
ದೋಹಾ: ಕತಾರ್ ರಾಜಧಾನಿ ದೋಹಾದಲ್ಲಿ ಗಾಜಾ ಕದನ ವಿರಾಮ ಪ್ರಸ್ತಾಪದ ಬಗ್ಗೆ ಚರ್ಚಿಸುತ್ತಿದ್ದ ಹಮಾಸ್ ನಾಯಕರ ಅನೇಕ ವಸತಿ ಕಟ್ಟಡಗಳ ಮೇಲೆ ಇಸ್ರೇಲ್ ಮಂಗಳವಾರ ವಾಯು ದಾಳಿ ನಡೆಸಿರುವುದಾಗಿ ವರದಿಯಾಗಿದೆ.
ಈ ದಾಳಿಯನ್ನು ಇಸ್ರೇಲ್ ಮಿಲಿಟರಿ ಪಡೆ IDF ಖಚಿತಪಡಿಸಿದೆ. ಹಮಾಸ್ ಉಗ್ರ ಸಂಘಟನೆಯ ಹಿರಿಯ ನಾಯಕರನ್ನು ಗುರಿಯಾಗಿಸಿಕೊಂಡು IDF ಮತ್ತು ISA (ಭದ್ರತಾ ಏಜೆನ್ಸಿ) ಈ ದಾಳಿ ನಡೆಸಿರುವುದಾಗಿ ಹೇಳಿದೆ.
ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಕದನ ವಿರಾಮದ ಪ್ರಸ್ತಾಪವನ್ನು ಚರ್ಚಿಸುತ್ತಿರುವಾಗ ಪ್ಯಾಲೆಸ್ತೀನ್ ಗುಂಪಿನ ಸಂಧಾನಕಾರರು ಇಸ್ರೇಲ್ ದಾಳಿಗೆ ಗುರಿಯಾಗಿದ್ದಾರೆ ಎಂದು ಹಿರಿಯ ಹಮಾಸ್ ಅಧಿಕಾರಿಯ ಹೇಳಿಕೆಯನ್ನು ಉಲ್ಲೇಖಿಸಿ ಎಎಫ್‌ಪಿ ವರದಿ ಮಾಡಿದೆ.
ಹೇಡಿತನ ಎಂದ ಕತಾರ್: ಈ ದಾಳಿಯನ್ನು "ಹೇಡಿತನ" ಎಂದು ಕತಾರ್ ಟೀಕಿಸಿದೆ. ಇಸ್ರೇಲ್ ನ ಈ ರೀತಿಯ ವರ್ತನೆ ಮತ್ತು ಪ್ರಾದೇಶಿಕ ಭದ್ರತೆಗೆ ಭದ್ರತೆಗೆ ಧಕ್ಕೆ ತರುವುದನ್ನು ಸಹಿಸುವುದಿಲ್ಲ ಎಂದು ಎಚ್ಚರಿಕೆ ನೀಡಿದೆ.
ಹಮಾಸ್ ರಾಜಕೀಯ ಬ್ಯೂರೋದ ಹಲವು ನಾಯಕರು ವಾಸಿಸುವ ವಸತಿ ಕಟ್ಟಡಗಳ ಮೇಲೆ ದಾಳಿ ನಡೆಸಲಾಗಿದೆ ಎಂದು ಕತಾರ್ ವಿದೇಶಾಂಗ ಸಚಿವರ ವಕ್ತಾರ ಮಜೀದ್ ಅಲ್ ಅನ್ಸಾರಿ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಈ ಕ್ರಿಮಿನಲ್ ದಾಳಿಯು ಎಲ್ಲಾ ಅಂತಾರಾಷ್ಟ್ರೀಯ ಕಾನೂನುಗಳು ಮತ್ತು ಮಾನದಂಡಗಳ ಸ್ಪಷ್ಟ ಉಲ್ಲಂಘನೆಯಾಗಿದೆ ಮತ್ತು ಕತಾರಿಗಳು ಮತ್ತು ಕತಾರ್ ನಿವಾಸಿಗಳ ಭದ್ರತೆ ಮತ್ತು ಸುರಕ್ಷತೆಗೆ ಗಂಭೀರ ಬೆದರಿಕೆಯಾಗಿದೆ ಎಂದು ಹೇಳಿದ್ದಾರೆ.
ಈ ಮಧ್ಯೆ ದಾಳಿಯನ್ನು ತೀವ್ರವಾಗಿ ಖಂಡಿಸಿರುವ ಕತಾರ್, ಈ ರೀತಿಯ ಎಚ್ಚರಿಕೆ ಇಲ್ಲದ ಇಸ್ರೇಲ್ ವರ್ತನೆ ಮತ್ತು ದೇಶದ ಸುರಕ್ಷತೆ , ಭದ್ರತೆ ಮೇಲಿನ ದಾಳಿಯನ್ನು ಸಹಿಸುವುದಿಲ್ಲ. ಉನ್ನತ ಮಟ್ಟದಲ್ಲಿ ತನಿಖೆ ನಡೆಯುತ್ತಿದ್ದು, ಮುಂದಿನ ವಿವರವನ್ನು ಶೀಘ್ರವಾಗಿ ಘೋಷಿಸಲಾಗುವುದು ಎಂದು ಕತಾರ್ ಹೇಳಿದೆ. ದೋಹದಲ್ಲಿ ಕ್ಷಿಪಣಿ ದಾಳಿ ವರದಿ ಹಿನ್ನೆಲೆಯಲ್ಲಿ ಅಮೆರಿಕದ ಜನರು ತಮ್ಮ ಮನೆಯಲ್ಲಿಯೇ ಇರುವಂತೆ ಕತಾರ್ ನ ಅಮೆರಿಕ ರಾಯಭಾರ ಕಚೇರಿ ಸಲಹೆ ನೀಡಿದೆ.
Advertisement