

ಭಾರತ ಮತ್ತು ಪಾಕಿಸ್ತಾನದ ನಡುವೆ ಶಾಂತಿ ಸ್ಥಾಪನೆಗೆ ಮಧ್ಯವರ್ತಿಯಾಗಿ ಕೆಲಸ ಮಾಡಿದ್ದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತೆ ಹೇಳಿಕೊಂಡಿದ್ದು, ಯುದ್ಧದ ಸಮಯದಲ್ಲಿ ಹೊಡೆದುರುಳಿಸಿದ ಯುದ್ಧ ವಿಮಾನಗಳ ಸಂಖ್ಯೆ ಏಳಲ್ಲ ಎಂಟು ಎಂದಿದ್ದಾರೆ. ಎರಡು ಪರಮಾಣು ಶಸ್ತ್ರಸಜ್ಜಿತ ರಾಷ್ಟ್ರಗಳು ಮೇ ತಿಂಗಳಲ್ಲಿ 'ಕದನ ವಿರಾಮ' ಘೋಷಿಸಿದವು ಎಂದು ನಿನ್ನೆ ಮಿಯಾಮಿಯಲ್ಲಿ ನಡೆದ ಅಮೆರಿಕ ಬ್ಯುಸಿನೆಸ್ ಫೋರಂ ವೇದಿಕೆಯಲ್ಲಿ ಪುನರುಚ್ಚರಿಸಿದರು.
ನಾನು ಅಮೆರಿಕದ ಅಧ್ಯಕ್ಷನಾಗಿ ಅಧಿಕಾರ ವಹಿಸಿಕೊಂಡ ಬಳಿಕ ಕೊಸೊವೊ-ಸೆರ್ಬಿಯಾ ಮತ್ತು ಕಾಂಗೋ-ರುವಾಂಡಾಗಳ ಜೊತೆಗೆ ಭಾರತ-ಪಾಕಿಸ್ತಾನ ಸೇರಿದಂತೆ ಎಂಟು ಯುದ್ಧಗಳನ್ನು ನಿಲ್ಲಿಸಿದ್ದೇನೆ ಎಂದ ಅವರು ಮತ್ತೊಮ್ಮೆ ತನ್ನನ್ನು ತಾನು ಜಾಗತಿಕವಾಗಿ ಶಾಂತಿಪ್ರಿಯ ಎಂದು ಬಿಂಬಿಸಿಕೊಳ್ಳಲು ಪ್ರಯತ್ನಿಸಿದರು.
'ನಾನು ಎರಡೂ ರಾಷ್ಟ್ರಗಳೊಂದಿಗೆ ವ್ಯಾಪಾರ ಒಪ್ಪಂದಗಳ ಕುರಿತು ಕೆಲಸ ಮಾಡುತ್ತಿದ್ದೆ. ಉಭಯ ರಾಷ್ಟ್ರಗಳು ಯುದ್ಧಕ್ಕೆ ಸಜ್ಜಾಗಿವೆ ಎಂಬುದನ್ನು ನಾನೊಂದು ನಿರ್ದಿಷ್ಟ ಪತ್ರಿಕೆಯ ಮುಖಪುಟದಲ್ಲಿ ಓದಿದೆ... ಏಳು ಯುದ್ಧ ವಿಮಾನಗಳನ್ನು ಹೊಡೆದುರುಳಿಸಲಾಗಿದೆ ಮತ್ತು ಎಂಟನೆಯದು ತೀವ್ರವಾಗಿ ಹಾನಿಗೊಂಡಿದೆ. ಎಂಟು ವಿಮಾನಗಳನ್ನು ಮೂಲತಃ ಹೊಡೆದುರುಳಿಸಲಾಗಿದೆ. ಇದು ಯುದ್ಧ ಮತ್ತು ಉಭಯ ದೇಶಗಳು ಅದನ್ನು ಮಾಡಲು ಹೊರಟಿದ್ದಾರೆ. ಅವು ಎರಡು ಪರಮಾಣು ರಾಷ್ಟ್ರಗಳು. 'ನೀವು ಶಾಂತಿಗೆ ಒಪ್ಪದ ಹೊರತು ನಾನು ನಿಮ್ಮೊಂದಿಗೆ ಯಾವುದೇ ವ್ಯಾಪಾರ ಒಪ್ಪಂದಗಳನ್ನು ಮಾಡಿಕೊಳ್ಳುವುದಿಲ್ಲ' ಎಂದು ನಾನು ಹೇಳಿದೆ' ಎಂದು ಟ್ರಂಪ್ ಹೇಳಿದ್ದಾರೆ.
