
ವಾಷಿಂಗ್ಟನ್: ಇತ್ತೀಚೆಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಆರೋಗ್ಯದ ಬಗ್ಗೆ ಭಾರೀ ಸುದ್ದಿಯಾಗಿತ್ತು. ಕಳೆದ ಮೂರ್ನಾಲ್ಕು ದಿನ ಸಾರ್ವಜನಿಕವಾಗಿ ಕಾಣಿಸಿಕೊಳ್ಳದಿದ್ದಾಗ ಅವರು ತೀವ್ರ ಅನಾರೋಗ್ಯಕ್ಕೀಡಾಗಿದ್ದಾರೆ ಎಂದು ಒಂದು ಕಡೆ ಮತ್ತೊಂದೆಡೆ ಟ್ರಂಪ್ ನಿಧನ ಹೊಂದಿದ್ದಾರೆ ಎಂದು ಸೋಷಿಯಲ್ ಮೀಡಿಯಾದಲ್ಲಿ ಸುದ್ದಿಯಾಗಿತ್ತು.
ಒಂದು ವಾರ ನಂತರ ನಿನ್ನೆ ಸಾರ್ವಜನಿಕವಾಗಿ ಕಾಣಿಸಿಕೊಂಡ ಟ್ರಂಪ್ ಈ ಎಲ್ಲಾ ವದಂತಿಗಳಿಗೆ ಸ್ವತಃ ತೆರೆ ಎಳೆದಿದ್ದಾರೆ. ನೀವು ತೀರಿಹೋಗಿದ್ದೀರಿ ಎಂದು ಸುದ್ದಿಯಾಗಿತ್ತು, ಈಗ ಹೇಗೆ ಇದ್ದಕ್ಕಿದ್ದಂತೆ ಕಾಣಿಸಿಕೊಂಡಿರಿ ಎಂದು ಫಾಕ್ಸ್ ನ್ಯೂಸ್‌ನ ಪೀಟರ್ ಡೂಸಿ ಡೊನಾಲ್ಡ್ ಟ್ರಂಪ್ ರನ್ನು ಕಿಚಾಯಿಸಿದರು. ನೀವು ಆ ಸುದ್ದಿ ನೋಡಿದ್ದೀರಾ ಎಂದು ಕೇಳಿದರು.
ಅದಕ್ಕೆ 79 ವರ್ಷದ ಟ್ರಂಪ್ ಇಲ್ಲ ಎಂದು ಉತ್ತರಿಸಿದರು. ನಾನು ನಿಧನ ಹೊಂದಿದ್ದೇನೆ ಎಂದು ಜನ ಅಚ್ಚರಿಪಡುತ್ತಾರೆ ಎಂದು ನನಗೆ ಗೊತ್ತಿರಲಿಲ್ಲ. ನನ್ನ ನಿಧನ ಬಗ್ಗೆ ಸುದ್ದಿ ಹಬ್ಬಿದೆ ಎಂದು ನನಗೆ ಗೊತ್ತಿರಲಿಲ್ಲ, ಆದರೆ ನನ್ನ ಆರೋಗ್ಯದ ಬಗ್ಗೆ ಜನರಿಗೆ ಕಳವಳ ಇದೆ ಎಂದು ಗೊತ್ತಾಯಿತು ಎಂದರು.
ನಾನು ಚೆನ್ನಾಗಿದ್ದೇನೆಯೇ, ನನ್ನ ಆರೋಗ್ಯ ಹೇಗಿದೆ, ಏನಾದರೂ ತೊಂದರೆಯಾಗಿದೆಯೇ ಎಂದು ಜನ ಕೇಳುತ್ತಾರೆ. ನನ್ನ ಆರೋಗ್ಯ ಬಗ್ಗೆ ಹಬ್ಬಿದ ವದಂತಿಗಳೆಲ್ಲ ಸುಳ್ಳು, ನಾನು ಚೆನ್ನಾಗಿಯೇ ಇದ್ದೇನೆ ಎಂದರು.
ಇತ್ತೀಚೆಗೆ, ಟ್ರಂಪ್ ಅವರ ಬಲಗೈಯ ಹಿಂಭಾಗದಲ್ಲಿ ಗಾಯಗಳಾಗಿದ್ದವು, ಕೆಲವೊಮ್ಮೆ ಅವರ ಕಾಲುಗಳ ಸುತ್ತ ಊತ ಉಂಟಾಗುತ್ತಿತ್ತು. ಇದಕ್ಕೆ ಸ್ಪಷ್ಟನೆ ನೀಡಿದ್ದ ಶ್ವೇತಭವನ, ಕಾಲುಗಳ ನರ ದೌರ್ಬಲ್ಯದಿಂದ ಹೃದಯಕ್ಕೆ ಸರಿಯಾಗಿ ರಕ್ತಪರಿಚಲನೆಯಾಗುತ್ತಿಲ್ಲ, ರಕ್ತ ಹೃದಯಕ್ಕೆ ಹೋಗದೆ ಕಾಲುಗಳಲ್ಲಿ ಸಂಗ್ರಹವಾಗಿ ಊತ ಕಾಣಿಸಿಕೊಂಡಿದೆ ಎಂದು ಹೇಳಿತ್ತು. ಸಾಮಾನ್ಯವಾಗಿ ಇಳಿ ವಯಸ್ಸಿನಲ್ಲಿ ಈ ತೊಂದರೆಯಿರುತ್ತದೆ.
