
ಕಾಬೂಲ್, ಅಫ್ಘಾನಿಸ್ತಾನ: ತಾಲಿಬಾನ್ ಸರ್ಕಾರ ಸೋಮವಾರ ನೀಡಿದ ಅಂಕಿಅಂಶಗಳ ಪ್ರಕಾರ, ಪೂರ್ವ ಅಫ್ಘಾನಿಸ್ತಾನದಲ್ಲಿ ಸಂಭವಿಸಿದ ಪ್ರಬಲ ಭೂಕಂಪದಲ್ಲಿ ಸುಮಾರು 800 ಜನ ಸಾವನ್ನಪ್ಪಿದ್ದಾರೆ ಮತ್ತು 2,500 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ
ಭಾನುವಾರ ತಡರಾತ್ರಿ ಸಂಭವಿಸಿದ 6.0 ತೀವ್ರತೆಯ ಭೂಕಂಪವು ನೆರೆಯ ನಂಗರ್ಹಾರ್ ಪ್ರಾಂತ್ಯದ ಜಲಾಲಾಬಾದ್ ನಗರ ಬಳಿಯ ಕುನಾರ್ ಪ್ರಾಂತ್ಯದ ಪಟ್ಟಣಗಳನ್ನು ನಡುಗಿಸಿದ್ದು, ವ್ಯಾಪಕ ಹಾನಿಯನ್ನುಂಟುಮಾಡಿದೆ.
ನಿನ್ನೆ ರಾತ್ರಿ 11:47ಕ್ಕೆ ಭೂಕಂಪ ಸಂಭವಿಸಿದ್ದು, ಜಲಾಲಾಬಾದ್‌ನ ಪೂರ್ವ-ಈಶಾನ್ಯಕ್ಕೆ 27ಕಿಲೋಮೀಟರ್(17 ಮೈಲುಗಳು) ದೂರದಲ್ಲಿ ಕೇಂದ್ರೀಕೃತವಾಗಿತ್ತು ಎಂದು ಯುಎಸ್ ಭೂವೈಜ್ಞಾನಿಕ ಸಮೀಕ್ಷೆ ತಿಳಿಸಿದೆ.
ಕೇವಲ 8 ಕಿಲೋಮೀಟರ್(5 ಮೈಲುಗಳು) ಆಳದಲ್ಲಿ ಕಂಪನವಾಗಿದ್ದು. ಇದು ಹೆಚ್ಚಿನ ಹಾನಿಯನ್ನುಂಟುಮಾಡಿದೆ ಎಂದು ತಜ್ಞರು ಮಾಹಿತಿ ನೀಡಿದ್ದಾರೆ.
ತಾಲಿಬಾನ್ ಸರ್ಕಾರದ ಮುಖ್ಯ ವಕ್ತಾರ ಜಬಿಹುಲ್ಲಾ ಮುಜಾಹಿದ್ ಅವರು ಸೋಮವಾರ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿ, ಸಾವಿನ ಸಂಖ್ಯೆ ಕನಿಷ್ಠ 800ಕ್ಕೆ ಏರಿದ್ದು, 2,500ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ. ಕುನಾರ್‌ನಲ್ಲಿ ಹೆಚ್ಚಿನ ಸಾವುನೋವುಗಳು ಸಂಭವಿಸಿವೆ ಎಂದು ಅವರು ಹೇಳಿದ್ದಾರೆ.
ಭೂಕಂಪದಿಂದ ನುರ್ಗಲ್, ಚಾವ್ಕೇ ಮತ್ತು ವಟಪುರಗಳು ಹೆಚ್ಚು ಹಾನಿಗೊಳಗಾಗಿವೆ. ರಕ್ಷಣಾ ಪ್ರಯತ್ನಗಳು ಮುಂದುವರಿದಿದ್ದು, ಭೂಕಂಪ ಪೀಡಿತ ಅಫ್ಘಾನಿಸ್ತಾನಕ್ಕೆ ಭಾರತ ಬೆಂಬಲ ನೀಡುವುದಾಗಿ ಭರವಸೆ ನೀಡಿದೆ.
ಪ್ರಧಾನಿ ನರೇಂದ್ರ ಮೋದಿ ಈ ಬಗ್ಗೆ ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದು, “ಅಫ್ಘಾನಿಸ್ತಾನದಲ್ಲಿ ಸಂಭವಿಸಿದ ಭೂಕಂಪದಿಂದ ಉಂಟಾದ ಜೀವಹಾನಿಯಿಂದ ತೀವ್ರ ದುಃಖಿತನಾಗಿದ್ದೇನೆ. ಈ ಕಷ್ಟದ ಸಮಯದಲ್ಲಿ ನಮ್ಮ ಪ್ರಾರ್ಥನೆಗಳು ಮೃತರ ಕುಟುಂಬಗಳೊಂದಿಗೆ ಇವೆ. ಗಾಯಾಳುಗಳು ಶೀಘ್ರವಾಗಿ ಚೇತರಿಸಿಕೊಳ್ಳಬೇಕೆಂದು ನಾವು ಬಯಸುತ್ತೇವೆ. ಭಾರತವು ಪೀಡಿತರಿಗೆ ಸಾಧ್ಯವಿರುವ ಎಲ್ಲಾ ಮಾನವೀಯ ನೆರವು ಮತ್ತು ಪರಿಹಾರವನ್ನು ಒದಗಿಸಲು ಸಿದ್ಧವಾಗಿದೆ” ಎಂದು ಪೋಸ್ಟ್ ಮಾಡಿದ್ದಾರೆ.
Advertisement