

ಕರಾಚಿ: ಜೈಲಿನಲ್ಲಿರುವ ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರ ಸಾವಿನ ಸುತ್ತ ಹಲವು ದಿನಗಳಿಂದ ವದಂತಿ ಮತ್ತು ಊಹಾಪೋಹಗಳು ಹರಿದಾಡುತ್ತಿರುವಂತೆಯೇ ಅವರನ್ನು ಅಡಿಯಾಲ ಜೈಲಿನಲ್ಲಿ ಕೊಲ್ಲಲಾಗಿದೆ ಎಂದು ಅಫ್ಘಾನ್ ಮಾಧ್ಯಮವೊಂದು ಹೇಳಿಕೊಂಡಿದೆ. ತದನಂತರ ಅವರ ಮಗ ಖಾಸಿಮ್ ಖಾನ್ ಈಗ ಪಾಕಿಸ್ತಾನ ಸರ್ಕಾರಕ್ಕೆ ವಾರ್ನಿಂಗ್ ನೀಡಿದ್ದು, ತನ್ನ ತಂದೆ ಜೀವಂತವಾಗಿರುವುದಕ್ಕೆ ಸಾಕ್ಷಿ ಬಿಡುಗಡೆ ಮಾಡಬೇಕೆಂದು ಒತ್ತಾಯಿಸಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಖಾಸಿಮ್ ಖಾನ್, ತನ್ನ ತಂದೆಯನ್ನು ಜೈಲಿಗೆ ಹಾಕಿ 845 ದಿನಗಳು ಕಳೆದಿವೆ. ಕಳೆದ ಒಂದೂವರೆ ತಿಂಗಳಿನಿಂದ, ಅವರನ್ನು ತಮ್ಮ ಕುಟುಂಬದೊಂದಿಗೆ ಯಾವುದೇ ಸಂಪರ್ಕವಿಲ್ಲದೆ ಡೆತ್ ಸೆಲ್‌ನಲ್ಲಿ ಇರಿಸಲಾಗಿದೆ. ಕಳೆದ ಆರು ವಾರಗಳಿಂದ, ಅವರನ್ನು ಸಂಪೂರ್ಣ ಪ್ರತ್ಯೇಕತೆಯ ಡೆತ್ ಸೆಲ್‌ನಲ್ಲಿ ಏಕಾಂಗಿಯಾಗಿ ಇರಿಸಲಾಗಿದೆ ಎಂದು ಹೇಳಿದ್ದಾರೆ.
ನ್ಯಾಯಾಲಯದ ಸ್ಪಷ್ಟ ಆದೇಶಗಳ ಹೊರತಾಗಿಯೂ, ಅವರ ಸಹೋದರಿಯರಿಗೆ ಮಾತನಾಡಲು ಅವಕಾಶ ನೀಡುತ್ತಿಲ್ಲ. ಯಾವುದೇ ಫೋನ್ ಕರೆಗಳಿಲ್ಲ, ಯಾವುದೇ ಮಾತುಕತೆಗಳಿಲ್ಲ ಮತ್ತು ಅವರ ಯೋಗಕ್ಷೇಮದ ಸುದ್ದಿಗಳಿಲ್ಲ. ನನ್ನ ಸಹೋದರ ಮತ್ತು ನಾನು ನಮ್ಮ ತಂದೆಯನ್ನು ಯಾವುದೇ ರೀತಿಯಲ್ಲಿ ಸಂಪರ್ಕಿಸಲು ಸಾಧ್ಯವಾಗುತ್ತಿಲ್ಲ ಎಂದು ಖಾಸಿಮ್ ಖಾನ್ ಬರೆದುಕೊಂಡಿದ್ದಾರೆ.
ಈ ಸಂಪೂರ್ಣ ಕತ್ತಲೆ ಯಾವುದೇ ಭದ್ರತಾ ಶಿಷ್ಟಾಚಾರದ ಭಾಗವಲ್ಲ ಎಂದು ಅವರು ಆರೋಪಿಸಿದ್ದಾರೆ. ಇದು ತನ್ನ ತಂದೆಯ ಸ್ಥಿತಿಯನ್ನು ಮರೆಮಾಚಲು ಮತ್ತು ಅವರ ಕುಟುಂಬಕ್ಕೆ ಅವರು ಇರುವ ಸ್ಥಳದ ಬಗ್ಗೆ ತಿಳಿಯದಂತೆ ತಡೆಯಲು ಉದ್ದೇಶಪೂರ್ವಕ ಪ್ರಯತ್ನ ಎಂದಿದ್ದಾರೆ. ನನ್ನ ತಂದೆಯ ಸುರಕ್ಷತೆ ಮತ್ತು ಈ ಅಮಾನವೀಯತೆಯ ಪ್ರತಿಯೊಂದು ಪರಿಣಾಮಕ್ಕೂ ಪಾಕಿಸ್ತಾನಿ ಸರ್ಕಾರ ಮತ್ತು ಅದರ ಮುಖ್ಯಸ್ಥರು ಸಂಪೂರ್ಣ ಕಾನೂನು, ನೈತಿಕ ಮತ್ತು ಅಂತಾರಾಷ್ಟ್ರೀಯ ಜವಾಬ್ದಾರಿಯನ್ನು ಹೊರುತ್ತಾರೆ ಎಂಬುದನ್ನು ಸ್ಪಷ್ಟಪಡಿಸಬೇಕು. ಈ ವಿಚಾರದಲ್ಲಿ ಅಂತಾರಾಷ್ಟ್ರೀಯ ಸಮುದಾಯ ಹಾಗೂ ಅಂತಾರಾಷ್ಟ್ರೀಯ ಮಾನವ ಹಕ್ಕುಗಳ ಸಂಘಟನೆ ಮಧ್ಯ ಪ್ರವೇಶಿಸಬೇಕು ಎಂದು ಖಾಸಿಮ್ ಒತ್ತಾಯಿಸಿದ್ದಾರೆ.
ತನ್ನ ತಂದೆ ಜೀವಂತವಾಗಿದ್ದಾರೆಯೇ ಎಂಬುದನ್ನು ದೃಢಪಡಿಸಬೇಕು. ನ್ಯಾಯಾಲಯದ ಆದೇಶಗಳಿಗೆ ಅನುಗುಣವಾಗಿ ಅವರನ್ನು ಭೇಟಿಯಾಗಲು ಅವಕಾಶ ನೀಡಬೇಕು. ಅಮಾನವೀಯ ಪ್ರತ್ಯೇಕತೆ" ಕೊನೆಗೊಳಿಸಬೇಕು "ರಾಜಕೀಯ ಕಾರಣಗಳಿಗಾಗಿಯೇ ಜೈಲಿನಲ್ಲಿರುವ ಪಾಕಿಸ್ತಾನದ ಅತ್ಯಂತ ಜನಪ್ರಿಯ ರಾಜಕೀಯ ನಾಯಕನ ಬಿಡುಗಡೆ ಸೇರಿದಂತೆ ಹಲವು ಬೇಡಿಕೆಗಳನ್ನು ಈಡೇರಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.
Advertisement