
ನವದೆಹಲಿ: ಗಾಜಾದಲ್ಲಿ ಇಸ್ರೇಲ್-ಹಮಾಸ್ ನಡುವಿನ ಯುದ್ಧ ಕೊನೆಗೊಳಿಸುವ ಗುರಿಯನ್ನು ಹೊಂದಿರುವ ಈಜಿಪ್ಟ್‌ನಲ್ಲಿ ನಡೆದ ಶಾಂತಿ ಶೃಂಗಸಭೆ ಕೆಲ ವಿಭಿನ್ನ ಸನ್ನಿವೇಶಗಳಿಗೆ ವೇದಿಕೆಯಾಗಿದ್ದು, ಟರ್ಕಿ ಅಧ್ಯಕ್ಷ ಟಯ್ಯೀಪ್ ಎರ್ಡೋಗನ್ ಮತ್ತು ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ನಡುವಿನ ಸ್ವಾರಸ್ಯಕರ ಸಂಭಾಷಣೆ ಇದೀಗ ಇಂಟರ್ನೆಟ್ ನಲ್ಲಿ ವ್ಯಾಪಕ ವೈರಲ್ ಆಗುತ್ತಿದೆ.
ಹೌದು.. ಟರ್ಕಿಶ್ ಅಧ್ಯಕ್ಷ ರೆಸೆಪ್ ತಯ್ಯಿಪ್ ಎರ್ಡೊಗನ್ ಅವರ ತಂಬಾಕು ವಿರೋಧಿ ಹೋರಾಟ ಇದೀಗ ಈಜಿಪ್ಟ್ ನ ಶಾಂತಿ ಶೃಂಗಸಭೆಯನ್ನು ತಲುಪಿದ್ದು, ಇಟಲಿ ಪ್ರಧಾನಿ ಮೆಲೋನಿ ಮೂಲಕ ಎರ್ಡೋಗನ್ ರ ತಂಬಾಕು ವಿರೋಧಿ ಹೋರಾಟ ಇದೀಗ ವ್ಯಾಪಕ ವೈರಲ್ ಆಗುತ್ತಿದೆ.
ಗಾಜಾದಲ್ಲಿ ಎರಡು ವರ್ಷಗಳ ಕಾಲ ನಡೆದ ಹಿಂಸಾಚಾರ ಮತ್ತು ಯುದ್ಧವನ್ನು ಕೊನೆಗೊಳಿಸುವಲ್ಲಿ ಮತ್ತು ಇಸ್ರೇಲಿ ಒತ್ತೆಯಾಳುಗಳ ಬಿಡುಗಡೆಯಲ್ಲಿ ಪ್ರಮುಖ ಪ್ರಗತಿ ಕಂಡ ಹಿನ್ನೆಲೆಯಲ್ಲಿ ಸೋಮವಾರ ನಡೆದ ಗಾಜಾ ಶಾಂತಿ ಶೃಂಗಸಭೆಗಾಗಿ ಹಲವಾರು ವಿಶ್ವ ನಾಯಕರು ಈಜಿಪ್ಟ್‌ನಲ್ಲಿ ಒಟ್ಟುಗೂಡಿದರು.
ಈ ಶಾಂತಿ ಶೃಂಗಸಭೆಯಲ್ಲಿ ಜಾರ್ಜಿಯಾ ಮೆಲೋನಿ ಅವರನ್ನು ಭೇಟಿ ಮಾಡಿದ ಎರ್ಡೊಗನ್ ಅವರ ಕೈ ಕುಲುಕುತ್ತಾ ಧೂಮಪಾನವನ್ನು ನಿಲ್ಲಿಸಲು ಮನವೊಲಿಸಲು ಯತ್ನಿಸಿದರು. ಈ ವೇಳೆ ಅವರ ಪ್ರಶ್ನೆಗೆ ನಕ್ಕ ಮೆಲೋನಿ ಅದು ಅಸಾಧ್ಯ.. ನಾನು ಯಾರನ್ನೂ ಕೊಲ್ಲಲು ಬಯಸುವುದಿಲ್ಲ ಎಂದು ಹಾಸ್ಯ ಚಟಾಕಿ ಹಾರಿಸಿದರು.
