
ವಾಷಿಂಗ್ಟನ್: ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಸುಂಕ ನೀತಿಯನ್ನು ಅಮೆರಿಕದ ಮಾಜಿ ರಾಷ್ಟ್ರೀಯ ಭದ್ರತಾ ಸಲಹೆಗಾರ ಜಾನ್ ಬೋಲ್ಟನ್ ತೀವ್ರವಾಗಿ ಟೀಕಿಸಿದ್ದಾರೆ. ಇದು ಭಾರತವನ್ನು ಸೋವಿಯತ್ ಒಕ್ಕೂಟದೊಂದಿಗಿನ ಶೀತಲ ಸಮರದ ಸಂಬಂಧಗಳಿಂದ ದೂರವಿಡಲು ಮತ್ತು ಚೀನಾದಿಂದ ಹೆಚ್ಚುತ್ತಿರುವ ಬೆದರಿಕೆಯನ್ನು ನಿಭಾಯಿಸಲು ದಶಕಗಳಿಂದ ಪಾಶ್ಚಿಮಾತ್ಯ ಪ್ರಯತ್ನಗಳನ್ನು 'ಕೆಡವಿದೆ' ಎಂದು ಹೇಳಿದ್ದಾರೆ. ಟ್ರಂಪ್ ತಮ್ಮ ಆರ್ಥಿಕ ವಿಧಾನದಿಂದ ಕಾರ್ಯತಂತ್ರದ ಲಾಭಗಳಿಗೆ ಅಪಾಯವನ್ನುಂಟು ಮಾಡುತ್ತಿದ್ದಾರೆ ಎಂದು ಬೋಲ್ಟನ್ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ.
'ದಶಕಗಳಿಂದಲೂ ಪಶ್ಚಿಮವು ಭಾರತವನ್ನು ಸೋವಿಯತ್ ಒಕ್ಕೂಟ/ರಷ್ಯಾ ಜೊತೆಗಿನ ಶೀತಲ ಸಮರದ ನಂಟು ಬಿಡಿಸಲು ಪ್ರಯತ್ನಿಸಿತ್ತು. ಆದರೆ ಡೊನಾಲ್ಡ್ ಟ್ರಂಪ್ ತಮ್ಮ ವಿನಾಶಕಾರಿ ಸುಂಕ ನೀತಿಯಿಂದ ದಶಕಗಳ ಪ್ರಯತ್ನಗಳನ್ನು ನಾಶಪಡಿಸಿದ್ದಾರೆ. ಮತ್ತೊಂದು ಪೋಸ್ಟ್‌ನಲ್ಲಿ, ಡೊನಾಲ್ಡ್ ಟ್ರಂಪ್ ಅವರ ರಾಜತಾಂತ್ರಿಕ ಕ್ರಮಗಳು ಕ್ಸಿ ಜಿನ್‌ಪಿಂಗ್‌ಗೆ ಪೂರ್ವದಲ್ಲಿ ತನ್ನ ಆದಿಪತ್ಯ ಪುನಃಸ್ಥಾಪಿಸಲು ಅವಕಾಶವನ್ನು ನೀಡಿದೆ ಎಂದು ಹೇಳಿದ್ದಾರೆ. ಜಾನ್ ಬೋಲ್ಟನ್ ಅವರು ಅಮೆರಿಕದ ಮಾಜಿ NSG ಆಗಿದ್ದು ಅವರು ಅಮೆರಿಕ ಅಧ್ಯಕ್ಷರಾಗಿ ಮೊದಲ ಅವಧಿಯಲ್ಲಿ ಡೊನಾಲ್ಡ್ ಟ್ರಂಪ್ ಅವರ ರಾಷ್ಟ್ರೀಯ ಭದ್ರತಾ ಸಲಹೆಗಾರರಾಗಿ (2018-19) ಸೇವೆ ಸಲ್ಲಿಸಿದ್ದರು. ನಂತರ, ಆಗಿನ ಆಡಳಿತದ ವಿದೇಶಾಂಗ ನೀತಿಯ ಬಗ್ಗೆ ಟ್ರಂಪ್ ಅವರೊಂದಿಗಿನ ಭಿನ್ನಾಭಿಪ್ರಾಯಗಳಿಂದಾಗಿ ಅವರು ತಮ್ಮ ಹುದ್ದೆಗೆ ರಾಜೀನಾಮೆ ನೀಡಿದರು.
