
ಟಿಯಾಂಜಿನ್: ರಷ್ಯಾದ ಕಚ್ಚಾ ತೈಲ ಖರೀದಿಗೆ ಸಂಬಂಧಿಸಿದಂತೆ ಭಾರತ-ಅಮೆರಿಕ ಸಂಬಂಧಗಳಲ್ಲಿ ಉದ್ವಿಗ್ನತೆ ಉಂಟಾಗಿರುವ ನಡುವೆಯೇ, ಪ್ರಧಾನಿ ನರೇಂದ್ರ ಮೋದಿ ಸೋಮವಾರ ಟಿಯಾಂಜಿನ್‌ನಲ್ಲಿ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಿದರು.
ಚೀನಾದ ಬಂದರು ನಗರದಲ್ಲಿ ಶಾಂಘೈ ಸಹಕಾರ ಸಂಸ್ಥೆಯ (SCO) ವಾರ್ಷಿಕ ಶೃಂಗಸಭೆಯ ಹೊರತಾಗಿಯೂ ಈ ಸಭೆ ನಡೆಯಿತು. ಉಕ್ರೇನ್ ಹಾಗೂ ರಷ್ಯಾ ನಡುವಿನ ಯುದ್ಧವನ್ನು ರಚನಾತ್ಮಕ ಮಾತುಕತೆ ಮೂಲಕ ಆದಷ್ಟು ಬೇಗ ಕೊನೆಗಾಣಿಸುವ ಕುರಿತು ಚರ್ಚಿಸಲಾಗಿದೆ.
'ಉಕ್ರೇನ್‌ನಲ್ಲಿ ಶಾಂತಿ ಸ್ಥಾಪಿಸಲು ನಡೆದ ಇತ್ತೀಚಿನ ಎಲ್ಲ ಪ್ರಯತ್ನಗಳನ್ನು ನಾವು ಸ್ವಾಗತಿಸುತ್ತೇವೆ ಮತ್ತು ಉಭಯ ದೇಶಗಳು ಯುದ್ಧವನ್ನು ಕೊನೆಗೊಳಿಸಲು ರಚನಾತ್ಮಕವಾಗಿ ಮುಂದುವರಿಯುತ್ತಾರೆ ಎಂದು ನಾವು ಭಾವಿಸುತ್ತೇವೆ. ಸಾಧ್ಯವಾದಷ್ಟು ಬೇಗ ಸಂಘರ್ಷವನ್ನು ಕೊನೆಗೊಳಿಸುವುದು ಮತ್ತು ಆ ಪ್ರದೇಶಕ್ಕೆ ಶಾಶ್ವತ ಶಾಂತಿ ನೆಲೆಸುವಂತೆ ಮಾಡುವ ಮಾರ್ಗಗಳನ್ನು ಕಂಡುಕೊಳ್ಳುವುದು ಮಾನವೀಯತೆಯ ಬೇಡಿಕೆಯಾಗಿದೆ' ಎಂದು ನರೇಂದ್ರ ಮೋದಿ ಹೇಳಿದರು.
ಇದೇ ವೇಳೆ ಪ್ರಧಾನಿ ನರೇಂದ್ರ ಮೋದಿ, ರಷ್ಯಾ ಅಧ್ಯಕ್ಷರನ್ನು ಭಾರತಕ್ಕೆ ಸ್ವಾಗತಿಸಿದ್ದಾರೆ. ಈ ವರ್ಷಾಂತ್ಯದಲ್ಲಿ ಪುಟಿನ್ ಅವರು ಭಾರತಕ್ಕೆ ಭೇಟಿ ನೀಡುವ ಸಾಧ್ಯತೆ ಇದೆ. ಭಾರತವು ರಷ್ಯಾದ ನಾಯಕನನ್ನು ಸ್ವಾಗತಿಸಲು ಕಾಯುತ್ತಿದೆ ಎಂದು ಹೇಳಿದರು.
'ಕಷ್ಟದ ಸಮಯಗಳಲ್ಲಿಯೂ ಭಾರತ ಮತ್ತು ರಷ್ಯಾ ಯಾವಾಗಲೂ ಹೆಗಲಿಗೆ ಹೆಗಲು ಕೊಟ್ಟು ಮುನ್ನಡೆದವು. ಜಾಗತಿಕ ಶಾಂತಿ, ಸ್ಥಿರತೆ ಮತ್ತು ಸಮೃದ್ಧಿಗೆ ಉಭಯ ದೇಶಗಳ ನಡುವಿನ ನಿಕಟ ಸಂಬಂಧಗಳು ಮಹತ್ವದ್ದಾಗಿವೆ ಎಂದು ಹೇಳಿದರು.
ಎಸ್‌ಸಿಒ ಶೃಂಗಸಭೆಯ ಸ್ಥಳದಲ್ಲಿ ನಡೆದ ಕಾರ್ಯಕಲಾಪಗಳ ನಂತರ, ಮೋದಿ ಅವರು ಪುಟಿನ್ ಅವರೊಂದಿಗೆ ಭಾರತ ಮತ್ತು ರಷ್ಯಾ ನಡುವಿನ ಪ್ರಮುಖ ದ್ವಿಪಕ್ಷೀಯ ಮಾತುಕತೆ ನಡೆಸಲು ಒಂದೇ ಕಾರಿನಲ್ಲಿ ಜೊತೆಯಾಗಿ ತೆರಳಿದರು.
Advertisement