
Astronomer ಕಂಪನಿಯ ಮಾಜಿ ಮಾನವ ಸಂಪನ್ಮೂಲ ಮುಖ್ಯಸ್ಥೆ ಕ್ರಿಸ್ಟಿನ್ ಕ್ಯಾಬಟ್ ತಮ್ಮ ಪತಿ ಆಂಡ್ರ್ಯೂ ಕ್ಯಾಬಟ್ ಅವರಿಂದ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಕೋಲ್ಡ್‌ಪ್ಲೇ ಸಂಗೀತ ಕಚೇರಿ ವೇಳೆ ಕ್ರಿಸ್ಟಿನ್ ಕ್ಯಾಬಟ್ ತಮ್ಮ ಬಾಸ್ ಮತ್ತು ಕಂಪನಿಯ ಸಿಇಒ ಆಂಡಿ ಬೈರ್ನ್ ಗೆ Kiss ಮಾಡಿದ್ದ ವಿಡಿಯೋ ವೈರಲ್ ಆದ ನಂತರ ಆಕೆ ಪತಿಯಿಂದ ವಿಚ್ಛೇದನ ಪಡೆಯಲು ತೀರ್ಮಾನಿಸಿದ್ದಾರೆ.
ಜುಲೈನಲ್ಲಿ ಮ್ಯಾಸಚೂಸೆಟ್ಸ್‌ನ ಗಿಲೆಟ್ ಕ್ರೀಡಾಂಗಣದಲ್ಲಿ ನಡೆದ ಕೋಲ್ಡ್‌ಪ್ಲೇ ಸಂಗೀತ ಕಚೇರಿಯಲ್ಲಿ ಕ್ರಿಸ್ಟಿನ್ ಮತ್ತು ಆಂಡಿ ಬೈರ್ನ್ ಕಿಸ್ ಮಾಡುತ್ತಿದ್ದಾಗ ಇದ್ದಕ್ಕಿದ್ದಂತೆ ಸಿಕ್ಕಿಬಿದ್ದರು. ಇಬ್ಬರೂ ಕ್ಯಾಮೆರಾದಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಿರುವುದು ಕಂಡುಬಂದಿತ್ತು. ಆದರೆ ಈ ಸಮಯದಲ್ಲಿ ಗಾಯಕ ಕ್ರಿಸ್ ಮಾರ್ಟಿನ್ 'ಇಬ್ಬರು ಸಂಬಂಧದಲ್ಲಿದ್ದಾರೆ ಅಥವಾ ಅವರು ತುಂಬಾ ನಾಚಿಕೆಪಡುತ್ತಾರೆ' ಎಂದು ತಮಾಷೆ ಮಾಡಿದರು. ಈ ವೀಡಿಯೊ ಕೆಲವೇ ಗಂಟೆಗಳಲ್ಲಿ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿ ವಿವಾದ ಭುಗಿಲೆದ್ದಿತು.
ವೀಡಿಯೊ ವೈರಲ್ ಆದ ನಂತರ, ಆನ್‌ಲೈನ್ ಬಳಕೆದಾರರು ಅವರಿಬ್ಬರನ್ನೂ ಗುರುತಿಸಿದರು. ಕ್ರಿಸ್ಟಿನ್ ಕ್ಯಾಬಟ್ ಪ್ರೈವೇಟರ್ ರಮ್‌ನ ಸಿಇಒ ಆಗಿರುವ ಆಂಡ್ರ್ಯೂ ಕ್ಯಾಬಟ್ ಅವರನ್ನು ವಿವಾಹವಾಗಿದ್ದಾರೆ. ಅದೇ ಸಮಯದಲ್ಲಿ, ಆಂಡಿ ಬೈರ್ನ್ ಮಾರ್ಕೆಟಿಂಗ್ ಕಾರ್ಯನಿರ್ವಾಹಕ ಮೇಗನ್ ಕೆರ್ರಿಗನ್ ಅವರನ್ನು ವಿವಾಹವಾಗಿದ್ದಾರೆ. ವರದಿಯ ಪ್ರಕಾರ, ಕ್ರಿಸ್ಟಿನ್ ಆಗಸ್ಟ್ 13 ರಂದು ನ್ಯೂ ಹ್ಯಾಂಪ್‌ಶೈರ್‌ನ ಪೋರ್ಟ್ಸ್‌ಮೌತ್ ನ್ಯಾಯಾಲಯದಲ್ಲಿ ವಿಚ್ಛೇದನಕ್ಕಾಗಿ ಅರ್ಜಿ ಸಲ್ಲಿಸಿದ್ದು ಇದು ಆಂಡ್ರ್ಯೂ ಕ್ಯಾಬಟ್ ಅವರ ಮೂರನೇ ವಿಚ್ಛೇದನವಾಗಿದೆ.
