

ನವದೆಹಲಿ: ಸೌದಿ ಅರೇಬಿಯಾದಲ್ಲಿ ಸಂಕಷ್ಟದಲ್ಲಿ ಸಿಲುಕಿರುವ ಉತ್ತರ ಪ್ರದೇಶದ ಭಾರತೀಯ ವ್ಯಕ್ತಿಯೊಬ್ಬರು ಕಣ್ಣೀರು ಹಾಕುತ್ತಾ ಹೇಳುವ ವೀಡಿಯೊ ವೈರಲ್ ಆಗಿದೆ. ಭೋಜ್‌ಪುರಿಯಲ್ಲಿ ಮಾತನಾಡಿರುವ ವ್ಯಕ್ತಿ, ಪ್ರಯಾಗ್‌ರಾಜ್ ಜಿಲ್ಲೆಯ ಪ್ರತಾಪುರದ ಹಂಡಿಯಾ ನಿವಾಸಿ ಎಂದು ಹೇಳಿಕೊಂಡಿದ್ದಾರೆ.
ದೆಹಲಿ ಮೂಲದ ವಕೀಲರೊಬ್ಬರು ಸಾಮಾಜಿಕ ಮಾಧ್ಯಮದಲ್ಲಿ ಈ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಉದ್ಯೋಗದಾತ ಎನ್ನಲಾದ “ಕಪಿಲ್” ತನ್ನ ಪಾಸ್‌ಪೋರ್ಟ್ ಅನ್ನು ಕಿತ್ತುಕೊಂಡಿದ್ದಾನೆ ಎಂದು ಅವರು ಆರೋಪಿಸಿದ್ದು, ಸಹಾಯಕ್ಕಾಗಿ ನೇರವಾಗಿ ಪ್ರಧಾನಿ ನರೇಂದ್ರ ಮೋದಿಯವರಿಗೆ ಮನವಿ ಮಾಡಿದ್ದಾರೆ. ರಿಯಾದ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಮಧ್ಯಪ್ರವೇಶಿಸಿದ್ದು, ಆತನನ್ನು ಪತ್ತೆಹಚ್ಚಲು ಪ್ರಯತ್ನಗಳನ್ನು ಪ್ರಾರಂಭಿಸಿದೆ.
ಅಲಹಾಬಾದ್‌ನಲ್ಲಿ ನನ್ನ ಹಳ್ಳಿದೆ. ಸೌದಿ ಅರೇಬಿಯಾಕ್ಕೆ ಬಂದಿದ್ದೇನೆ. ಕಪಿಲ್ ಬಳಿ ನನ್ನ ಪಾಸ್‌ಪೋರ್ಟ್ ಇದೆ. ನಾನು ಮನೆಗೆ ಹೋಗಬೇಕೆಂದು ಆತನಿಗೆ ಹೇಳಿದೆ. ಆದರೆ ಆತ ನನ್ನನ್ನು ಕೊಲ್ಲುವುದಾಗಿ ಬೆದರಿಕೆ ಹಾಕುತ್ತಿದ್ದಾನೆ ಎಂದು ಆ ವ್ಯಕ್ತಿ ಕಣ್ಣೀರು ಹಾಕುತ್ತಾ ಹೇಳುತ್ತಾನೆ. ಆತನ ಹಿಂದೆ ಒಂಟೆಯೊಂದು ಕಾಣಿಸುತ್ತದೆ.
ಪ್ರಧಾನಿ ಮತ್ತು ಭಾರತೀಯ ಅಧಿಕಾರಿಗಳಿಗೆ ತಲುಪುವ ತನಕ ಈ ವಿಡಿಯೋವನ್ನು ವ್ಯಾಪಕವಾಗಿ ಹಂಚಿಕೊಳ್ಳಬೇಕು ಎಂದು ಆತ ಮನವಿ ಮಾಡಿದ್ದು, ದಯವಿಟ್ಟು ನನಗೆ ಸಹಾಯ ಮಾಡಿ, ನಾನು ಸಾಯುತ್ತೇನೆ. ನನ್ನ ತಾಯಿ ಹತ್ರ ನಾನು ಹೋಗಬೇಕು ಎಂದು ಆತ ಗೋಳಾಡುವುದು ವಿಡಿಯೋದಲ್ಲಿದೆ.
ಈ ವೈರಲ್ ವಿಡಿಯೋದಲ್ಲಿರುವ ವ್ಯಕ್ತಿಯ ಪತ್ತೆಗೆ ಮುಂದಾಗಿರುವ ಸೌದಿ ಅರಬೀಯಾದಲ್ಲಿರುವ ಭಾರತೀಯ ರಾಯಭಾರ ಕಚೇರಿ, ಲೋಕೇಶನ್, ಸಂಪರ್ಕಿಸಬಹುದಾದ ನಂಬರ್ ಅಥವಾ ಉದ್ಯೋಗದಾತರ ಬಗ್ಗೆ ವಿವರ ಇಲ್ಲದೆ ಆತನನ್ನು ಹುಡುಕುವುದು ಕಷ್ಟವಾಗಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದೆ. ಆತನ ಕುಟುಂಬ ಸದಸ್ಯರನ್ನು ಸಂಪರ್ಕಿಸುವಂತೆ ಉತ್ತರ ಪ್ರದೇಶ ಅಧಿಕಾರಿಗಳಿಗೆ ರಾಯಭಾರಿ ಅಧಿಕಾರಿಗಳು ಒತ್ತಾಯಿಸಿದೆ.
ಆದರೆ, ಸೌದಿ ಅರಬೀಯಾದ ಸಾರ್ವಜನಿಕ ಸುರಕ್ಷತಾ ಇಲಾಖೆ ವ್ಯಕ್ತಿಯ ಹೇಳಿಕೆಯನ್ನು ತಳ್ಳಿಹಾಕಿದೆ. ಸಾಮಾಜಿಕ ಜಾಲತಾಣಗಳಲ್ಲಿ ವೀವ್ಹ್ ಹೆಚ್ಚಿಸಿಕೊಳ್ಳಲು ಈ ವಿಡಿಯೋ ಮಾಡಲಾಗಿದೆ ಎಂದು ಹೇಳಿದೆ.
Advertisement