

ಭಾರತ-ಅಮೆರಿಕ ಸಂಬಂಧಗಳನ್ನು ಬಲಪಡಿಸಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸಕಾರಾತ್ಮಕವಾಗಿದ್ದು, ಬದ್ಧತೆ ಹೊಂದಿದ್ದಾರೆ ಎಂದು ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಕ್ಯಾರೋಲಿನ್ ಲೀವಿಟ್ ಹೇಳಿದ್ದಾರೆ.
ವರದಿಗಾರರನ್ನುದ್ದೇಶಿಸಿ ಮಾತನಾಡಿದ ಲೀವಿಟ್, ಟ್ರಂಪ್ ಇತ್ತೀಚೆಗೆ ಓವಲ್ ಕಚೇರಿಯಲ್ಲಿ ದೀಪಾವಳಿ ಆಚರಿಸುವಾಗ ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ಮಾತನಾಡಿದ್ದಾರೆ ಎಂದು ಹೇಳಿದರು.
ಅಧ್ಯಕ್ಷರು ಪ್ರಧಾನಿ ಮೋದಿ ಬಗ್ಗೆ ಅಪಾರ ಗೌರವ ಹೊಂದಿದ್ದಾರೆ ಆಗಾಗ್ಗೆ ಮಾತನಾಡುತ್ತಿರುತ್ತಾರೆ. ಎರಡೂ ರಾಷ್ಟ್ರಗಳು ವ್ಯಾಪಾರದ ಬಗ್ಗೆ ಗಂಭೀರ ಚರ್ಚೆಗಳಲ್ಲಿ ತೊಡಗಿಸಿಕೊಂಡಿವೆ ಎಂದು ಹೇಳಿದರು.
ಭಾರತದಲ್ಲಿನ ಅಮೆರಿಕ ರಾಯಭಾರಿ ಸೆರ್ಗಿಯೊ ಗೋರ್ ಅವರನ್ನು ಹೊಗಳಿದ ಲೀವಿಟ್, ದೆಹಲಿಯಲ್ಲಿರುವ ವಾಷಿಂಗ್ಟನ್ ನ "ಶ್ರೇಷ್ಠ ಪ್ರತಿನಿಧಿ" ಎಂದು ಬಣ್ಣಿಸಿದರು.
ಕಳೆದ ತಿಂಗಳು, ಡೊನಾಲ್ಡ್ ಟ್ರಂಪ್ ತಮ್ಮ ಓವಲ್ ಕಚೇರಿಯಲ್ಲಿ ದೀಪಾವಳಿ ಆಚರಣೆಯನ್ನು ಆಯೋಜಿಸಿದ್ದರು. ಇದರಲ್ಲಿ ಅಮೆರಿಕಕ್ಕೆ ಭಾರತೀಯ ರಾಯಭಾರಿ ವಿನಯ್ ಕ್ವಾತ್ರಾ ಮತ್ತು ಹಲವಾರು ಪ್ರಮುಖ ಭಾರತೀಯ-ಅಮೆರಿಕನ್ ವ್ಯಾಪಾರ ಮುಖಂಡರು ಮತ್ತು ಸಮುದಾಯ ವ್ಯಕ್ತಿಗಳು ಭಾಗವಹಿಸಿದ್ದರು.
ಈ ವೇಳೆ ಟ್ರಂಪ್ ಪ್ರಧಾನಿ ಮೋದಿಗೆ ಫೋನ್ ಕರೆಯಲ್ಲಿ ದೀಪಾವಳಿ ಶುಭಾಶಯಗಳನ್ನು ತಿಳಿಸಿದ್ದರು. ಭಾರತ ಮತ್ತು ಅಮೆರಿಕ ಎರಡೂ ಜಗತ್ತನ್ನು ಭರವಸೆಯಿಂದ ಬೆಳಗಿಸುವುದನ್ನು ಮುಂದುವರಿಸುತ್ತವೆ. ಭಯೋತ್ಪಾದನೆಯ ವಿರುದ್ಧ ಒಗ್ಗಟ್ಟಿನಿಂದ ನಿಲ್ಲುತ್ತವೆ ಎಂದು ನಿರೀಕ್ಷಿಸುವುದಾಗಿ ಹೇಳಿದ್ದರು.
Advertisement