
ಇಸ್ಲಾಮಾಬಾದ್: ಭಾರತ ಮತ್ತು ಪಾಕಿಸ್ತಾನ ನಡುವಿನ ಇತ್ತೀಚಿನ ಮಿಲಿಟರಿ ಸಂಘರ್ಷದ ಸಂದರ್ಭದಲ್ಲಿ ಪಾಕಿಸ್ತಾನದಲ್ಲಿರುವ ಪರಮಾಣು ಸೌಲಭ್ಯದಿಂದ ವಿಕಿರಣ ಸೋರಿಕೆ ಬಗ್ಗೆ ಸಾಕಷ್ಟು ಊಹಾಪೋಹಗಳು ಉಂಟಾಗಿತ್ತು.
ಈ ಸುದ್ದಿಗಳ ಹಿನ್ನೆಲೆಯಲ್ಲಿ ಅಂತರರಾಷ್ಟ್ರೀಯ ಪರಮಾಣು ಶಕ್ತಿ ಸಂಸ್ಥೆ ಪಾಕಿಸ್ತಾನಕ್ಕೆ ಭೇಟಿ ನೀಡಿ ಪರಮಾಣು ಸೌಲಭ್ಯಗಳಿರುವ ಸ್ಥಳಗಳಲ್ಲಿ ಪರಿಶೀಲನೆ ನಡೆಸಿತ್ತು. ಈಗ ಜಾಗತಿಕ ಪರಮಾಣು ಕಾವಲು ಸಂಸ್ಥೆ ಅಂತರರಾಷ್ಟ್ರೀಯ ಪರಮಾಣು ಶಕ್ತಿ ಸಂಸ್ಥೆ (IAEA) ಪಾಕ್ ನಲ್ಲಿ ಪರಮಾಣು ಸೌಲಭ್ಯಗಳಲ್ಲಿ ವಿಕಿರಣ ಸೋರಿಕೆಯಾಗಿದೆಯೇ? ಎಂಬ ಬಗ್ಗೆ ಮಹತ್ವದ ಮಾಹಿತಿ ಬಿಡುಗಡೆ ಮಾಡಿದೆ.
ಪಾಕ್ ನ ಪರಮಾಣು ಸೌಲಭ್ಯಗಳಲ್ಲಿ ವಿಕಿರಣ ಸೋರಿಕೆಯಾಗಿಲ್ಲ ಅಥವಾ ಬಿಡುಗಡೆಯಾಗಿಲ್ಲ ಎಂದು ಜಾಗತಿಕ ಪರಮಾಣು ಕಾವಲು ಸಂಸ್ಥೆ ಅಂತರರಾಷ್ಟ್ರೀಯ ಪರಮಾಣು ಶಕ್ತಿ ಸಂಸ್ಥೆ (IAEA) ಹೇಳಿದೆ.
"IAEA ಗೆ ಲಭ್ಯವಿರುವ ಮಾಹಿತಿಯ ಆಧಾರದ ಮೇಲೆ, ಪಾಕಿಸ್ತಾನದಲ್ಲಿರುವ ಯಾವುದೇ ಪರಮಾಣು ಸೌಲಭ್ಯದಿಂದ ಯಾವುದೇ ವಿಕಿರಣ ಸೋರಿಕೆ ಅಥವಾ ಬಿಡುಗಡೆಯಾಗಿಲ್ಲ" ಎಂದು IAEA ವಕ್ತಾರರು ಪಿಟಿಐಗೆ ತಿಳಿಸಿದ್ದಾರೆ.
ಇದಕ್ಕೂ ಮೊದಲು, ವಾಯು ಕಾರ್ಯಾಚರಣೆಗಳ ಮಹಾನಿರ್ದೇಶಕ ಏರ್ ಮಾರ್ಷಲ್ ಎ ಕೆ ಭಾರ್ತಿ, ಪಾಕಿಸ್ತಾನದ ಪರಮಾಣು ಸ್ಥಾಪನೆಗಳ ನೆಲೆಯಾದ ಕಿರಾನಾ ಬೆಟ್ಟಗಳನ್ನು ಭಾರತ ಹೊಡೆದುರುಳಿಸಿದೆ ಎಂಬ ಸುದ್ದಿಗಳನ್ನು ತಿರಸ್ಕರಿಸಿದರು. "ನಾವು ಕಿರಾನಾ ಬೆಟ್ಟಗಳನ್ನು ಹೊಡೆದಿಲ್ಲ, ಅಲ್ಲಿ ಏನೇ ಇರಲಿ," ಎಂದು ಏರ್ ಮಾರ್ಷಲ್ ಭಾರ್ತಿ ಮೇ 12 ರಂದು ಮಾಧ್ಯಮಗೋಷ್ಠಿಯಲ್ಲಿ ಹೇಳಿದರು.
ಭಾರತದ ದಾಳಿಗಳು ಸರ್ಗೋಧಾದಲ್ಲಿನ ವಾಯುನೆಲೆಯ ಮೇಲೆ ದಾಳಿ ಮಾಡಿವೆ ಮತ್ತು ಕಿರಾನಾ ಬೆಟ್ಟಗಳಲ್ಲಿನ ಭೂಗತ ಪರಮಾಣು ಸಂಗ್ರಹಣಾ ಸೌಲಭ್ಯಕ್ಕೆ ಈ ನೆಲೆ ಸಂಪರ್ಕ ಹೊಂದಿದೆ ಎಂಬ ಕೆಲವು ವರದಿಗಳಿವೆ.
Advertisement