'ಆಗ, ಎರಡೂ ರಾಷ್ಟ್ರಗಳು 'ಇಲ್ಲ. ಇದಕ್ಕೂ ಅದ್ಕೂ ಯಾವುದೇ ಸಂಬಂಧವಿಲ್ಲ...' ಎಂದು ಹೇಳಿದವು. ನಾನು, 'ಒಂದಕ್ಕೊಂದು ಸಂಬಂಧ ಇದೆ. ನೀವು ಪರಮಾಣು ಶಕ್ತಿಗಳು. ನಾನು ನಿಮ್ಮೊಂದಿಗೆ ವ್ಯಾಪಾರ ಮಾಡುವುದಿಲ್ಲ. ನೀವು ಪರಸ್ಪರ ಯುದ್ಧ ಮಾಡುತ್ತಿದ್ದರೆ ನಾವು ನಿಮ್ಮೊಂದಿಗೆ ಯಾವುದೇ ವ್ಯಾಪಾರ ಒಪ್ಪಂದ ಮಾಡಿಕೊಳ್ಳುವುದಿಲ್ಲ' ಎಂದು ಹೇಳಿದೆ. ಮರುದಿನವೇ ಎರಡೂ ದೇಶಗಳು ಶಾಂತಿ ಒಪ್ಪಂದ ಮಾಡಿಕೊಂಡಿವೆ ಎಂದು ತನಗೆ ಕರೆ ಬಂದಿತು ಎಂದು ಅವರು ಹೇಳಿದರು.
'ಆಗ ನಾನು, 'ಧನ್ಯವಾದಗಳು. ಈಗ ವ್ಯಾಪಾರ ಮಾಡೋಣ' ಎಂದು ಹೇಳಿದೆ. ಅದು ಉತ್ತಮವಲ್ಲವೇ? ಸುಂಕಗಳಿಲ್ಲದೆ, ಅದು ಎಂದಿಗೂ ಸಂಭವಿಸುತ್ತಿರಲಿಲ್ಲ' ಎಂದು ಟ್ರಂಪ್ ಹೇಳಿದರು. ಆಗ ಅಲ್ಲಿ ನೆರೆದಿದ್ದ ಜನಸಮೂಹವು ಅವರನ್ನು ಹುರಿದುಂಬಿಸಿತು.
ಅಮೆರಿಕ ಅಧ್ಯಕ್ಷರ ಹೇಳಿಕೆಯನ್ನು ಭಾರತ ನಿರಾಕರಿಸಿದೆ ಮತ್ತು ಪಾಕಿಸ್ತಾನಿ ಕಮಾಂಡರ್‌ಗಳು ತಮ್ಮ ಭಾರತ ಸಹವರ್ತಿಗಳೊಂದಿಗೆ ದಾಳಿಯನ್ನು ನಿಲ್ಲಿಸುವಂತೆ ಮನವಿ ಮಾಡಿದ ನಂತರವೇ ಮೇ 10 ರಂದು ಕದನ ವಿರಾಮ ಘೋಷಿಸಲಾಯಿತು ಎಂದು ಹೇಳಿದೆ.
ಆದಾಗ್ಯೂ, ಟ್ರಂಪ್ ತಮ್ಮ ಹೇಳಿಕೆಯನ್ನು ಪುನರಾವರ್ತಿಸುವುದನ್ನು ನಿಲ್ಲಿಸಿಲ್ಲ. ಅಮೆರಿಕದ ಮಧ್ಯಸ್ಥಿಕೆಯಲ್ಲಿ 'ದೀರ್ಘ ರಾತ್ರಿ' ನಡೆದ ಮಾತುಕತೆಯ ನಂತರ ಭಾರತ ಮತ್ತು ಪಾಕಿಸ್ತಾನ ಕದನ ವಿರಾಮಕ್ಕೆ ಒಪ್ಪಿಕೊಂಡಿವೆ ಎಂದು ಅವರು ಮೇ ತಿಂಗಳಿನಿಂದ ತಮ್ಮ ಹೇಳಿಕೆಯನ್ನು ಪುನರಾವರ್ತಿಸುತ್ತಿದ್ದಾರೆ. ವರದಿಗಳು ಅವರು ಕನಿಷ್ಠ 60 ಬಾರಿ ಭಾರತ-ಪಾಕಿಸ್ತಾನದ ಹೇಳಿಕೆಯನ್ನು ಪುನರಾವರ್ತಿಸಿದ್ದಾರೆ ಎಂದು ಸೂಚಿಸುತ್ತವೆ. ಆದರೆ, ಭಾರತವು ವಾಷಿಂಗ್ಟನ್‌ನ ಯಾವುದೇ ಹಸ್ತಕ್ಷೇಪವನ್ನು ನಿರಂತರವಾಗಿ ನಿರಾಕರಿಸಿದೆ.
Advertisement