
ವಾಷಿಂಗ್ಟನ್: ಭಾರತೀಯ ಮೂಲದ ಖ್ಯಾತ ವಿದೇಶಾಂಗ ನೀತಿ ಹಾಗೂ ರಕ್ಷಣಾ ತಂತ್ರಜ್ಞ ಆಶ್ಲೇ ಜೆ ಟೆಲ್ಲಿಸ್ ಅವರನ್ನು ಬಂಧಿಸಲಾಗಿದೆ. ಅಮೆರಿಕ ಸರ್ಕಾರದ ರಹಸ್ಯ ದಾಖಲೆಗಳನ್ನು ಅನಧಿಕೃತವಾಗಿ ತಮ್ಮ ಬಳಿ ಸಂಗ್ರಹಿಸಿದ್ದ ಆರೋಪದೊಂದಿಗೆ ಅವರನ್ನು ಆರೆಸ್ಟ್ ಮಾಡಲಾಗಿದೆ ಎಂದು ವರ್ಜೀನಿಯಾದ ಪೂರ್ವ ಜಿಲ್ಲೆಯ ಯುಎಸ್ ಅಟಾರ್ನಿ ಕಚೇರಿ ತಿಳಿಸಿದೆ.
ಕಾರ್ನೆಗೀ ಎಂಡೋಮೆಂಟ್ ಫಾರ್ ಇಂಟರ್ನ್ಯಾಷನಲ್ ಪೀಸ್‌ನಲ್ಲಿ ಟಾಟಾ ಸ್ಟ್ರಾಟೆಜಿಕ್ ಅಫೇರ್ಸ್ ಅಧ್ಯಕ್ಷರಾಗಿರುವ 64 ವರ್ಷದ ಟೆಲ್ಲಿಸ್ ಅವರನ್ನು ನಿರ್ಬಂಧಿತ ಸರ್ಕಾರಿ ಸಾಮಗ್ರಿಗಳನ್ನು ನಿರ್ವಹಿಸಿದ್ದಕ್ಕಾಗಿ ಫೆಡರಲ್ ತನಿಖೆಯ ನಂತರ ವಾರಾಂತ್ಯದಲ್ಲಿ ಬಂಧಿಸಲಾಗಿದೆ. ಟೆಲ್ಲಿಸ್ ಅವರು ಯುಎಸ್ ಕಾಯ್ದೆಯಾಗಿರುವ 18 USC § 793(e) ಅನ್ನು ಉಲ್ಲಂಘಿಸಿದ್ದಾರೆ ಎಂದು ನ್ಯಾಯಾಲಯದಲ್ಲಿ ಆರೋಪಿಸಲಾಗಿದೆ.
ಈ ಕಾಯ್ದೆಯಡಿ ರಕ್ಷಣಾ ಸಂಬಂಧಿತ ದಾಖಲೆಗಳನ್ನು ಅನಧಿಕೃತವಾಗಿ ಹೊಂದಿರುವುದು ಅಥವಾ ಉಳಿಸಿಕೊಳ್ಳುವುದು ಕಾನೂನು ಬಾಹಿರ ಅಪರಾಧವಾಗಿದೆ.ಟೆಲ್ಲಿಸ್ ಸುರಕ್ಷಿತ ಸ್ಥಳಗಳಿಂದ ವರ್ಗೀಕೃತ ದಾಖಲೆಗಳನ್ನು ತೆಗೆದು ಚೀನಾದ ಅಧಿಕಾರಿಗಳನ್ನು ಭೇಟಿ ಮಾಡಿದ ಆರೋಪವೂ ಕೇಳಿಬಂದಿದೆ. ಈ ಬಗ್ಗೆ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.
ಅಮೆರಿಕದ ಅಟಾರ್ನಿ ಲಿಂಡ್ಸೆ ಹ್ಯಾಲಿಗನ್ ಅವರು ಸುದ್ದಿಗೋಷ್ಠಿ ನಡೆಸಿ ಈ ಆರೋಪ ಹೊರಿಸಿದ್ದು, ಟೆಲ್ಲೀಸ್ ಅವರ ಈ ಆಪಾದಿತ ನಡವಳಿಕೆಯು ನಮ್ಮ ನಾಗರಿಕರ ಸುರಕ್ಷತೆ ಮತ್ತು ಭದ್ರತೆಗೆ ಗಂಭೀರ ಅಪಾಯವನ್ನುಂಟುಮಾಡಿದೆ ಎಂದು ಹ್ಯಾಲಿಗನ್ ಹೇಳಿದ್ದಾರೆ.
ಈ ಆರೋಪ ಸಾಬೀತಾದರೆ, ಟೆಲ್ಲಿಸ್ ಅವರಿಗೆ 10 ವರ್ಷಗಳವರೆಗೆ ಜೈಲು ಶಿಕ್ಷೆ, $250,000 ಲಕ್ಷ ಡಾಲರ್ ದಂಡ ಮತ್ತು ಅವರು ಹೊಂದಿರುವ ಸಾಮಗ್ರಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಬಹುದು. ಪ್ರಸ್ತುತ ಈ ದೂರು ಒಂದು ಆರೋಪವಾಗಿದ್ದು, ತನಿಖೆಯ ನಂತರ ಅವರು ತಪ್ಪಿತಸ್ಥನೆಂದು ಸಾಬೀತಾಗುವವರೆಗೂ ಟೆಲ್ಲಿಸ್ ನಿರಪರಾಧಿ ಎಂದು ಭಾವಿಸಲಾಗುತ್ತದೆ ಎಂದು ಸರ್ಕಾರ ಹೇಳಿದೆ.
ಟೆಲ್ಲಿಸ್ ಅಮೆರಿಕ ಸರ್ಕಾರದೊಳಗೆ ಹಲವಾರು ಪ್ರಭಾವಶಾಲಿ ಇಲಾಖೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ಅಲ್ಲಿನ ರಾಜಕೀಯ ವ್ಯವಹಾರಗಳ ಅಧೀನ ಕಾರ್ಯದರ್ಶಿಯ ಹಿರಿಯ ಸಲಹೆಗಾರರಾಗಿಯೂ ಅವರು ಸೇವೆ ಸಲ್ಲಿಸಿದ್ದಾರೆ. ಜಾರ್ಜ್ ಡಬ್ಲ್ಯೂ. ಬುಷ್ ಅಧ್ಯಕ್ಷರಾಗಿದ್ದ ವೇಳೆ ರಾಷ್ಟ್ರೀಯ ಭದ್ರತಾ ಮಂಡಳಿಯಲ್ಲಿ ಅಧ್ಯಕ್ಷರ ವಿಶೇಷ ಸಹಾಯಕರಾಗಿ ಮತ್ತು ಕಾರ್ಯತಂತ್ರದ ಯೋಜನೆ ಮತ್ತು ನೈಋತ್ಯ ಏಷ್ಯಾದ ಹಿರಿಯ ನಿರ್ದೇಶಕರಾಗಿಯೂ ಸೇವೆ ಸಲ್ಲಿಸಿದ್ದರು.
Advertisement