
ವಾಷಿಂಗ್ಟನ್: ಇರಾನ್ ನ ಪ್ರಮುಖ ರಫ್ತು ಅಂಶಗಳಲ್ಲಿ ಒಂದಾದ ತೈಲ ವ್ಯಾಪಾರಕ್ಕೆ ನೆರವಿನ ಆರೋಪದ ಮೇರೆಗೆ ಇಬ್ಬರು ಭಾರತೀಯ ಪ್ರಜೆಗಳು ಸೇರಿದಂತೆ 50 ಕ್ಕೂ ಹೆಚ್ಚು ಕಂಪನಿಗಳು, ಹಡಗುಗಳ ಮೇಲೆ ಅಮೆರಿಕ ನಿರ್ಬಂಧ ವಿಧಿಸಿದೆ. ಖಜಾನೆ ಇಲಾಖೆಯ ವಿದೇಶಿ ಆಸ್ತಿ ನಿಯಂತ್ರಣ ಕಚೇರಿ (OFAC) ಗುರುವಾರ ನಿರ್ಬಂಧಗಳನ್ನು ಪ್ರಕಟಿಸಿದೆ.
ಇವರು ಒಟ್ಟಾಗಿ ಶತಕೋಟಿ ಡಾಲರ್ ಮೌಲ್ಯದ ಪೆಟ್ರೋಲಿಯಂ ಮತ್ತು ಪೆಟ್ರೋಲಿಯಂ ಉತ್ಪನ್ನಗಳನ್ನು ರಫ್ತು ಮಾಡಲು ಅನುವು ಮಾಡಿಕೊಟ್ಟಿದ್ದಾರೆ. ಇರಾನ್ ಆಡಳಿತಕ್ಕೆ ನಿರ್ಣಾಯಕ ಆದಾಯವನ್ನು ಒದಗಿಸಿದ್ದಾರೆ ಮತ್ತು ಅಮೆರಿಕಕ್ಕೆ ಬೆದರಿಕೆ ಹಾಕುವ ಭಯೋತ್ಪಾದಕ ಗುಂಪುಗಳಿಗೆ ಬೆಂಬಲವನ್ನು ಒದಗಿಸಿದ್ದಾರೆ ಎಂದು ಇಲಾಖೆ ಹೇಳಿಕೆಯಲ್ಲಿ ತಿಳಿಸಿದೆ.
ಇರಾನ್‌ನ ಪೆಟ್ರೋಲಿಯಂ ಮತ್ತು ಪೆಟ್ರೋಕೆಮಿಕಲ್ ರಫ್ತುಗಳನ್ನು ತಡೆಯುವ ಇಲಾಖೆಯ ಪ್ರಯತ್ನಗಳ ಭಾಗವಾಗಿ ಈ ನಿರ್ಬಂಧ ಹೇರಲಾಗಿದೆ. ಖಜಾನೆ ಇಲಾಖೆಯು ಇರಾನ್‌ನ ತೈಲ ರಫ್ತು ಯಂತ್ರದ ಪ್ರಮುಖ ಅಂಶಗಳನ್ನು ಕಿತ್ತುಹಾಕುವ ಮೂಲಕ ಇರಾನ್‌ನ ಹಣದ ಹರಿವನ್ನು ಕುಗ್ಗಿಸುತ್ತಿದೆ ಎಂದು ಖಜಾನೆ ಕಾರ್ಯದರ್ಶಿ ಸ್ಕಾಟ್ ಬೆಸೆಂಟ್ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ನಿರ್ಬಂಧ ಹಾಕಲಾದ ಭಾರತೀಯ ಪ್ರಜೆಗಳಲ್ಲಿ ವರುಣ್ ಪುಲಾ ಮತ್ತು ಸೋನಿಯಾ ಶ್ರೇಷ್ಠಾ ಸೇರಿದ್ದಾರೆ. ವರುಣಾ ಪುಲಾ ಮಾರ್ಷಲ್ ಐಲ್ಯಾಂಡ್ಸ್ ಮೂಲದ ಬರ್ತಾ ಶಿಪ್ಪಿಂಗ್ ಇಂಕ್ ಅನ್ನು ಹೊಂದಿದ್ದಾರೆ. ಇಲ್ಲಿಂದ ಕಾರ್ಯನಿರ್ವಹಿಸುವ ಹಡಗು ಜುಲೈ 2024 ರಿಂದ ಸುಮಾರು ನಾಲ್ಕು ಮಿಲಿಯನ್ ಬ್ಯಾರೆಲ್ ಇರಾನ್ ಎಲ್ ಪಿಜಿಯನ್ನು ಚೀನಾಕ್ಕೆ ಸಾಗಿಸಿದೆ. ವೆಗಾ ಸ್ಟಾರ್ ಶಿಪ್ ಮ್ಯಾನೇಜ್‌ಮೆಂಟ್ ಪ್ರೈವೇಟ್ ಲಿಮಿಟೆಡ್ ಹೊಂದಿರುವ ಸೋನಿಯಾ ಶ್ರೇಷ್ಠಾ ಅವರ ಕಂಪನಿಯ ಹಡಗು NEPTA ಜನವರಿ 2025 ರಿಂದ ಇರಾನ್ ಮೂಲದ LPG ಅನ್ನು ಪಾಕಿಸ್ತಾನಕ್ಕೆ ಸಾಗಿಸಿದೆ.
ಅಮೆರಿಕದಲ್ಲಿ ಅಥವಾ ಅಮೆರಿಕದ ವ್ಯಕ್ತಿಗಳ ಸ್ವಾಧೀನದಲ್ಲಿ ಅಥವಾ ನಿಯಂತ್ರಣದಲ್ಲಿರುವ ಎಲ್ಲಾ ನಿರ್ಬಂಧಿಸಿದ ವ್ಯಕ್ತಿಗಳ ಆಸ್ತಿಗಳನ್ನು ಬಂದ್ ಮಾಡಿ OFAC ಗೆ ವರದಿ ಮಾಡಬೇಕು ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
Advertisement