
ಟೆಲ್ ಅವೀವ್: ಇತ್ತೀಚೆಗಷ್ಟೇ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿರಾಮ ಹಾಕಿಸಿದ್ದ ಇಸ್ರೇಲ್-ಹಮಾಸ್ ಯುದ್ಧ ಪುನಾರಂಭಗೊಂಡಿದ್ದು, ಇದರಿಂದ ಕೆಂಡಾಮಂಡಲರಾಗಿರುವ ಟ್ರಂಪ್ ಹಮಾಸ್ ಸಂಘಟನೆಯನ್ನು ಬುಡಸಹಿತ ಕಿತ್ತು ಬಿಸಾಡುವ ಎಚ್ಚರಿಕೆ ನೀಡಿದ್ದಾರೆ.
ಹೌದು.. ಡೊನಾಲ್ಡ್ ಟ್ರಂಪ್ ನಿಲ್ಲಿಸಿದ್ದ ಇಸ್ರೇಲ್-ಗಾಜಾ ಯುದ್ಧ 9 ದಿನದಲ್ಲೆ ಮತ್ತೆ ಶುರುವಾಗಿದೆ. ಭಾನುವಾರ ಇಸ್ರೇಲ್ ಸೇನೆಯು ಗಾಜಾದ ಹಲವೆಡೆ ದಾಳಿ ನಡೆಸಿದ್ದು, ಈ ವೇಳೆ 11ಕ್ಕೂ ಅಧಿಕ ಪ್ಯಾಲೆಸ್ತೀನಿಯರು ಮೃತಪಟ್ಟಿದ್ದಾರೆ ಎನ್ನಲಾಗಿದೆ.
ರಾಫಾ ಪಟ್ಟಣ ಸೇರಿ ದಕ್ಷಿಣ ಗಾಜಾದ ಹಲವೆಡೆ ವೈಮಾನಿಕ ದಾಳಿ ನಡೆಸಲಾಗಿದೆ ಎಂದು ಸ್ವತಃ ಇಸ್ರೇಲ್ ಸೇನೆಯೇ ಹೇಳಿಕೊಂಡಿದೆ. ಇನ್ನು ಹಮಾಸ್ ಉಗ್ರರು ದಾಳಿ ನಡೆಸಿದ್ದರಿಂದಲೇ ತಾನು ಈ ಪ್ರತಿದಾಳಿ ನಡೆಸಿದ್ದಾಗಿ ಇಸ್ರೇಲ್ ಹೇಳಿಕೊಂಡಿದೆ.
ಗಾಜಾದ ಹಲವು ಭಾಗಗಳಲ್ಲಿ ಇಸ್ರೇಲ್ ವಾಯು ದಾಳಿ ನಡೆಸಿದ್ದು, ಇದಕ್ಕೂ ಮೊದಲು ಹಮಾಸ್ ದಾಳಿ ನಡೆಸಿತ್ತು ಎಂದು ಇಸ್ರೇಲ್ ಹೇಳಿಕೊಂಡಿದೆ.
ಗಾಜಾದ ರಾಫಾ ಪ್ರದೇಶವು ಇನ್ನೂ ಇಸ್ರೇಲ್ ನಿಯಂತ್ರಣದಲ್ಲೇ ಇದ್ದು, ಈ ಪ್ರದೇಶದಲ್ಲಿ ಹಮಾಸ್ ಸಂಘಟನೆಯು ಇಸ್ರೇಲ್ ಸೇನಾ ತುಕಡಿ ಮೇಲೆ ದಾಳಿ ನಡೆಸಿದೆ ಎಂದು ಇಸ್ರೇಲ್ ಆರೋಪಿಸಿದೆ.
ಬುಡ ಸಹಿತ ಕಿತ್ತು ಬಿಸಾಡುತ್ತೇವೆ
ಇನ್ನು ಕದನ ವಿರಾಮ ಉಲ್ಲಂಘನೆ ಕುರಿತು ಇಸ್ರೇಲ್ ಅಮೆರಿಕಕ್ಕೆ ಮಾಹಿತಿ ನೀಡಿದ್ದು, ಈ ಕುರಿತು ಪ್ರತಿಕ್ರಿಯೆ ನೀಡಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, 'ಹಮಾಸ್ ಕದನ ವಿರಾಮ ಉಲ್ಲಂಘಿಸಿದರೆ ಅದನ್ನು ನಿರ್ಮೂಲನೆ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.
