಾಗಿಸಿದ ಕಟ್ಟಡಗಳ ಮೇಲೆ 30,000 ಪೌಂಡ್ ಬಾಂಬ್‌ಗಳನ್ನು ಹಾಕಿದಾಗ ಏನಾಗುತ್ತದೆ ಎಂದು ಪ್ರತಿಯೊಬ್ಬರಿಗೂ ತಿಳಿದಿದೆ. ಇರಾನ್ ನ ಎರಡು ಪರಮಾಣು ಘಟಕಗಳ ಮೇಲೆ ಯುಎಸ್ ಬಿ-2 ಬಾಂಬರ್ ಹಾಕಲಾಗಿದೆ. ಜಲಾಂತರ್ಗಾಮಿ ನೌಕೆಯು ಟೊಮಾಹಾಕ್ ಕ್ರೂಸ್ ಕ್ಷಿಪಣಿಗಳೊಂದಿಗೆ ಮೂರನೇ ಒಂದು ಭಾಗವನ್ನು ಹೊಡೆದಿದೆ ಎಂದು ಅವರು ಹೇಳಿದ್ದಾರ
ಇರಾನ್ ಪರಮಾಣು ತಾಣಗಳ ಮೇಲಿನ ದಾಳಿಯನ್ನು "ಅದ್ಭುತ ಮಿಲಿಟರಿ ಯಶಸ್ಸು ಎಂದು ಕರೆದಿದ್ದ ಟ್ರಂಪ್ , ಪರಮಾಣು ತಾಣಗಳನ್ನು ನಾಶಪಡಿಸಲಾಗಿದೆ ಎಂದು ಹೇಳಿದ್ದರು. ವಾಷಿಂಗ್ಟನ್ ಪಡೆಗಳು "ಇರಾನ್ ಪರಮಾಣು ಕಾರ್ಯಕ್ರಮವನ್ನು ಧ್ವಂಸಗೊಳಿಸಿದೆ" ಎಂದು ರಕ್ಷಣಾ ಕಾರ್ಯದರ್ಶಿ ಪೀಟ್ ಹೆಗ್ಸೆತ್ ಹೇಳಿದ್ದರು. ಪರಮಾಣು ಯೋಜನೆಗಳಿಗೆ ತೊಂದರೆಯಾಗದಂತೆ ಕಾಪಾಡಿಕೊಳ್ಳಲು ಅಗತ್ಯ ಮುನ್ನೆಚ್ಚರಿಕೆ ಕೈಗೊಳ್ಳಲಾಗಿತ್ತು ಎಂದು ಇರಾನ್ ಸರ್ಕಾರ ಮಂಗಳವಾರ ಹೇಳಿದೆ.
ಪರಮಾಣು ಘಟಕಗಳಿಗೆ ಯಾವುದೇ ಸಮಸ್ಯೆಯಾಗದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿತ್ತು. ಪರಮಾಣು ಉತ್ಪಾದನೆ ಮತ್ತು ಸೇವೆಗಳಿಗೆ ಅಡ್ಡಿಯಾಗದಂತೆ ನೋಡಿಕೊಳ್ಳುವುದು ನಮ್ಮ ಕಾರ್ಯತಂತ್ರವಾಗಿದೆ" ಎಂದು ಇರಾನ್‌ನ ಪರಮಾಣು ಶಕ್ತಿ ಸಂಸ್ಥೆಯ ಮುಖ್ಯಸ್ಥ ಮೊಹಮ್ಮದ್ ಎಸ್ಲಾಮಿ ರಾಜ್ಯ ದೂರದರ್ಶನದಲ್ಲಿ ಪ್ರಸಾರವಾದ ಹೇಳಿಕೆಯಲ್ಲಿ ತಿಳಿಸಿದ್ದಾರೆ.
Advertisement