ಕೋಲ್ಡ್‌ಪ್ಲೇ ವಿವಾದದ ನಂತರ, ಆಸ್ಟ್ರೋನೊಮರ್ ತಕ್ಷಣ ಆಂತರಿಕ ತನಿಖೆಯನ್ನು ಪ್ರಾರಂಭಿಸಿ ಇಬ್ಬರೂ ಅಧಿಕಾರಿಗಳನ್ನು ರಜೆಯ ಮೇಲೆ ಕಳುಹಿಸಿತ್ತು. ಕೆಲವೇ ದಿನಗಳಲ್ಲಿ ಬೈರ್ನ್ ಸಿಇಒ ಹುದ್ದೆಗೆ ರಾಜೀನಾಮೆ ನೀಡಿದರು. ಅವರ ನಂತರ, ಕಂಪನಿಯ ಸಹ-ಸಂಸ್ಥಾಪಕ ಮತ್ತು ಮುಖ್ಯ ಉತ್ಪನ್ನ ಅಧಿಕಾರಿ ಪೀಟ್ ಡಿಜಾಯ್ ಅವರನ್ನು ಮಧ್ಯಂತರ ಸಿಇಒ ಆಗಿ ನೇಮಿಸಲಾಯಿತು. ಕ್ರಿಸ್ಟಿನ್ ಕ್ಯಾಬಟ್ ಕೂಡ ಮಾನವ ಸಂಪನ್ಮೂಲ ಮುಖ್ಯಸ್ಥ ಹುದ್ದೆಗೆ ರಾಜೀನಾಮೆ ನೀಡಿದರು.
Astronomer ಮತ್ತು ವದಂತಿಗಳು
Astronomer ನ್ಯೂಯಾರ್ಕ್ ಮೂಲದ ಸಾಫ್ಟ್‌ವೇರ್ ಕಂಪನಿಯಾಗಿದ್ದು, ಆಸ್ಟ್ರೋ ಎಂಬ ಓಪನ್-ಸೋರ್ಸ್ ಡೇಟಾ ಆರ್ಕೆಸ್ಟ್ರೇಶನ್ ಟೂಲ್‌ಗೆ ಹೆಸರುವಾಸಿಯಾಗಿದೆ. ಸಾಮಾಜಿಕ ಮಾಧ್ಯಮದಲ್ಲಿ ಇದಕ್ಕೆ ವಿರುದ್ಧವಾದ ಹೇಳಿಕೆಗಳು ಬರುತ್ತಿದ್ದರೂ, ಬೈರನ್ ಯಾವುದೇ ಅಧಿಕೃತ ಹೇಳಿಕೆಯನ್ನು ನೀಡಿಲ್ಲ ಎಂದು ಕಂಪನಿ ಸ್ಪಷ್ಟಪಡಿಸಿದೆ. ಇಲ್ಲಿಯವರೆಗೆ, ಕ್ರಿಸ್ಟಿನ್ ಮತ್ತು ಬೈರನ್ ಇಬ್ಬರೂ ಈ ವಿಷಯದ ಬಗ್ಗೆ ಸಾರ್ವಜನಿಕವಾಗಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
Advertisement