

ಟರ್ಕಿ: ರಜೆ ಕಳೆಯಲೆಂದು ಜರ್ಮನಿಯಿಂದ ಟರ್ಕಿಗೆ ಹೋಗಿದ್ದ ನಾಲ್ವರ ಪುಟ್ಟ ಕುಟುಂಬ ಮಸಣ ಸೇರಿದೆ. ಬೀದಿ ಬದಿಯ ಆಹಾರ ಸೇವಿಸಿ ಒಂದೇ ಕುಟುಂಬದ ನಾಲ್ವರು ಪ್ರಾಣ ಕಳೆದುಕೊಂಡಿದ್ದಾರೆ.
ಇಸ್ತಾನ್‌ಬುಲ್‌ನ ಓರ್ಟಕೋಯ್ ಜಿಲ್ಲೆಯಲ್ಲಿ ಬಾಸ್ಫರಸ್ ಸೇತುವೆಯ ಬಳಿ ಇರುವ ಸ್ಟ್ರೀಟ್ನಲ್ಲಿ ಈ ಕುಟುಂಬ ಆಹಾರ ಸೇವಿಸಿತ್ತು ಎನ್ನುವ ಮಾಹಿತಿ ಲಭ್ಯವಾಗಿದೆ. ಮಹಿಳೆ ಆಕೆಯ ಪತಿ ಹಾಗೂ ಚಿಕ್ಕ ಮಕ್ಕಳಿಬ್ಬರು ಆಹಾರ ಸೇವಿಸಿದ ಬಳಿಕ ಅಸ್ವಸ್ಥರಾಗಿದ್ದರು. ಕುಟುಂಬವು ರಜೆಗಾಗಿ ಜರ್ಮನಿಯಿಂದ ಪ್ರಯಾಣಿಸಿತ್ತು ಎಂದು ಪೀಪಲ್ ವರದಿ ಮಾಡಿದೆ.
ಘಟನೆಯ ನಂತರ ನಾಲ್ವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು, 6 ವರ್ಷದ ಕದಿರ್ ಮತ್ತು 3 ವರ್ಷದ ಮಸಾಲ್ ಎಂಬ ಮಕ್ಕಳು ಸಾವನ್ನಪ್ಪಿವೆ. ಮರುದಿನವೇ ಮಕ್ಕಳ ತಾಯಿ ಸಿಗ್ಡೆಮ್ ಬೊಸೆಕ್ ಎಂಬ ಮಹಿಳೆ ಸಾವನ್ನಪ್ಪಿದ್ದಾರೆ. ತಂದೆ ಸರ್ವೆಟ್ ಬೊಸೆಕ್ ಕೂಡ ಹಲವಾರು ದಿನಗಳ ತೀವ್ರ ನಿಗಾ ಘಟಕದಲ್ಲಿ ಕಳೆದ ನಂತರ ಸೋಮವಾರ ನಿಧನರಾಗಿದ್ದಾರೆ.
ಇಸ್ತಾನ್‌ಬುಲ್‌ನ ಪ್ರಾದೇಶಿಕ ಆರೋಗ್ಯ ಮುಖ್ಯಸ್ಥ ಡಾ. ಅಬ್ದುಲ್ಲಾ ಎಮ್ರೆ ಗುನರ್ ಎಕ್ಸ್ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಅನಾರೋಗ್ಯಕ್ಕೆ ತುತ್ತಾಗಿ ಫಾತಿಹ್‌ನಲ್ಲಿ ಆಸ್ಪತ್ರೆಗೆ ದಾಖಲಾಗಿದ್ದ ಬೋಸೆಕ್ ಕುಟುಂಬದ ಎಲ್ಲರೂ ಮೃತಪಟ್ಟಿದ್ದಾರೆ. ಕೂಡಲೇ ಚಿಕಿತ್ಸೆ ನೀಡಲಾಗಿದ್ದರೂ ಕೂಡ ಕುಟುಂಬದ ಮುಖ್ಯಸ್ಥ ಸಾವನ್ನಪ್ಪಿದ್ದಾರೆ. ಬೋಸೆಕ್ ಕುಟುಂಬವು ನವೆಂಬರ್ 9 ರಂದು ಟ್ರಿಪ್ಗೆಂದು ಜರ್ಮನಿಯ ಹ್ಯಾಂಬರ್ಗ್‌ನಿಂದ ಇಸ್ತಾನ್‌ಬುಲ್‌ಗೆ ಪ್ರಯಾಣ ಬೆಳೆಸಿತ್ತು.
ಇಸ್ತಾನ್‌ಬುಲ್‌ನಲ್ಲಿ ವಿಷಪ್ರಾಶನದಿಂದ ಒಂದೇ ಕುಟುಂಬದ ನಾಲ್ವರು ಸದಸ್ಯರು ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವರನ್ನು ಬಂಧಿಸಲಾಗಿದೆ ಎಂದು ಸರ್ಕಾರಿ ಸ್ವಾಮ್ಯದ ಅನಡೋಲು ಸುದ್ದಿ ಸಂಸ್ಥೆ ಸೋಮವಾರ ತಿಳಿಸಿದೆ. ನವೆಂಬರ್ 12 ರಂದು ಕುಟುಂಬವು ಆಸ್ಪತ್ರೆಗೆ ತೆರಳಿದ್ದರು. ಅದೇ ದಿನ ಬಿಡುಗಡೆಗೊಂಡು ಮನೆಗೆ ತೆರಳಿದ್ದರು. ನವೆಂಬರ್ 13ರಂದು ನಿಧನರಾಗಿದ್ದಾರೆ. ಆದರೆ ಹಲವರು ಈ ಸಾವು ಆಹಾರದಿಂದಾಗಿ ಎಂದು ಒಪ್ಪಿಕೊಳ್ಳಲು ನಿರಾಕರಿಸಿದ್ದಾರೆ.
ಹೋಟೆಲ್ನಲ್ಲಿ ಕೀಟನಾಶಕಗಳ ಸ್ಪ್ರೇ ಮಾಡಿದ್ದು, ಅದರಿಂದ ಸಾವನ್ನಪ್ಪಿರಬಹುದು ಎಂದು ಅಂದಾಜಿಸಲಾಗಿದೆ. ಇಸ್ತಾನ್‌ಬುಲ್‌ನ ಪ್ರಾಂತೀಯ ಆರೋಗ್ಯ ನಿರ್ದೇಶನಾಲಯ ಮತ್ತು ಮುಖ್ಯ ಸಾರ್ವಜನಿಕ ಅಭಿಯೋಜಕರ ಕಚೇರಿ ತನಿಖೆ ನಡೆಸುತ್ತಿದೆ, ವಿಧಿವಿಜ್ಞಾನ ವೈದ್ಯಕೀಯ ಸಂಸ್ಥೆಯು ಕುಟುಂಬದ ಸಾವಿಗೆ ಕಾರಣ ಪತ್ತೆ ಹಚ್ಚುತ್ತಿದೆ.
Advertisement