

ಕಿನ್ಶಾಸಾ: ರಿಪಬ್ಲಿಕ್ ಆಫ್ ಕಾಂಗೋದಲ್ಲಿ ಭೀಕರ ಗಣಿ ದುರಂತ ಸಂಭವಿಸಿದ್ದು, ಭೂಕುಸಿತ ಸಂಭವಿಸಿ ಕನಿಷ್ಠ 80 ಮಂದಿ ಸಾವಿಗೀಡಾಗಿದ್ದಾರೆ ಎಂದು ಹೇಳಲಾಗಿದೆ.
ನವೆಂಬರ್ 15ರ ಶನಿವಾರ ಕಾಂಗೋ ಲುವಾಲಾಬಾ ಪ್ರಾಂತ್ಯದ ತಾಮ್ರ ಮತ್ತು ಕೋಬಾಲ್ಟ್ ಗಣಿಯಲ್ಲಿ ಸೇತುವೆ ಕುಸಿದು ಕನಿಷ್ಠ 80 ಜನರು ಸಾವನ್ನಪ್ಪಿದ್ದಾರೆ.
ಸ್ಥಳೀಯ ವರದಿಗಳ ಪ್ರಕಾರ, ಆಗ್ನೇಯ ಕಾಂಗೋದಲ್ಲಿರುವ ತಾಮ್ರ ಮತ್ತು ಕೋಬಾಲ್ಟ್ ಗಣಿಯಲ್ಲಿನ ಸೇತುವೆ ಜನದಟ್ಟಣೆಯಿಂದಾಗಿ ಕುಸಿದು ಬಿದ್ದಿದೆ. ಘಟನೆಯಲ್ಲಿ ಹಲವಾರು ಜನರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.
ದುರಂತದ ವಿಡಿಯೋವನ್ನು ಸ್ಥಳೀಯರು ತಮ್ಮ ಮೊಬೈಲ್ ನಲ್ಲಿ ಸೆರೆಹಿಡಿದಿದ್ದು, ಈ ವಿಡಿಯೋ ವ್ಯಾಪಕ ವೈರಲ್ ಆಗುತ್ತಿದೆ.
ಸೇತುವೆ ಕುಸಿತಕ್ಕೂ ಮುನ್ನ ಗುಂಡಿನ ಶಬ್ಧ
ಇನ್ನು ಅಧಿಕಾರಿಗಳ ಪ್ರಕಾರ ತಾಮ್ರದ ಗಣಿ ಪ್ರಾಂತ್ಯದಲ್ಲಿ ಗುಂಡಿನ ಶಬ್ಧ ಕೇಳಿದ್ದು, ಈ ವೇಳೆ ಅಲ್ಲಿದ್ದ ಜನರು ಭೀತಿಯಿಂದ ಸೇತುವೆ ಮೇಲೆ ತೆರಳಿದ್ದಾರೆ. ಈ ವೇಳೆ ಸೇತುವೆ ಕುಸಿದಿದೆ ಎಂದು ಹೇಳಿದ್ದಾರೆ. ಸೇತುವೆಯು ಪ್ರಾಂತ್ಯದ ಮುಲೋಂಡೊ ಪ್ರದೇಶದ ಕಲಾಂಡೊ ಗಣಿಯಲ್ಲಿದ್ದು, ದುರಂತದಲ್ಲಿ ಆರಂಭದಲ್ಲಿ 32 ಮಂದಿ ಸಾವನ್ನಪ್ಪಿದ್ದಾರೆ ಎಂದು ಹೇಳಲಾಗಿತ್ತಾದರೂ ಬಳಿಕ ಈ ಸಂಖ್ಯೆ 80ಕ್ಕೆ ಏರಿಕೆಯಾಗಿದೆ ಎಂದು ತಿಳಿದುಬಂದಿದೆ.
ಸೇತುವೆ ಪ್ರವೇಶ ನಿರಾಕರಿಸಿದ್ದ ಕಾಂಗೋ ಸರ್ಕಾರ
ಕಳೆದೊಂದು ವಾರದಿಂದ ಈ ಪ್ರಾಂತ್ಯದಲ್ಲಿ ಭಾರಿ ಮಳೆಯಾಗಿದ್ದು, ಹಲವೆಡೆ ಭೂಕುಸಿತ ಕೂಡ ಸಂಭವಿಸಿತ್ತು. ಹೀಗಾಗಿ ಮುಂಜಾಗ್ರತಾ ಕ್ರಮವಾಗಿ ಕಾಂಗೋ ಸರ್ಕಾರ ಈ ಸೇತುವೆ ಮೇಲೆ ಜನರು ತೆರಳದಂತೆ ಕಾಂಗೋ ಸರ್ಕಾರ ನಿಷೇಧ ಹೇರಿತ್ತು. ಆದರೆ ಗುಂಡಿನ ಶಬ್ಧ ಕೇಳಿ ಬಂದ ಹಿನ್ನಲೆಯಲ್ಲಿ ಭೀತಿಯಿಂದ ಜನರು ಸೇತುವೆ ಏರಿದ್ದಾರೆ. ಈ ವೇಳೆ ಸೇತುವೆ ಕುಸಿದು ದುರಂತ ಸಂಭವಿಸಿದೆ ಎಂದು ಹೇಳಲಾಗಿದೆ.
ಗಮನಾರ್ಹವಾಗಿ, ಕಾಂಗೋ ವಿಶ್ವದ ಅತಿದೊಡ್ಡ ಕೋಬಾಲ್ಟ್ ಉತ್ಪಾದಕ ದೇಶವಾಗಿದೆ. ಈ ಖನಿಜವನ್ನು ವಿದ್ಯುತ್ ವಾಹನಗಳಿಗೆ ಲಿಥಿಯಂ-ಐಯಾನ್ ಬ್ಯಾಟರಿಗಳನ್ನು ತಯಾರಿಸಲು ಬಳಸಲಾಗುತ್ತದೆ. ವರದಿಗಳ ಪ್ರಕಾರ, ಚೀನಾದ ಕಂಪನಿಗಳು ಆಫ್ರಿಕನ್ ದೇಶದಲ್ಲಿ ಉತ್ಪಾದನೆಯ ಸುಮಾರು 80 ಪ್ರತಿಶತವನ್ನು ನಿಯಂತ್ರಿಸುತ್ತವೆ ಎಂದು ಹೇಳಲಾಗಿದೆ.
Advertisement