
ಬಹ್ರೇನ್: ಭಯೋತ್ಪಾದಕ ಗುಂಪುಗಳು ಅಮಾನಯಕ ಜನರನ್ನು ಕೊಂದು, ಅದನ್ನು ಸಮರ್ಥಿಸಿಕೊಳ್ಳಲು ಧರ್ಮವನ್ನು ತಪ್ಪಾಗಿ ಬಳಸಿಕೊಳ್ಳುತ್ತಿವೆ ಎಂದು ಪಾಕಿಸ್ತಾನದ ವಿರುದ್ಧ ಎಐಎಂಐಎಂ ಸಂಸದ ಅಸಾದುದ್ದೀನ್ ಒವೈಸಿ ಗುಡುಗಿದ್ದಾರೆ.
ಪಾಕ್ ಪ್ರೇರಿತ ಭಯೋತ್ಪಾದನೆಯನ್ನು ವಿವರಿಸಲು ಬಹ್ರೇನ್ ಗೆ ತೆರಳಿರುವ ಬಿಜೆಪಿ ಸಂಸದ ಬೈಜಯಂತ್ ಪಾಂಡಾ ನೇತೃತ್ವದ ಸರ್ವಪಕ್ಷ ನಿಯೋಗದಲ್ಲಿರುವ ಅಸಾದುದ್ದೀನ್ ಓವೈಸಿ, ಇಸ್ಲಾಂ ಧರ್ಮ ಭಯೋತ್ಪಾದನೆಯನ್ನು ಖಂಡಿಸುತ್ತದೆ ಮತ್ತು ಒಬ್ಬ ಅಮಾಯಕನನ್ನು ಕೊಂದರೆ ಇಡೀ ಮಾನವೀಯತೆಯನ್ನು ಕೊಂದಂತೆ ಎಂದು ಕುರಾನ್ ಸ್ಪಷ್ಟವಾಗಿ ಹೇಳುತ್ತದೆ ಎಂದು ಹೇಳಿದರು.
ಬಹ್ರೇನ್‌ನಲ್ಲಿ ಗಣ್ಯ ವ್ಯಕ್ತಿಗಳೊಂದಿಗೆ ಸಂವಾದ ನಡೆಸಿದ ಓವೈಸಿ, ಈ ಭಯೋತ್ಪಾದಕ ಸಂಘಟನೆಗಳು ಭಾರತದಲ್ಲಿನ ಅಮಾಯಕರ ಹತ್ಯೆಗಳನ್ನು ಸಮರ್ಥಿಸಿಕೊಳ್ಳುತ್ತಿವೆ. ಅವರು ಸಂದರ್ಭಾನುಸಾರವಾಗಿ ಕುರಾನ್ ಶ್ಲೋಕಗಳನ್ನು ಉಲ್ಲೇಖಿಸಿದ್ದು, ಜನರ ಹತ್ಯೆಯನ್ನು ಸಮರ್ಥಿಸಲು ಧರ್ಮವನ್ನು ಬಳಸಿದ್ದಾರೆ. ನಾವು ಅದನ್ನು ಕೊನೆಗೊಳಿಸಬೇಕಾಗಿದೆ ಎಂದರು.
ಇಸ್ಲಾಂ ಧರ್ಮ ಭಯೋತ್ಪಾದನೆಯನ್ನು ಖಂಡಿಸುತ್ತದೆ. ಒಬ್ಬ ಅಮಾಯಕನನ್ನು ಕೊಲ್ಲುವುದು ಇಡೀ ಮಾನವಕುಲವನ್ನು ಕೊಂದಂತೆ ಎಂದು ಖುರಾನ್ ಸ್ಪಷ್ಟವಾಗಿ ಹೇಳಿದೆ ಎಂದು ಅವರು ತಿಳಿಸಿದರು.
ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಮತ್ತು ಡೆಮಾಕ್ರಟಿಕ್ ಪ್ರೋಗ್ರೆಸಿವ್ ಆಜಾದ್ ಪಕ್ಷದ ಅಧ್ಯಕ್ಷ ಗುಲಾಂ ನಬಿ ಆಜಾದ್ ಮಾತನಾಡಿ, ಭಯೋತ್ಪಾದನೆ ಮಟ್ಟಹಾಕಲು ಅಂತಾರಾಷ್ಟ್ರೀಯ ಬೆಂಬಲ ಬಲಪಡಿಸಲು ಕರೆ ನೀಡಿದರು.
OIC ( Organisation of Islamic Cooperation) ಸೇರಿದಂತೆ ಎಲ್ಲಾ ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ನಮಗೆ ಬೆಂಬಲ ಬೇಕು. ನಾವು ಯಾವುದೇ ದೇಶವನ್ನು ನಾಶಪಡಿಸಲು ಬಯಸುವುದಿಲ್ಲ. ಪಾಕಿಸ್ತಾನ ಈ ಭಯೋತ್ಪಾದಕ ಮೂಲಸೌಕರ್ಯವನ್ನು ಧ್ವಂಸ ಮಾಡಲು ಮತ್ತು ಭಯೋತ್ಪಾದಕರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕೆಂದು ಬಯಸುತ್ತೇವೆ ಎಂದು ಹೇಳಿದರು.
ಇದೇ ಸಂವಾದದಲ್ಲಿ ಮಾತನಾಡಿದ ಬಿಜೆಪಿ ಸಂಸದ ಎಸ್ ಫಾಂಗ್ನಾನ್ ಕೊನ್ಯಾಕ್, ವಿಭಜನೆಯ ನಂತರ ಪಾಕಿಸ್ತಾನವು ಭಾರತದ ವಿರುದ್ಧ ತನ್ನ ಭಯೋತ್ಪಾದಕ ಚಟುವಟಿಕೆಗಳನ್ನು ಮುಂದುವರೆಸಿದೆ ಮತ್ತು ಇದಕ್ಕೆ ಹೊಣೆ ಹೊರುವಂತೆ ಪಾಕಿಸ್ತಾನಕ್ಕೆ ಸೂಚಿಸುವಂತೆ ಬಹ್ರೇನ್ ರಾಷ್ಟ್ರವನ್ನು ಒತ್ತಾಯಿಸಿದರು.
ಬಿಜೆಪಿ ಸಂಸದ ಬೈಜಯಂತ್ ಪಾಂಡಾ ನೇತೃತ್ವದ ನಿಯೋಗದಲ್ಲಿ ಸಂಸದರಾದ ನಿಶಿಕಾಂತ್ ದುಬೆ, ಫಾಂಗ್ನಾನ್ ಕೊನ್ಯಾಕ್, ರೇಖಾ ಶರ್ಮಾ, ಅಸಾದುದ್ದೀನ್ ಓವೈಸಿ; ಸತ್ನಾಮ್ ಸಿಂಗ್ ಸಂಧು, ಗುಲಾಂ ನಬಿ ಆಜಾದ್ ಮತ್ತು ರಾಯಭಾರಿ ಹರ್ಷ ಶೃಂಗ್ಲಾ ಇದ್ದಾರೆ.
Advertisement