ಆಗಿದ್ದೇನು?
ಶೃಂಗಸಭೆಯಲ್ಲಿ ಜಾರ್ಜಿಯಾ ಮೆಲೋನಿ ಅವರನ್ನು ಭೇಟಿ ಮಾಡಿದ ಎರ್ಡೋಗನ್ ಆತ್ಮೀಯವಾಗಿ ಉಭಯ ಕುಶಲೋಪರಿ ವಿಚಾರಿಸಿದರು. ಬಳಿಕ ಎರ್ಡೊಗನ್ ಮೆಲೋನಿ ಅವರ ಧೂಮಪಾನ ಅಭ್ಯಾಸದ ಕುರಿತು ಮಾತನಾಡಿದರು. ಮೆಲೋನಿ ಅವರಿಗೆ 'ನೀವು ತುಂಬಾ ಚೆನ್ನಾಗಿ ಕಾಣುತ್ತೀರಿ. ಆದರೆ ನಾನು ನಿಮ್ಮನ್ನು ಧೂಮಪಾನವನ್ನು ನಿಲ್ಲಿಸುವಂತೆ ಮಾಡಬೇಕು' ಎಂದು ಎರ್ಡೋಗನ್ ಹೇಳಿದರು.
ಈ ವೇಳೆ ಪಕ್ಕದಲ್ಲೇ ಇದ್ದ ಫ್ರಾನ್ಸ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಅದು ಸಾಧ್ಯವೇ ಇಲ್ಲ ಎನ್ನುವ ರೀತಿಯಲ್ಲಿ ನಕ್ಕರು.
ನಾನು ಯಾರನ್ನೂ ಕೊಲ್ಲಲು ಬಯಸುವುದಿಲ್ಲ ಎಂದ ಮೆಲೋನಿ
ಇತ್ತ ಮೆಲೋನಿ ಮ್ಯಾಕನ್ ರ ನಗುವನ್ನು ಅರ್ಥ ಮಾಡಿಕೊಂಡ ಮೆಲೋನಿ 'ಅದು ಅಸಾಧ್ಯ..' ಎಂದು ನಗುತ್ತಾ ಹೇಳಿದರು. ಅಲ್ಲದೆ ಎರ್ಡೋಗನ್ ಪ್ರಸ್ತಾವನೆಯನ್ನು ನಯವಾಗಿಯೇ ತಿರಸ್ಕರಿಸಿದರು. ಮಾತ್ರವಲ್ಲದೇ 'ತಾವು ಧೂಮಪಾನವನ್ನು ತ್ಯಜಿಸುವುದರಿಂದ ಕಡಿಮೆ ಬೆರೆಯುವವಳಾಗಬಹುದು. ಸ್ನೇಹಿತರ ಸಂಖ್ಯೆ ಕುಸಿಯಬಹುದು. ನಾನು ಯಾರನ್ನೂ ಕೊಲ್ಲಲು ಬಯಸುವುದಿಲ್ಲ' ಎಂದು ಹೇಳುವ ಮೂಲಕ ಮೆಲೋನಿ ಕೂಡ ಹಾಸ್ಯ ಚಟಾಕಿ ಹಾರಿಸಿದರು.