ಬಲಗೈ ಹಿಂದೆ ಗಾಯ, ಕಾಲು ಊತ
ಇನ್ನು ಬಲಗೈಯ ಹಿಂದೆ ಗಾಯದ ಬಗ್ಗೆ ಪತ್ರಿಕಾ ಕಾರ್ಯದರ್ಶಿ ಕ್ಯಾರೋಲಿನ್ ಲೀವಿಟ್ ಹೇಳಿಕೆ ನೀಡಿ, ಟ್ರಂಪ್ ಅವರು ಪದೇ ಪದೇ ಸಾರ್ವಜನಿಕ ಜೀವನದಲ್ಲಿ ಕೈ ಕುಲುಕುವುದು ಮತ್ತು ಆಸ್ಪಿರಿನ್ ಬಳಕೆಯಿಂದ ಹೀಗೆ ಆಗಿದೆ ಎಂದು ಹೇಳಿದ್ದರು. ಆಸ್ಟಿರಿನ್ ನ್ನು ಟ್ರಂಪ್ ಹೃದಯಾಘಾತ ಮತ್ತು ಪಾರ್ಶ್ವವಾಯು ಅಪಾಯವನ್ನು ಕಡಿಮೆ ಮಾಡಲು ನಿಯಮಿತವಾಗಿ ತೆಗೆದುಕೊಳ್ಳುತ್ತಾರಂತೆ.
ನಾನು ಸಾರ್ವಜನಿಕವಾಗಿ ಕಾಣಿಸಿಕೊಳ್ಳದ ದಿನಗಳಲ್ಲಿ ಕೆಲವು ಸಂದರ್ಶನಗಳನ್ನು ನೀಡಿದ್ದೆ, ಜೊತೆಗೆ ಟ್ರೂತ್ ಸೋಶಿಯಲ್‌ನಲ್ಲಿ ಪೋಸ್ಟ್ ಮಾಡುತ್ತಿದ್ದೆ ಎಂದರು. ಅವರು ಕೆಲ ದಿನಗಳ ಹಿಂದೆ ಪೋಸ್ಟ್ ಮಾಡಿ ದೀರ್ಘ ಸತ್ಯಗಳು" ಕೆಲವು "ಸಾಕಷ್ಟು ಕಟುವಾದ ಸತ್ಯಗಳು" ಎಂದು ಬರೆದುಕೊಂಡಿದ್ದರು.
ಭಾನುವಾರದ ಅಂತಹ ಪೋಸ್ಟ್ ಗಳಲ್ಲಿ ಒಂದರಲ್ಲಿ, ಅವರು ನನ್ನ ಜೀವನದಲ್ಲಿ ಎಂದಿಗೂ ಉತ್ತಮ ಎಂದು ಭಾವಿಸಲಿಲ್ಲ ಎಂದು ಬರೆದುಕೊಂಡಿದ್ದರು. ಇದು ಹಲವು ಊಹಾಪೋಹಗಳಿಗೆ ಕಾರಣವಾಗಿತ್ತು.
2015 ರಲ್ಲಿ ಅವರು ಅಧ್ಯಕ್ಷ ಸ್ಥಾನಕ್ಕೆ ಮೊದಲ ಬಾರಿ ಸ್ಪರ್ಧಿಸಿ ಸಾರ್ವಜನಿಕ ಭಾಷಣ ಮಾಡಿದ್ದ ವೇಳೆ ವೈದ್ಯರು ಅವರ ದೈಹಿಕ ಶಕ್ತಿ ಮತ್ತು ತ್ರಾಣ ಅಸಾಧಾರಣವಾಗಿದೆ, ಅಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾದ ಅತ್ಯಂತ ಆರೋಗ್ಯವಂತ ವ್ಯಕ್ತಿ ಎಂದು ಹೇಳಿದ್ದರು.
2020 ರಲ್ಲಿ, COVID-19 ಸೋಂಕಿಗೆ ತುತ್ತಾಗಿದ್ದರೂ ಶ್ವೇತಭವನ ಆ ಬಗ್ಗೆ ಮಾಹಿತಿ ಬಹಿರಂಗಪಡಿಸಿರಲಿಲ್ಲ. ಅವರ ರಕ್ತದ ಆಮ್ಲಜನಕದ ಮಟ್ಟದಲ್ಲಿ ಕುಸಿತ ಕಂಡುಬಂದಿತ್ತು. ಆ ಸಮಯದಲ್ಲಿ ಅವರು ಅನಾರೋಗ್ಯದಿಂದ ಬಳಲುತ್ತಿದ್ದರೂ ಶ್ವೇತಭವನ ಗುಟ್ಟುಬಿಟ್ಟುಕೊಟ್ಟಿರಲಿಲ್ಲ.
Advertisement