"ನಾವು ಹಮಾಸ್‌ನೊಂದಿಗೆ ಒಪ್ಪಂದ ಮಾಡಿಕೊಂಡಿದ್ದೇವೆ, ಅವರು ತುಂಬಾ ಒಳ್ಳೆಯವರಾಗಿರುತ್ತಾರೆ, ಒಳ್ಳೆಯ ರೀತಿಯಲ್ಲಿ ಅವರು ವರ್ತಿಸುತ್ತಾರೆ, ಅವರು ಒಳ್ಳೆಯವರಾಗಿರುತ್ತಾರೆ. ಒಂದು ವೇಳೆ ಅವರು ಹಾಗೆ ನಡೆದುಕೊಳ್ಳದಿದ್ದರೆ, ನಾವು ಹೋಗುತ್ತೇವೆ ಮತ್ತು ನಾವು ಅವರನ್ನು ನಿರ್ಮೂಲನೆ ಮಾಡುತ್ತೇವೆ. ಇದು ಅವರಿಗೆ ತಿಳಿದಿದೆ' ಎಂದು ಸೋಮವಾರ ಶ್ವೇತಭವನದಲ್ಲಿ ವರದಿಗಾರರಿಗೆ ಟ್ರಂಪ್ ತಿಳಿಸಿದರು.
ಅಮೆರಿಕ ಉಪಾಧ್ಯಕ್ಷ ಜೆಡಿ ವ್ಯಾನ್ಸ್ ಮಂಗಳವಾರ ಗಾಜಾದಲ್ಲಿ ನಡೆದ ಒಪ್ಪಂದವನ್ನು ಬಲಪಡಿಸಲು ಈ ಪ್ರದೇಶಕ್ಕೆ ಭೇಟಿ ನೀಡಿದ್ದರು. ಇನ್ನು ವಾರಾಂತ್ಯದ ಹಿಂಸಾಚಾರದ ಹೊರತಾಗಿಯೂ ಅಮೆರಿಕ ಬೆಂಬಲಿತ ಕದನ ವಿರಾಮಕ್ಕೆ ಎರಡೂ ಕಡೆಯವರು ಬದ್ಧರಾಗಿರುವುದಾಗಿ ಹೇಳಿದ್ದಾರೆ ಮತ್ತು ಇಸ್ರೇಲ್ ಸೋಮವಾರ ಹಮಾಸ್ ಒತ್ತೆಯಾಳುಗಳ ಶವವನ್ನು ಹಸ್ತಾಂತರಿಸಿದೆ ಎಂದು ದೃಢಪಡಿಸಿದೆ.
ನೇತನ್ಯಾಹು ಹೇಳಿಕೆ
ಇದೇ ವೇಳೆ ಕದನ ವಿರಾಮ ಒಪ್ಪಂದವನ್ನು ಜಾರಿಗೆ ತರಲು ಹಮಾಸ್ ಎಲ್ಲಾ ಒತ್ತೆಯಾಳುಗಳ ಶವಗಳನ್ನು ಹಿಂದಿರುಗಿಸುವ ತನ್ನ ಬದ್ಧತೆಯನ್ನು ಪೂರೈಸಬೇಕು ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರ ಕಚೇರಿ ಹೇಳಿಕೆಯಲ್ಲಿ ತಿಳಿಸಿದೆ. 'ನಾವು ಇದರಲ್ಲಿ ರಾಜಿ ಮಾಡಿಕೊಳ್ಳುವುದಿಲ್ಲ ಮತ್ತು ಸತ್ತ ಎಲ್ಲಾ ಒತ್ತೆಯಾಳುಗಳನ್ನು, ಅವರಲ್ಲಿ ಪ್ರತಿಯೊಬ್ಬರನ್ನು ಹಿಂದಿರುಗಿಸುವವರೆಗೆ ನಾವು ಯಾವುದೇ ಪ್ರಯತ್ನವನ್ನು ಬಿಡುವುದಿಲ್ಲ' ನೇತನ್ಯಾಹು ಕಚೇರಿ ಹೇಳಿಕೆ ಹೊರಡಿಸಿದೆ.
ಅಂದಹಾಗೆ ವ್ಯಾನ್ಸ್ ಮಂಗಳವಾರ ಇಸ್ರೇಲ್‌ಗೆ ಆಗಮಿಸಲಿದ್ದು, ಅಲ್ಲಿ ಅವರು ಇಸ್ರೇಲ್ ಪ್ರಧಾನಿ ನೆತನ್ಯಾಹು ಅವರನ್ನು ಭೇಟಿ ಮಾಡಿ "ಎರಡು ಪ್ರಮುಖ ವಿಷಯಗಳು ಅಂದರೆ, ಭದ್ರತಾ ಸವಾಲುಗಳು ಮತ್ತು ನಮ್ಮ ಮುಂದಿರುವ ರಾಜತಾಂತ್ರಿಕ ಅವಕಾಶಗಳ" ಕುರಿತು ಚರ್ಚೆ ನಡೆಸಲಿದ್ದಾರೆ ಎಂದು ತಿಳಿದುಬಂದಿದೆ.
Advertisement