
ನ್ಯೂಯಾರ್ಕ್: ಪ್ರಧಾನ ಮಂತ್ರಿ ನರೇಂದ್ರ ಮೋದಿಯವರನ್ನು ಅತ್ಯಂತ ಬುದ್ಧಿವಂತ ವ್ಯಕ್ತಿ ಹಾಗೂ ನನ್ನ ಉತ್ತಮ ಸ್ನೇಹಿತ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬಣ್ಣಿಸಿದ್ದಾರೆ. ಸುಂಕ ವಿಧಿಸುವ ವಿಚಾರದಲ್ಲಿ ಭಾರತ ಮತ್ತು ನಮ್ಮ ದೇಶದ ನಡುವೆ ಮಾತುಕತೆಗಳು ಉತ್ತಮವಾಗಿ ಸಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಭಾರತ ಮತ್ತು ಇತರ ದೇಶಗಳು ಅಮೆರಿಕದ ಸರಕುಗಳ ಮೇಲೆ ವಿಧಿಸುತ್ತಿರುವ ಹೆಚ್ಚಿನ ಸುಂಕಗಳ ಮೇಲೆ ಟ್ರಂಪ್ ಅವರು ನೀಡುತ್ತಿರುವ ಹೇಳಿಕೆಗಳಿಂದಾಗಿ ಈ ಮಾತುಗಳು ಮಹತ್ವ ಪಡೆದಿವೆ. ಪ್ರಧಾನಿ ಮೋದಿ ಇತ್ತೀಚೆಗೆ ಇಲ್ಲಿಗೆ ಬಂದಿದ್ದರು, ನಾವು ಯಾವಾಗಲೂ ಉತ್ತಮ ಸ್ನೇಹಿತರಾಗಿದ್ದೇವೆ ಎಂದು ನಿನ್ನೆ ಶ್ವೇತಭವನದಲ್ಲಿ ಟ್ರಂಪ್ ಹೇಳಿದ್ದಾರೆ.
ಭಾರತವು ವಿಶ್ವದ ಅತಿ ಹೆಚ್ಚು ಸುಂಕ ವಿಧಿಸುವ ರಾಷ್ಟ್ರಗಳಲ್ಲಿ ಒಂದಾಗಿದೆ. ಇದು ಕ್ರೂರ ಕ್ರಮ. ಪ್ರಧಾನಿ ಮೋದಿಯವರು ತುಂಬಾ ಬುದ್ಧಿವಂತರು. ಹಾಗೆಯೇ ನನ್ನ ಉತ್ತಮ ಸ್ನೇಹಿತನೂ ಹೌದು. ನಮ್ಮ ಮಾತುಕತೆ ಸುಗಮವಾಗಿ ಸಾಗುತ್ತಿದೆ. ಭಾರತ ಮತ್ತು ನಮ್ಮ ದೇಶದ ನಡುವೆ ಇದು ಚೆನ್ನಾಗಿ ಕೆಲಸ ಮಾಡುತ್ತದೆ ಎಂದು ನಾನು ಭಾವಿಸುತ್ತೇನೆ ಎಂದರು.
ಮೋದಿಯವರು ಒಬ್ಬ ಉತ್ತಮ ಪ್ರಧಾನಿ. ಕಳೆದ ಫೆಬ್ರವರಿಯಲ್ಲಿ ವಾಷಿಂಗ್ಟನ್ ಡಿಸಿಗೆ ಭೇಟಿ ನೀಡಿದ್ದ ವೇಳೆ ಟ್ರಂಪ್ ಅವರೊಂದಿಗೆ ದ್ವಿಪಕ್ಷೀಯ ಚರ್ಚೆಗಳನ್ನು ನಡೆಸಿದ್ದರು. ಟ್ರಂಪ್ ಎರಡನೇ ಅವಧಿಗೆ ಅಮೆರಿಕದ ಅಧ್ಯಕ್ಷರಾಗಿ ಪ್ರಮಾಣ ವಚನ ಸ್ವೀಕರಿಸಿದ ಒಂದು ತಿಂಗಳಲ್ಲಿ ಮೋದಿ ಅಮೆರಿಕಕ್ಕೆ ಭೇಟಿ ನೀಡಿದ್ದರು.
ಭಾರತವು ಅತಿ ಹೆಚ್ಚು ಸುಂಕ ಹೊಂದಿರುವ ರಾಷ್ಟ್ರ ಎಂದು ಟ್ರಂಪ್ ಈ ಹಿಂದೆ ಹೇಳಿದ್ದರು. ಅಮೆರಿಕದ ಸರಕುಗಳ ಮೇಲೆ ಸುಂಕ ವಿಧಿಸುವ ದೇಶಗಳ ಮೇಲೆ ಸುಂಕ ವಿಧಿಸುವ ಕ್ರಮ ಏಪ್ರಿಲ್ 2 ರಿಂದ ಪ್ರಾರಂಭವಾಗುತ್ತವೆ ಎಂದು ಪುನರುಚ್ಚರಿಸಿದ್ದರು.
Advertisement