ರಷ್ಯಾದಿಂದ ಕಚ್ಚಾ ತೈಲ ಖರೀದಿ ಹಿನ್ನೆಲೆಯಲ್ಲಿ ಭಾರತದ ಆಮದುಗಳ ಮೇಲೆ ಅಮೆರಿಕ ಒಟ್ಟಾರೆ ಶೇಕಡಾ 50ರಷ್ಟು ಸುಂಕ ವಿಧಿಸಿದ ನಂತರ ಹೆಚ್ಚುತ್ತಿರುವ ಆರ್ಥಿಕ ಉದ್ವಿಗ್ನತೆಯಿಂದಾಗಿ ನವದೆಹಲಿ ಜಾಗತಿಕ ಅನಿಶ್ಚಿತತೆಯನ್ನು ಎದುರಿಸುತ್ತಿದೆ. ಬೋಲ್ಟನ್ ಅವರ ಹೇಳಿಕೆಗಳು ಚೀನಾದಲ್ಲಿ ನಡೆದ SCO ಸಭೆ ಬಳಿಕ ಬಂದಿದೆ. 25ನೇ ಶಾಂಘೈ ಸಹಕಾರ ಸಂಸ್ಥೆ (SCO) ಮುಖ್ಯಸ್ಥರ ಕೌನ್ಸಿಲ್ ಶೃಂಗಸಭೆ ನಂತರ ಪ್ರಧಾನಿ ಮೋದಿ ರಷ್ಯಾ ಮತ್ತು ಚೀನಾದ ಜೊತೆ ದ್ವಿಪಕ್ಷೀಯ ಸಭೆ ನಡೆಸಿದ್ದರು.
ಭಾನುವಾರ ವಿದೇಶಾಂಗ ಸಚಿವಾಲಯ ಬಿಡುಗಡೆ ಮಾಡಿದ ಹೇಳಿಕೆಯ ಪ್ರಕಾರ, ಪ್ರಧಾನಿ ಮೋದಿ ಮತ್ತು ಕ್ಸಿ ಜಿನ್‌ಪಿಂಗ್ ತಮ್ಮ ದ್ವಿಪಕ್ಷೀಯ ಭೇಟಿಯ ಸಮಯದಲ್ಲಿ ಜಾಗತಿಕ ವ್ಯಾಪಾರವನ್ನು ಸ್ಥಿರಗೊಳಿಸುವಲ್ಲಿ ಭಾರತ ಮತ್ತು ಚೀನಾದ ಆರ್ಥಿಕತೆಗಳ ಪಾತ್ರವನ್ನು ಒಪ್ಪಿಕೊಂಡರು. ಏತನ್ಮಧ್ಯೆ, ಪುಟಿನ್ ಅವರೊಂದಿಗಿನ ಭೇಟಿಯ ಸಮಯದಲ್ಲಿ, ಪ್ರಧಾನಿ ಮೋದಿ ಭಾರತ ಮತ್ತು ರಷ್ಯಾ ನಡುವಿನ ಬಲವಾದ ಸಂಬಂಧಗಳನ್ನು ಒತ್ತಿ ಹೇಳಿದರು. ಅತ್ಯಂತ ಸವಾಲಿನ ಸಂದರ್ಭಗಳಲ್ಲಿಯೂ ಸಹ ಎರಡೂ ದೇಶಗಳು ಯಾವಾಗಲೂ ಹೆಗಲಿಗೆ ಹೆಗಲು ಕೊಟ್ಟು ನಿಂತಿವೆ ಎಂದು ಹೇಳಿದರು. ಜಾಗತಿಕ ಶಾಂತಿ, ಸ್ಥಿರತೆ ಮತ್ತು ಸಮೃದ್ಧಿಗೆ ನವದೆಹಲಿ ಮತ್ತು ಮಾಸ್ಕೋ ನಡುವಿನ ಸಹಕಾರವು ಮುಖ್ಯವಾಗಿದೆ ಎಂದು ಪ್ರಧಾನಿ ಒತ್ತಿ ಹೇಳಿದರು. ಈ ವರ್ಷ ಭಾರತ-ರಷ್ಯಾ 'ವಿಶೇಷ ಮತ್ತು ಸವಲತ್ತು ಪಡೆದ ಕಾರ್ಯತಂತ್ರದ ಪಾಲುದಾರಿಕೆ'ಯ 15ನೇ ವಾರ್ಷಿಕೋತ್ಸವವನ್ನು ಸೂಚಿಸುತ್ತದೆ ಎಂದು ಪುಟಿನ್ ಹೇಳಿದರು.
Advertisement