
ಬೀಜಿಂಗ್: ದೇಶದ ಮೇಲೆ ಶೇ. 100 ರಷ್ಟು ಸುಂಕ ಹಾಕುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಬೆದರಿಕೆ ಬಗ್ಗೆ ಚೀನಾದ ರಾಜಧಾನಿಯ ನಿವಾಸಿಗಳು ಶನಿವಾರ ಅಸಡ್ಡೆ, ಧಿಕ್ಕಾರವನ್ನು ವ್ಯಕ್ತಪಡಿಸಿದರು.
ನವೆಂಬರ್ 1 ಅಥವಾ ಶೀಘ್ರದಲ್ಲೇ ಚೀನಾದ ಎಲ್ಲಾ ಆಮದು ಸರಕುಗಳ ಮೇಲೆ ಶೇ. 100 ರಷ್ಟು ಹೆಚ್ಚುವರಿ ಸುಂಕ ವಿಧಿಸಲಾಗುವುದು ಎಂದು ಶುಕ್ರವಾರ ಹಠಾತ್ ಘೋಷಣೆ ಮಾಡಿದ ಡೊನಾಲ್ಡ್ ಟ್ರಂಪ್, ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರೊಂದಿಗಿನ ಮುಂಬರುವ ಸಭೆಯನ್ನು ಸಹ ಪ್ರಶ್ನಿಸಿದ್ದಾರೆ.
ಬೀಜಿಂಗ್‌ನ ಹೊಸ ರಫ್ತು ನಿಯಂತ್ರಣ ಕ್ರಮಗಳಿಗೆ ಪ್ರತೀಕಾರವಾಗಿ ಟ್ರಂಪ್ ಬೆದರಿಕೆ ಕುರಿತು ಚೀನಾದ ಅಧಿಕಾರಿಗಳು ಇನ್ನೂ ಸಾರ್ವಜನಿಕವಾಗಿ ಪ್ರತಿಕ್ರಿಯಿಸಿಲ್ಲ. ಶನಿವಾರ ಸುದ್ದಿಸಂಸ್ಥೆ AFPಗೆ ವಿದೇಶಾಂಗ ವ್ಯವಹಾರಗಳು ಮತ್ತು ವಾಣಿಜ್ಯ ಸಚಿವಾಲಯಗಳು ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ. ಆದರೆ ಸಾರ್ವಜನಿಕರು ಪ್ರತಿಕ್ರಿಯಿಸಿದ್ದಾರೆ.
ಬೀಜಿಂಗ್‌ನ ದೊಡ್ಡ ಶಾಪಿಂಗ್ ಮಾಲ್‌ನ ಹೊರಗೆ ಮಾತನಾಡಿದ ಸಾಫ್ಟ್‌ವೇರ್ ಕಂಪನಿ ಉದ್ಯೋಗಿ 48 ವರ್ಷದ ಲಿಯು ಮಿಂಗ್, ಟ್ರಂಪ್ ಘೋಷಣೆಯನ್ನು ನೋಡಿದಾಗ ನನಗೆ ಏನೂ ಅನಿಸಲಿಲ್ಲ. "ಟ್ರಂಪ್ ಯಾವಾಗಲೂ ಈ ಮಗುವಿನಂತಹ (childlike) ಅಥವಾ ವಿಚಿತ್ರವಾದ ನೀತಿ ಹೊರಡಿಸುತ್ತಿರುತ್ತಾರೆ. ನಮ್ಮನ್ನು ಸೀಮಿತಗೊಳಿಸುವ ಗುರಿ ಹೊಂದಿರುವ ಯಾವುದೇ ಯುಎಸ್ ನಿರ್ಬಂಧಗಳು ಅಥವಾ ನೀತಿಗಳಿಗೆ ಚೀನಾ ಹೆದರುವುದಿಲ್ಲ. ನಾವು ಉತ್ತಮವಾಗಿ ಕಾರ್ಯನಿರ್ವಹಿಸುವ ವಿಶ್ವಾಸ ಮತ್ತು ಸಾಮರ್ಥ್ಯವನ್ನು ಹೊಂದಿದ್ದೇವೆ ಎಂದು ತಿಳಿಸಿದರು.
ಲಿಯು ಅವರಂತೆ ಇತರರು ಕೂಡಾ ಟ್ರಂಪ್ ಅವರನ್ನು 'ಚಂಚಲ ಮನುಷ್ಯ' ನಂತೆ ನೋಡಿದರು. ಟ್ರಂಪ್ ಈಗ ಏನೋ ಒಂದು ವಿಷಯ ಹೇಳಿರುತ್ತಾರೆ. ಆದರೆ ಬಹುಶಃ ನಿದ್ರೆಯ ನಂತರ ಮತ್ತೆ ಏನೋ ಹೇಳುತ್ತಾರೆ ಎಂದು ವಿಮಾ ಕಾರ್ಯಕರ್ತೆ ಐರಿನ್ ವಾಂಗ್ ಹೇಳಿದರು. ಅಮೆರಿಕದೊಂದಿಗೆ ವ್ಯಾಪಾರ ಯುದ್ಧವು ಮತ್ತೆ ಉಲ್ಬಣಗೊಂಡರೆ ತಮ್ಮ ದೇಶದ ಆರ್ಥಿಕತೆಯ ಮೇಲೆ ಮಧ್ಯಮ ಪರಿಣಾಮವನ್ನು ಮಾತ್ರ ನಿರೀಕ್ಷಿಸಲಾಗಿದೆ ಎಂದು ಕೆಲವರು ಹೇಳಿದರು.
ಅಮೆರಿಕ ಸುಂಕ ಹೆಚ್ಚಳದಿಂದ "ಆಮದು-ರಫ್ತು ವಲಯದ ವ್ಯವಹಾರಗಳು ಅನಿವಾರ್ಯವಾಗಿ ಸ್ವಲ್ಪ ಮಟ್ಟಿಗೆ ಪರಿಣಾಮ ಬೀರಬಹುದು ಎಂದು 40 ವರ್ಷದ ಜೆಸಿಕಾ ಯು ಹೇಳಿದರು. ಆದರೆ ಚೀನಾದಲ್ಲಿ ಸಾಮಾನ್ಯ ಜನರಿಗೆ ತಕ್ಷಣ, ಭವಿಷ್ಯದಲ್ಲಿ, ದೈನಂದಿನ ಜೀವನದಲ್ಲಿ ಹೆಚ್ಚಿನ ಬದಲಾವಣೆಯಾಗುವುದಿಲ್ಲ ಎಂದು ಭಾವಿಸುತ್ತೇನೆ ಎಂದು ಅವರು ಹೇಳಿದರು.
Advertisement