
ವಾಷಿಂಗ್ಟನ್: ಅಮೆರಿಕದಲ್ಲಿ ಮತ್ತೊಂದು ವಿಮಾನ ಅಪಘಾತ ಸಂಭವಿಸಿದ್ದು, ಪ್ರಯಾಣಿಕರ ಹೊತ್ತು ಸಾಗಿದ್ದ ಪ್ರಯಾಣಿಕರ ವಿಮಾನವೊಂದು ಜನವಸತಿ ಕಟ್ಟಡಕ್ಕೆ ಅಪ್ಪಳಿಸಿದ ಪರಿಣಾಮ ವಿಮಾನದಲ್ಲಿದ್ದ ಎಲ್ಲ ಪ್ರಯಾಣಿಕರೂ ಭೀಕರವಾಗಿ ಸಾವನ್ನಪ್ಪಿದ್ದಾರೆ.
ಅಮೆರಿಕದ ಅಯೋವಾದಿಂದ ಮಿನ್ನೇಸೋಟಕ್ಕೆ ತೆರಳುತ್ತಿದ್ದ ಸಣ್ಣ ವಿಮಾನವೊಂದು ಶನಿವಾರ ಮಿನ್ನಿಯಾಪೋಲಿಸ್ ಉಪನಗರದಲ್ಲಿರುವ ಮನೆಯೊಂದಕ್ಕೆ ಡಿಕ್ಕಿ ಹೊಡೆದಿದೆ. ಪರಿಣಾಮ ವಿಮಾನದಲ್ಲಿದ್ದ ಎಲ್ಲ ಪ್ರಯಾಣಿಕರು ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.
ವಿಮಾನವು ಡಿಕ್ಕಿ ಹೊಡೆದ ನಂತರ ಮನೆಗೆ ಬೆಂಕಿ ಹೊತ್ತಿಕೊಂಡು ಕಟ್ಟಡ ಕೂಡ ನಾಶವಾಗಿದೆ. ಆದರೆ ಅದೃಷ್ಟವಶಾತ ಮನೆಯಲ್ಲಿದ್ದ ನಿವಾಸಿಗಳಿಗೆ ಯಾವುದೇ ಹಾನಿಯಾಗಿಲ್ಲ ಎಂದು ತಿಳಿದುಬಂದಿದೆ.
ಸಿಂಗಲ್ ಎಂಜಿನ್ ಹೊಂದಿರುವ SOCATA TBM7 ವಿಮಾನದಲ್ಲಿ ಎಷ್ಟು ಜನರಿದ್ದರು ಎಂಬುದು ಇನ್ನೂ ತಿಳಿದಿಲ್ಲ. ಆದರೆ ವಿಮಾನದಲ್ಲಿದ್ದ ಪ್ರಯಾಣಿಕರಲ್ಲಿ ಯಾರೂ ಬದುಕುಳಿದಿಲ್ಲ ಎಂದು ವರದಿಯಾಗಿದೆ.
ಫೆಡರಲ್ ಏವಿಯೇಷನ್ ಅಡ್ಮಿನಿಸ್ಟ್ರೇಷನ್ (FAA) ಪ್ರಕಾರ, ವಿಮಾನವು ಡೆಸ್ ಮೊಯಿನ್ಸ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಮತ್ತೊಂದು ಮಿನ್ನಿಯಾಪೋಲಿಸ್ ಉಪನಗರದಲ್ಲಿರುವ ಅನೋಕಾ ಕೌಂಟಿ-ಬ್ಲೇನ್ ವಿಮಾನ ನಿಲ್ದಾಣಕ್ಕೆ ತೆರಳಿತ್ತು. ಆದರ ಮಾರ್ಗಮಧ್ಯೆಯೇ ವಿಮಾನ ತಾಂತ್ರಿಕ ಸಮಸ್ಯೆಯಿಂದಾಗಿ ಜನವಸತಿ ಕಟ್ಟಡಕ್ಕೆ ಢಿಕ್ಕಿಯಾಗಿದೆ. ಇನ್ನು ವಿಮಾನ ಅಪಘಾತವನ್ನು ರಾಷ್ಟ್ರೀಯ ಸಾರಿಗೆ ಸುರಕ್ಷತಾ ಮಂಡಳಿ ತನಿಖೆ ನಡೆಸುತ್ತಿದೆ.
ಸಾಮಾಜಿಕ ಮಾಧ್ಯಮದಲ್ಲಿ ವಿಮಾನ ಅಪಘಾತದ ವೀಡಿಯೊಗಳು ವ್ಯಾಪಕ ವೈರಲ್ ಆಗುತ್ತಿವೆ.
Advertisement