
ಢಾಕಾ: ಬಾಂಗ್ಲಾದೇಶ ರಾಜಧಾನಿ ಢಾಕಾದಲ್ಲಿರುವ ಹಜರತ್ ಶಹಜಲಾಲ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಸರಕು ವಿಭಾಗದಲ್ಲಿ ಶನಿವಾರ ಬೆಂಕಿ ಕಾಣಿಸಿಕೊಂಡಿದ್ದು, ಎಲ್ಲಾ ವಿಮಾನಗಳ ಹಾರಾಟವನ್ನು ಸ್ಥಗಿತಗೊಳಿಸಲಾಗಿದೆ ಎಂದು ಬಿಡಿನ್ಯೂಸ್ ವರದಿ ಮಾಡಿದೆ.
ಅಧಿಕಾರಿಗಳ ಪ್ರಕಾರ, ಇಂದು ಮಧ್ಯಾಹ್ನ 2:30 ರ ಸುಮಾರಿಗೆ ಗೇಟ್ 8 ಬಳಿ ಬೆಂಕಿ ಕಾಣಿಸಿಕೊಂಡಿದ್ದು, ದಟ್ಟವಾದ ಹೊಗೆ ಇಡೀ ವಿಮಾನ ನಿಲ್ದಾಣವನ್ನು ಆವರಿಸಿದೆ.
ಬೆಂಕಿಯನ್ನು ನಿಯಂತ್ರಿಸಲು ಆರಂಭದಲ್ಲಿ ಒಂಬತ್ತು ಅಗ್ನಿಶಾಮಕ ದಳಗಳನ್ನು ನಿಯೋಜಿಸಲಾಗಿತ್ತು. ಇತರ ಘಟಕಗಳಿಂದ ಹದಿನೈದು ಅಗ್ನಿ ಶಾಮಕ ವಾಹನಗಳು ಸ್ಥಳಕ್ಕೆ ಆಗಮಿಸಿವೆ ಎಂದು ಅಗ್ನಿಶಾಮಕ ಸೇವೆಗಳ ವಕ್ತಾರ ತಲ್ಹಾ ಬಿನ್ ಜಾಶಿಮ್ ಹೇಳಿದ್ದಾರೆ.
"ಸರಕು ವಿಮಾನದಲ್ಲಿ ಸಂಭವಿಸಿದ ಅಗ್ನಿ ಅವಘಢದಿಂದಾಗಿ ಇಡೀ ವಿಮಾನ ನಿಲ್ದಾಣದಲ್ಲಿ ದಟ್ಟ ಹೊಗೆ ಆವರಿಸಿಕೊಂಡಿದ್ದು, ಮುಂಜಾಗ್ರತಾ ಕ್ರಮವಾಗಿ ಢಾಕಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಎಲ್ಲಾ ವಿಮಾನ ಸೇವೆಗಳನ್ನು ರದ್ದುಗೊಳಿಸಲಾಗಿದೆ" ಎಂದು ಬಿಮಾನ್ ಬಾಂಗ್ಲಾದೇಶ ಏರ್‌ಲೈನ್ಸ್ ವಕ್ತಾರ ಕೌಸರ್ ಮಹಮೂದ್ ಅವರು ತಿಳಿಸಿದ್ದಾರೆ.
"ನಮ್ಮ ಎಲ್ಲಾ ವಿಮಾನಗಳು ಸುರಕ್ಷಿತವಾಗಿವೆ ಎಂದು ದೃಢಪಡಿಸಿದ್ದು. ಯಾವುದೇ ಸಾವು, ನೋವುಗಳು ವರದಿಯಾಗಿಲ್ಲ" ಎಂದು ವಿಮಾನ ನಿಲ್ದಾಣದ ವಕ್ತಾರರು ಹೇಳಿರುವುದಾಗಿ ದಿ ಡೈಲಿ ಸ್ಟಾರ್ ವರದಿ ಮಾಡಿದೆ.
ಬಾಂಗ್ಲಾದೇಶ ನಾಗರಿಕ ವಿಮಾನಯಾನ ಪ್ರಾಧಿಕಾರ, ಅಗ್ನಿಶಾಮಕ ಸೇವೆ ಮತ್ತು ಬಾಂಗ್ಲಾದೇಶ ವಾಯುಪಡೆಯ ಎರಡು ಅಗ್ನಿಶಾಮಕ ಘಟಕಗಳು ಸಹ ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿವೆ ಎಂದು ಇಂಟರ್-ಸರ್ವೀಸಸ್ ಪಬ್ಲಿಕ್ ರಿಲೇಶನ್ಸ್(ISPR) ತಿಳಿಸಿದೆ.
ಬಾಂಗ್ಲಾದೇಶ ಗಡಿ ಕಾವಲು ಪಡೆಯ (ಬಿಜಿಬಿ) ಎರಡು ತುಕಡಿಗಳು ರಕ್ಷಣಾ ಕಾರ್ಯಾಚರಣೆಯಲ್ಲಿ ಭಾಗವಹಿಸಿವೆ.
Advertisement