

ನವದೆಹಲಿ: ಟಿಬೆಟ್‌ನ ಪಾಂಗಾಂಗ್ ಸರೋವರದ ಪೂರ್ವ ಭಾಗದ ದಡದಲ್ಲಿ, 2020 ರ ಗಡಿ ಘರ್ಷಣೆಯ ಬಿಂದುಗಳಲ್ಲಿ ಒಂದರ ಸುಮಾರು 110 ಕಿಮೀ ದೂರದಲ್ಲಿ ಚೀನಾ ಕ್ಷೀಪ್ರಗತಿಯಲ್ಲಿ ನಿರ್ಮಾಣ ಚಟುವಟಿಕೆಯಲ್ಲಿ ತೊಡಗಿದೆ.
ಕಮಾಂಡ್ ಮತ್ತು ಕಂಟ್ರೋಲ್ ಕಟ್ಟಡಗಳು, ಬ್ಯಾರಕ್‌ಗಳು, ವಾಹನ ಶೆಡ್‌ಗಳು, ಯುದ್ಧಸಾಮಗ್ರಿ ಸಂಗ್ರಹಣೆ ಮತ್ತು ರಾಡಾರ್ ಸ್ಥಾನಗಳನ್ನು ಒಳಗೊಂಡಿರುವ ಚೀನಾದ ಹೊಸ ವಾಯು ರಕ್ಷಣಾ ಸಂಕೀರ್ಣವೊಂದನ್ನು ಸ್ಯಾಟಲೈಟ್ ಪೋಟೋಗಳು ತೋರಿಸುತ್ತವೆ.
ಕ್ಷಿಪಣಿಗಳನ್ನು ಸಾಗಿಸುವ, ಉಡಾಯಿಸುವ ಟ್ರಾನ್ಸ್‌ಪೋರ್ಟರ್ ಎರೆಕ್ಟರ್ ಲಾಂಚರ್ (TEL) ರಾಕೆಟ್ ಗೆ ಅನುಕೂಲವಾಗುವಂತೆ ಇದನ್ನು ನಿರ್ಮಿಸಲಾಗುತ್ತಿದೆ ಎಂದು ತಜ್ಞರು ಹೇಳಿದ್ದಾರೆ. ಇದು ಭೂಮಿಯಿಂದ ಆಕಾಶಕ್ಕೆ ಚಿಮ್ಮುವ ಚೀನಾದ ದೀರ್ಘ-ಶ್ರೇಣಿಯ HQ-9 ಕ್ಷಿಪಣಿ ವ್ಯವಸ್ಥೆಗೆ ರಕ್ಷಣೆ ನೀಡಬಹುದು ಎನ್ನಲಾಗುತ್ತಿದೆ.
ಚೀನಾದ ಹೊಸ ವಾಯು ರಕ್ಷಣಾ ಸಂಕೀರ್ಣವನ್ನು US ಮೂಲದ ಜಿಯೋ-ಇಂಟೆಲಿಜೆನ್ಸ್ ಸಂಸ್ಥೆ ಆಲ್ಸೋರ್ಸ್ ಅನಾಲಿಸಿಸ್‌ನ ಸಂಶೋಧಕರು ವಾಸ್ತವ ನಿಯಂತ್ರಣ ರೇಖೆಯಿಂದ 65 ಕಿ.ಮೀ ದೂರದಲ್ಲಿರುವ ಗಾರ್ ಕೌಂಟಿಯಲ್ಲಿ ಮೊದಲಿಗೆ ಗುರುತಿಸಿದ್ದಾರೆ. ಇದು ಭಾರತ ಇತ್ತೀಚಿಗೆ ಉನ್ನತೀಕರಿಸಿರುವ ನಿಯೋಮಾ ವಿಮಾನ ನಿಲ್ದಾಣಕ್ಕೆ ಎದುರಿಗಿದೆ.
ಯುಎಸ್ ಮೂಲದ ಬಾಹ್ಯಾಕಾಶ ಗುಪ್ತಚರ ಕಂಪನಿ Vantor ತಂಡದಿಂದ ಪಡೆದ ಸ್ಯಾಟಲೈಟ್ ಫೋಟೋಗಳಲ್ಲಿ ಕ್ಷಿಪಣಿ ಉಡಾವಣಾ ಬೇಗಳ ಮೇಲಿನ ಮೇಲ್ಫಾವಣಿ ಕಂಡುಬರುತ್ತದೆ. ಪ್ರತಿಯೊಂದೂ ಎರಡು ವಾಹನಗಳಿಗೆ ಸ್ಥಳಾವಕಾಶ ನೀಡುವಷ್ಟು ದೊಡ್ಡದಾಗಿದೆ.
ಸೆಪ್ಟೆಂಬರ್ 29 ರ ವ್ಯಾಂಟರ್ ಸ್ಯಾಟಲೈಟ್ ಫೋಟೋದಲ್ಲಿ ಗಾರ್ ಕಂಟ್ರಿಯಲ್ಲಿ ಅಂತಹ ಒಂದು ಉಡಾವಣಾ ಕೇಂದ್ರದ ಮೇಲಿನ ತೆರೆದ ಛಾವಣಿಗಳನ್ನು ತೋರಿಸುತ್ತದೆ. ಪಾಂಗಾಂಗ್ ಸರೋವರದ ಬಳಿ ಎರಡನೇ ವಾಯು ರಕ್ಷಣಾ ಸಂಕೀರ್ಣ ಕಾಮಗಾರಿಯ ಆರಂಭಿಕ ಹಂತವನ್ನು ಜುಲೈ ಅಂತ್ಯದಲ್ಲಿ ಜಿಯೋಸ್ಪೇಷಿಯಲ್ ಸಂಶೋಧಕ ಡೇಮಿಯನ್ ಸೈಮನ್ ಅವರು ಗುರುತಿಸಿದ್ದರು. ಆದರೆ ಆ ಸಮಯದಲ್ಲಿ ಮುಚ್ಚಿದ ಕ್ಷಿಪಣಿ ಉಡಾವಣಾ ಕೇಂದ್ರಗಳ ಸ್ವರೂಪ ತಿಳಿದಿರಲಿಲ್ಲ.
ASA ವಿಶ್ಲೇಷಕರು ಮೂಲಸೌಕರ್ಯವನ್ನು ಪತ್ತೆ ಹಚ್ಚಿದ್ದಾರೆ. HQ-9 ವಾಯು ರಕ್ಷಣಾ ವ್ಯವಸ್ಥೆಯನ್ನು ತನ್ನ ಕಮಾಂಡ್ ಸಿಸ್ಟಮ್ ಜೊತೆಗೆ ಸಂಪರ್ಕಿಸಲು ಇದನ್ನು ಇಡಲಾಗಿದೆ ಎನ್ನಲಾಗುತ್ತಿದೆ. ಪಾಂಗಾಂಗ್ ಸರೋವರದ ಬಳಿಯ ಮೂಲಸೌಕರ್ಯ ಕಾರ್ಯಗಳು ಇನ್ನು ನಿರ್ಮಾಣ ಹಂತದಲ್ಲಿವೆ.
Advertisement