
ಇಸ್ಲಾಮಾಬಾದ್: ಪಾಕಿಸ್ತಾನದಲ್ಲಿ ಆತ್ಮಾಹುತಿ ಬಾಂಬ್ ದಾಳಿ ನಡೆದಿದೆ. ಪಾಕಿಸ್ತಾನಿ ತಾಲಿಬಾನ್ ಎಂದು ಹೇಳಿಕೊಂಡವರಿಂದ ನಡೆದ ದಾಳಿಯಲ್ಲಿ 16 ಸೈನಿಕರು ಸಾವನ್ನಪ್ಪಿದ್ದು, ನಾಗರಿಕರು, ಸ್ಥಳೀಯ ಸರ್ಕಾರದ ಅಧಿಕಾರಿಗಳು ಸೇರಿದಂತೆ ಎರಡು ಡಜನ್ ಗೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ಸುದ್ದಿಸಂಸ್ಥೆ AFP ಗೆ ತಿಳಿಸಿದ್ದಾರೆ.
ಸೇನಾ ಬೆಂಗಾವಲು ಪಡೆ ವಾಹನದ ಮೇಲೆ ಆತ್ಮಹತ್ಯಾ ಬಾಂಬರ್, ಸ್ಫೋಟಕ ತುಂಬಿದ ವಾಹನವನ್ನು ಡಿಕ್ಕಿ ಹೊಡೆಸಿದ್ದಾನೆ ಎಂದು ಖೈಬರ್ ಪಖ್ತುಂಖ್ವಾ ಪ್ರಾಂತ್ಯದ ಉತ್ತರ ವಜಿರಿಸ್ತಾನ್ ಜಿಲ್ಲೆಯ ಸ್ಥಳೀಯ ಸರ್ಕಾರಿ ಅಧಿಕಾರಿಯೊಬ್ಬರು ಮಾಧ್ಯಮ ಪ್ರತಿನಿಧಿಗಳಿಗೆ ಮಾಹಿತಿ ನೀಡಿದ್ದಾರೆ.
ದಾಳಿ ವೇಳೆಯಲ್ಲಿ 16 ಸೈನಿಕರು ಸಾವನ್ನಪ್ಪಿದ್ದಾರೆ. ಸ್ಫೋಟದಿಂದಾಗಿ ಎರಡು ಮನೆಗಳ ಮೇಲ್ಛಾವಣಿ ಕುಸಿದು ಆರು ಮಕ್ಕಳು ಗಾಯಗೊಂಡಿದ್ದಾರೆ ಎಂದು ಜಿಲ್ಲೆಯಲ್ಲಿ ನಿಯೋಜಿಸಲಾದ ಪೊಲೀಸ್ ಅಧಿಕಾರಿಯೊಬ್ಬರು ಎಎಫ್‌ಪಿಗೆ ತಿಳಿಸಿದ್ದಾರೆ.
ಪಾಕಿಸ್ತಾನ ತಾಲಿಬಾನ್‌ನ ಒಂದು ಬಣವಾದ ಹಫೀಜ್ ಗುಲ್ ಬಹದ್ದೂರ್ ಸಶಸ್ತ್ರ ಗುಂಪಿನ ಆತ್ಮಹತ್ಯಾ ಬಾಂಬರ್ ವಿಭಾಗ ಈ ದಾಳಿಯ ಹೊಣೆ ಹೊತ್ತುಕೊಂಡಿದೆ. 2021 ರಲ್ಲಿ ಕಾಬೂಲ್‌ನಲ್ಲಿ ತಾಲಿಬಾನ್ ಅಧಿಕಾರಕ್ಕೆ ಮರಳಿದ ನಂತರ ಪಾಕಿಸ್ತಾನ- ಅಫ್ಘಾನಿಸ್ತಾನದ ಗಡಿಯಲ್ಲಿ ಹಿಂಸಾಚಾರ ಹೆಚ್ಚಾಗಿದೆ.
ಖೈಬರ್ ಪಖ್ತುನ್ಖ್ವಾ ಮತ್ತು ಬಲೂಚಿಸ್ತಾನ್ ಎರಡರಲ್ಲೂ ಸರ್ಕಾರದ ವಿರುದ್ಧ ಸಶಸ್ತ್ರ ಗುಂಪುಗಳು ವರ್ಷದ ಆರಂಭದಿಂದ ನಡೆಸುತ್ತಿರುವ ಹೋರಾಟದಲ್ಲಿ ಸುಮಾರು 290 ಜನರು, ಬಹುತೇಕ ಭದ್ರತಾ ಅಧಿಕಾರಿಗಳ ಹತ್ಯೆ ಮಾಡಿವೆ.
Advertisement