
ವಾಷಿಂಗ್ಟನ್: ಇತ್ತೀಚಿಗೆ ಚೀನಾದ ಟಿಯಾಂಜಿನ್‌ನಲ್ಲಿ ನಡೆದ ಶಾಂಘೈ ಸಹಕಾರ ಸಂಸ್ಥೆ ಶೃಂಗಸಭೆಯಲ್ಲಿ (SCO)ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್, ಚೀನಾದ ಅಧ್ಯಕ್ಷ ಕ್ಸಿ- ಜಿನ್ ಪಿಂಗ್ ಹಾಗೂ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಒಟ್ಟಿಗೆ ಕಾಣಿಸಿಕೊಂಡ ನಂತರ ಭಾರತ ಮತ್ತು ಅಮೆರಿಕ ನಡುವಿನ ಬಾಂಧವ್ಯ ಮತ್ತು ದ್ವಿಪಕ್ಷೀಯ ವ್ಯಾಪಾರ ಒಪ್ಪಂದ ಮತ್ತಷ್ಟು ಜಟಿಲಗೊಂಡಿದೆ. ಈ ಮಧ್ಯೆ ಟ್ರಂಪ್ ಶುಕ್ರವಾರ ಮಾಡಿರುವ ಫೋಸ್ಟ್ ಜಗತ್ತಿನ ಗಮನ ಸೆಳೆದಿದೆ.
ಕರಾಳ ಚೀನಾಕ್ಕೆ ನಾವು ಭಾರತ ಹಾಗೂ ರಷ್ಯಾವನ್ನು ಕಳೆದುಕೊಂಡಿದ್ದೇವೆ ಎಂದು ತಮ್ಮ ಟ್ರುಥ್ ಸೋಶಿಯಲ್ ಮೀಡಿಯಾದಲ್ಲಿ ಟ್ರಂಪ್ ಪೋಸ್ಟ್‌ಮಾಡಿದ್ದಾರೆ. "ನಾವು ಭಾರತ ಮತ್ತು ರಷ್ಯಾವನ್ನು ಅತ್ಯಂತ ಕರಾಳ ಚೀನಾಕ್ಕೆ ಕಳೆದುಕೊಂಡಂತೆ ಕಾಣುತ್ತಿದೆ. ಅವರು ಒಟ್ಟಿಗೆ ದೀರ್ಘ ಮತ್ತು ಸಮೃದ್ಧ ಭವಿಷ್ಯವನ್ನು ಹೊಂದಿರಲಿ! ಎಂದು ಟ್ರಂಪ್ ತಮ್ಮ ಟ್ರುಥ್ ಸೋಶಿಯಲ್ ಪೋಸ್ಟ್‌ಗೆ ಶೀರ್ಷಿಕೆ ನೀಡಿದ್ದಾರೆ.
ಅದರೊಂದಿಗೆ ಟಿಯಾಂಜಿನ್ ಸಭೆಯಲ್ಲಿ ಪುಟಿನ್ ಮತ್ತು ಜಿನ್‌ಪಿಂಗ್ ಅವರೊಂದಿಗೆ ಪ್ರಧಾನಿ ಮೋದಿ ಕಾಣಿಸಿಕೊಂಡಿರುವ ಚಿತ್ರವನ್ನು ಹಂಚಿಕೊಂಡಿದ್ದಾರೆ.
ಕಳೆದ ತಿಂಗಳು ಭಾರತದ ಮೇಲೆ ಟ್ರಂಪ್ ಒಟ್ಟಾರೇ ಶೇ.50 ರಷ್ಟು ಸುಂಕ ವಿಧಿಸಿದ ನಂತರ ಭಾರತ-ಅಮೆರಿಕ ನಡುವಿನ ದ್ವಿಪಕ್ಷೀಯ ಸಂಬಂಧ ಹದಗೆಟ್ಟಿದೆ. ರಷ್ಯಾದಿಂದ ತೈಲವನ್ನು ಖರೀದಿ ಹಿನ್ನೆಲೆಯಲ್ಲಿ ಭಾರತದ ಮೇಲೆ ಅಮೆರಿಕ ಶೇ.25 ರಷ್ಟು ಮೂಲ ಸುಂಕ ಮತ್ತು ಶೇ.25 ರಷ್ಟು ಹೆಚ್ಚುವರಿ ದಂಡವನ್ನು ವಿಧಿಸಿದೆ.