ಈ ಹಿಂದೆ ತಮ್ಮ ಸರಣಿ ಸಂದರ್ಶನಗಳಲ್ಲಿ ಇದೇ ಧೂಮಪಾನ ಅಭ್ಯಾಸದ ಕುರಿತು ಮಾತನಾಡಿರುವ ಮೆಲೋನಿ, '13 ವರ್ಷಗಳ ಕಾಲ ಧೂಮಪಾನವನ್ನು ತ್ಯಜಿಸಿದ್ದೆ. ಆದರೆ ನಂತರ ಮತ್ತೆ ಧೂಮಪಾನ ಪ್ರಾರಂಭಿಸಿದ್ದೇನೆ' ಎಂದು ಒಪ್ಪಿಕೊಂಡಿದ್ದಾರೆ. ಅಲ್ಲದೆ 'ಧೂಮಪಾನವು ಟುನೀಷಿಯನ್ ಅಧ್ಯಕ್ಷ ಕೈಸ್ ಸಯೀದ್ ಸೇರಿದಂತೆ ಇತರ ರಾಜಕಾರಣಿಗಳೊಂದಿಗೆ ತನ್ನ ಬಾಂಧವ್ಯಕ್ಕೆ ಸಹಾಯ ಮಾಡಿದೆ ಎಂದು ಮೆಲೋನಿ ಅವರು ಒಪ್ಪಿಕೊಂಡಿದ್ದಾರೆ ಎಂದು ಕೆಲ ವರದಿಗಳು ಕೂಡ ಉಲ್ಲೇಖಿಸಿವೆ.
ಟರ್ಕಿಯಲ್ಲಿ ತಂಬಾಕು ನಿಷೇಧ
ಟರ್ಕಿಯ ಪ್ರಮುಖ ತಂಬಾಕು ನಿಯಂತ್ರಣ ಕಾನೂನು 4207 ಆಗಿದ್ದು, ಇದನ್ನು 1996 ರಲ್ಲಿ ಜಾರಿಗೆ ತರಲಾಯಿತು ಮತ್ತು ಹಲವಾರು ಬಾರಿ ತಿದ್ದುಪಡಿ ಮಾಡಲಾಗಿದೆ. ಇದು ಸುತ್ತುವರಿದ ಸಾರ್ವಜನಿಕ ಸ್ಥಳಗಳು ಮತ್ತು ಕೆಲಸದ ಸ್ಥಳಗಳಲ್ಲಿ ಧೂಮಪಾನವನ್ನು ನಿಷೇಧಿಸುತ್ತದೆ.
18 ವರ್ಷದೊಳಗಿನ ಅಪ್ರಾಪ್ತ ವಯಸ್ಕರಿಗೆ ತಂಬಾಕು ಮಾರಾಟವನ್ನು ನಿಷೇಧಿಸುತ್ತದೆ ಮತ್ತು ಜಾಹೀರಾತು, ಪ್ರಚಾರ ಮತ್ತು ಪ್ಯಾಕೇಜಿಂಗ್‌ನ ನಿಯಮಗಳನ್ನು ಒಳಗೊಂಡಿದೆ. ಈ ನಿಯಮ ಮುರಿದರೆ ವಿವಿಧ ಕ್ರಮಗಳು ಮತ್ತು ಜಾರಿ ಕ್ರಮಗಳ ಮೂಲಕ ಪರೋಕ್ಷ ಹೊಗೆಗೆ ಒಡ್ಡಿಕೊಳ್ಳುವುದನ್ನು ಕಡಿಮೆ ಮಾಡುವ ಮೂಲಕ ಮತ್ತು ತಂಬಾಕು ಬಳಕೆಯನ್ನು ನಿರುತ್ಸಾಹಗೊಳಿಸುವ ಮೂಲಕ ಸಾರ್ವಜನಿಕ ಆರೋಗ್ಯವನ್ನು ರಕ್ಷಿಸುವುದು ಈ ಕಾನೂನು ಉದ್ದೇಶವಾಗಿದೆ.
