
ಕಾಬೂಲ್: ಪ್ರಾದೇಶಿಕ ಉದ್ವಿಗ್ನತೆಯಲ್ಲಿ ಭಾರತದ ಪಾತ್ರವಿದೆ ಎಂಬ ಪಾಕ್ ಆರೋಪವನ್ನು ಅಫ್ಘಾನಿಸ್ತಾನ ರಕ್ಷಣಾ ಸಚಿವ ಮೌಲಾವಿ ಮೊಹಮ್ಮದ್ ಯಾಕೂಬ್ ಮುಜಾಹಿದ್ ತಳ್ಳಿ ಹಾಕಿದ್ದಾರೆ. ಇದು ಆಧಾರವಿಲ್ಲದ, ತರ್ಕಬದ್ಧವಲ್ಲದ ಮತ್ತು ಸ್ವೀಕಾರಾರ್ಹವಲ್ಲದ ಆರೋಪ ಎಂದಿದ್ದಾರೆ. ಕಾಬೂಲ್ ತನ್ನ ವಿದೇಶಿ ಸಂಬಂಧಗಳನ್ನು ಸ್ವತಂತ್ರವಾಗಿ ನಿರ್ವಹಿಸುತ್ತದೆ. ರಾಷ್ಟ್ರೀಯ ಹಿತಾಸಕ್ತಿಗಳಿಗೆ ಅನುಗುಣವಾಗಿ ಭಾರತದೊಂದಿಗೆ ಬಾಂಧವ್ಯವನ್ನು ಬಲಪಡಿಸುತ್ತದೆ ಎಂದು ಅವರು ಹೇಳಿದ್ದಾರೆ.
ಈ ಆರೋಪಗಳು ಆಧಾರ ರಹಿತವಾಗಿವೆ. ನಾವು ಸ್ವತಂತ್ರ ರಾಷ್ಟ್ರವಾಗಿ ಭಾರತದೊಂದಿಗೆ ಸಂಬಂಧವನ್ನು ನಿರ್ವಹಿಸುತ್ತೇವೆ. ನಮ್ಮ ರಾಷ್ಟ್ರೀಯ ಹಿತಾಸಕ್ತಿಗಳ ಚೌಕಟ್ಟಿನೊಳಗೆ ಆ ಸಂಬಂಧಗಳನ್ನು ಬಲಪಡಿಸುತ್ತೇವೆ ಎಂದು ಮುಜಾಹಿದ್ ಅಲ್ ಜಜೀರಾಗೆ ತಿಳಿಸಿದರು.
ಅಫ್ಘಾನಿಸ್ತಾನ-ಪಾಕಿಸ್ತಾನ ಸಂಬಂಧಗಳ ಕುರಿತು ಮಾತನಾಡಿದ ಮುಜಾಹಿದ್, ಉತ್ತಮ ನೆರೆಹೊರೆ ಮತ್ತು ವ್ಯಾಪಾರ ವಿಸ್ತರಣೆಯ ಆಧಾರದ ಮೇಲೆ ಇಸ್ಲಾಮಾಬಾದ್‌ನೊಂದಿಗೆ ಸಂಬಂಧ ಉತ್ತಮಗೊಳಿಸಲು ಬಯಸುತ್ತೇವೆ. ಅಫ್ಘಾನಿಸ್ತಾನ ಮತ್ತು ಪಾಕಿಸ್ತಾನ ನೆರೆಯ ರಾಷ್ಟ್ರಗಳು. ಅವುಗಳ ನಡುವಿನ ಉದ್ವಿಗ್ನತೆಗಳು ಯಾರಿಗೂ ಒಳ್ಳೇಯದಲ್ಲ.ಅವರ ಸಂಬಂಧವು ಪರಸ್ಪರ ಗೌರವ ಮತ್ತು ಉತ್ತಮ ನೆರೆಹೊರೆಯ ತತ್ವಗಳ ಮೇಲೆ ಇರಬೇಕು ಎಂದು ಅವರು ಹೇಳಿದರು.
ದೋಹಾ ಒಪ್ಪಂದ ಉಲ್ಲೇಖಿಸಿದ ಮುಜಾಹಿದ್, ಟರ್ಕಿಯಲ್ಲಿ ನಡೆಯಲಿರುವ ಮುಂದಿನ ಸಭೆಯು ಒಪ್ಪಂದವನ್ನು ಅನುಷ್ಠಾನಗೊಳಿಸುವ ಮತ್ತು ಮೇಲ್ವಿಚಾರಣೆ ಮಾಡುವ ಬಗ್ಗೆ ಗಮನಹರಿಸುತ್ತದೆ. ಪಾಕಿಸ್ತಾನ ಅನುಸರಿಸದಿದ್ದರೆ ಸಮಸ್ಯೆಯಾಗಬಹುದು ಎಂದು ಎಚ್ಚರಿಸಿದ ಅವರು, ನಿಯಮಗಳ ಪಾಲನೆಗೆ ನೆರವಾಗುವಂತೆ ಮಧ್ಯಸ್ಥಿಕೆ ರಾಷ್ಟ್ರಗಳಾದ ಟರ್ಕಿ ಹಾಗೂ ಕತಾರ್ ಗೆ ಸೂಚಿಸಿದು. ಪಾಕಿಸ್ತಾನ ಸೇರಿದಂತೆ ಯಾವುದೇ ದೇಶದ ವಿರುದ್ಧ ಉಗ್ರರ ಗುಂಪುಗಳನ್ನು ಬೆಂಬಲಿಸುವುದಿಲ್ಲ. ದಾಳಿಯ ವೇಳೆ ಆಫ್ಘನ್ನರು ತಮ್ಮ ತಾಯ್ನಾಡನ್ನು "ಧೈರ್ಯದಿಂದ" ರಕ್ಷಿಸುತ್ತಾರೆ ಎಂದು ಅವರು ಹೇಳಿದರು.
ಅಪ್ಘಾನಿಸ್ತಾನ ಹಾಗೂ ಪಾಕಿಸ್ತಾನ ಗಡಿಯಲ್ಲಿ ಇತ್ತೀಚಿಗೆ ನಡೆದ ಸಂಘರ್ಷದಲ್ಲಿ ಅನೇಕ ಮಂದಿ ಸಾವನ್ನಪ್ಪಿದ್ದರು. ಸಾಕಷ್ಟು ನಷ್ಟ ಉಂಟಾಯಿತು. ಭಾರತ ಪ್ರಾಕ್ಸಿ ಯುದ್ಧದಲ್ಲಿ ನಿರತವಾಗಿದ್ದು, ಅಪ್ಘಾನಿಸ್ತಾನವನ್ನು ಎತ್ತಿಕಟ್ಟುತ್ತಿದೆ ಎಂದು ಪಾಕಿಸ್ತಾನದ ರಕ್ಷಣಾ ಸಚಿವರು ಇತ್ತೀಚಿಗೆ ಆರೋಪಿಸಿದ್ದರು. ಇದನ್ನು ಭಾರತ ನಿರಾಕರಿಸಿತ್ತು. ಆಂತರಿಕ ಭದ್ರತಾ ಸವಾಲುಗಳಿಗೆ ಪಾಕಿಸ್ತಾನವು ತನ್ನ ನೆರೆಯ ದೇಶಗಳನ್ನು ದೂಷಿಸುತ್ತದೆ ಎಂದು ಭಾರತದ ವಿದೇಶಾಂಗ ಸಚಿವಾಲಯ ಹೇಳಿತು.
Advertisement