ಟ್ರಂಪ್ ಪೋಸ್ಟ್ ಗೆ MEA ಪ್ರತಿಕ್ರಿಯೆ
ಇದರ ನಡುವೆ ವಿದೇಶಾಂಗ ವ್ಯವಹಾರಗಳ ಇಲಾಖೆ, ಶುಕ್ರವಾರ ನಡೆಸಿದ ಸುದ್ದಿಗೋಷ್ಠಿಯಲ್ಲಿ, ಟ್ರಂಪ್ ಅವರ ಪೋಸ್ಟ್‌ಗೆ ಯಾವುದೇ ಪ್ರತಿಕ್ರಿಯೆ ನೀಡಲು ನಿರಾಕರಿಸಿತು. ಟ್ರಂಪ್ ಅವರ ಪೋಸ್ಟ್‌ಗೆ ಯಾವುದೇ ರೀತಿಯ ಪ್ರತಿಕ್ರಿಯೆ ನೀಡೋದಿಲ್ಲ' ಎಂದು ಹೇಳಿದೆ.
ಅಮೆರಿಕ ಮತ್ತು ಭಾರತದ ನಡುವಿನ ಈ ಸಂಬಂಧ ನಮಗೆ ಬಹಳ ಮುಖ್ಯವಾಗಿದೆ. ಉಭಯ ದೇಶಗಳು ಸಮಗ್ರ ಜಾಗತಿಕ ಕಾರ್ಯತಂತ್ರದ ಪಾಲುದಾರಿಕೆಯನ್ನು ಹಂಚಿಕೊಳ್ಳುತ್ತವೆ. ಇದು ನಮ್ಮ ಒಪ್ಪಿತ ಹಿತಾಸಕ್ತಿಗಳು, ಪ್ರಜಾಪ್ರಭುತ್ವ ಮೌಲ್ಯಗಳು ಮತ್ತು ದೃಢವಾದ ಜನರ-ಜನರ ನಡುವಿನ ಸಂಬಂಧಗಳಲ್ಲಿ ಆಧಾರವಾಗಿದೆ ಎಂದು ಜೈಸ್ವಾಲ್ ಹೇಳಿದರು.
ಬಹು ಸವಾಲುಗಳು ಮತ್ತು ಸ್ಥಿತ್ಯಂತರಗಳನ್ನು ಪಾಲುದಾರಿಕೆ ಸಹಿಸಿಕೊಂಡಿದ್ದು, ಎರಡೂ ದೇಶಗಳು ದ್ವಿಪಕ್ಷೀಯ ಕಾರ್ಯಸೂಚಿಯನ್ನು ಮುಂದುವರಿಸುವತ್ತ ಗಮನಹರಿಸಿವೆ. "ಪರಸ್ಪರ ಗೌರವ ಮತ್ತು ಹಂಚಿಕೆಯ ಹಿತಾಸಕ್ತಿ ಆಧಾರದ ಮೇಲೆ ಸಂಬಂಧ ಮುಂದುವರಿಯುತ್ತದೆ ಎಂದು ನಾವು ಭಾವಿಸುತ್ತೇವೆ. ಅಲಾಸ್ಕಾದಲ್ಲಿ ಭಾರತ- ಅಮೆರಿಕ ಸೇನೆಯ ಜಂಟಿ ಸಮರಾಭ್ಯಾಸ ನಡೆಯುತ್ತಿದೆ. ಕೆಲ ದಿನಗಳ ಎರಡು ರಾಷ್ಟ್ರಗಳ ಉನ್ನತ ಅಧಿಕಾರಿಗಳ ಸಭೆ ನಡೆದಿತ್ತು ಎಂದು ಅವರು ಹೇಳಿದರು.
Advertisement