ಮೆಲೋನಿ ಹೊಗಳಿದ ಟ್ರಂಪ್
ಇದೇ ವೇಳೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕೂಡ ಜಾರ್ಜಿಯಾ ಮೆಲೋನಿ ಅವರನ್ನು ಹಾಡಿ ಹೊಗಳಿದರು. ತಮ್ಮ ಭಾಷಣದ ಸಮಯದಲ್ಲಿ, ಟ್ರಂಪ್ ತಮ್ಮ ಬೆನ್ನಿಗೆ ನಿಂತಿದ್ದ ಹಲವಾರು ಜಾಗತಿಕ ನಾಯಕರನ್ನು ಶ್ಲಾಘಿಸಿದರು. ಅಲ್ಲದೆ ಶೃಂಗಸಭೆಯಲ್ಲಿ ಅವರ ಉಪಸ್ಥಿತಿಗೆ ಧನ್ಯವಾದಗಳನ್ನು ಅರ್ಪಿಸಿದರು. ಈ ವೇಳೆ ಜಾರ್ಜಿಯಾ ಮೆಲೋನಿ ಅವರ ಸರದಿ ಬಂದಾಗ ಟ್ರಂಪ್ ಅವರ ಸೌಂದರ್ಯವನ್ನು ಹೊಗಳಿ ಅಚ್ಚರಿ ಮೂಡಿಸಿದರು.
"ನಮ್ಮಲ್ಲಿ ಒಬ್ಬ ಮಹಿಳೆ, ಒಬ್ಬ ಯುವತಿ ಇದ್ದಾರೆ... ಆದರೆ ನನಗೆ ಆ ರೀತಿ ಹೇಳಲು ಅನುಮತಿ ಇಲ್ಲ. ಏಕೆಂದರೆ ನೀವು ಅವರನ್ನು ಸುಂದರ ಯುವತಿ ಎಂದು ಹೇಳಿದರೆ ಅದು ಸಾಮಾನ್ಯವಾಗಿ ನಿಮ್ಮ ರಾಜಕೀಯ ಜೀವನದ ಅಂತ್ಯವಾಗಿರುತ್ತದೆ" ಎಂದು ಟ್ರಂಪ್ ಹಾಸ್ಯ ಚಟಾಕಿ ಹಾರಿಸಿದರು.
ಮುಂದುವರೆದು ಒಬ್ಬ ಮಹಿಳೆಗೆ ಅಂತಹ ಹೇಳಿಕೆ ನೀಡಿದರೆ ಅದು ಯುನೈಟೆಡ್ ಸ್ಟೇಟ್ಸ್‌ನಲ್ಲಿ ವ್ಯಕ್ತಿಯ ರಾಜಕೀಯ ಜೀವನದ ಅಂತ್ಯ ಎಂದರ್ಥ. ಅದಾಗ್ಯೂ ನಾನು ನನ್ನ ಅವಕಾಶಗಳನ್ನು ತೆಗೆದುಕೊಳ್ಳುತ್ತೇನೆ. ಅಲ್ಲಿ ಅವರು ಇದ್ದಾರೆ, ನೀವು ಸುಂದರಿ ಎಂದು ಕರೆಯಲು ಅಭ್ಯಂತರವಿಲ್ಲ, ಸರಿಯೇ? ಏಕೆಂದರೆ ನೀವು ಸುಂದರವಾಗಿದ್ದೀರಿ. ಬಂದಿದ್ದಕ್ಕಾಗಿ ತುಂಬಾ ಧನ್ಯವಾದಗಳು, ಅದನ್ನು ಪ್ರಶಂಸಿಸಿ" ಎಂದು ಟ್ರಂಪ್ ಹೇಳಿದರು.
ಮೆಲೋನಿ ಮಿಶ್ರ ಪ್ರತಿಕ್ರಿಯೆ
ಇನ್ನು ಟ್ರಂಪ್ ರ ಈ ಮಾತುಗಳು ಜಾರ್ಜಿಯಾ ಮೆಲೋನಿ ಅವರಿಗೆ ರುಚಿಸಿದಂತೆ ಕಂಡು ಬರಲಿಲ್ಲ. ಅವರ ಮುಖದಲ್ಲಿ ಮಿಶ್ರ ಪ್ರತಿಕ್ರಿಯೆಗಳು ಕಂಡುಬಂತು ಎಂದು ಕೆಲ ನೆಟ್ಟಗರು ಕಮೆಂಟ್ ಮಾಡಿದ್ದಾರೆ.
Advertisement