
ವಾಷಿಂಗ್ ಟನ್: ಚಾರ್ಲಿ ಕಿರ್ಕ್ ಅವರನ್ನು ಹತ್ಯೆಗೈದ ಸ್ನೈಪರ್ ಒಂದು ಗುಂಡು ಹಾರಿಸಿ ನಂತರ ಛಾವಣಿಯಿಂದ ಹಾರಿ ಪಕ್ಕದ ಪ್ರದೇಶಕ್ಕೆ ಓಡಿಹೋಗಿದ್ದಾನೆ ಎಂದು ನಂಬಲಾಗಿದೆ ಮತ್ತು ಇನ್ನೂ ಆತನನ್ನು ಪತ್ತೆ ಮಾಡಲು ಸಾಧ್ಯವಾಗಿಲ್ಲ ಎಂದು ಅಧಿಕಾರಿಗಳು ಗುರುವಾರ ಬಹಿರಂಗಪಡಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಪೊಲೀಸ್ ಅಧಿಕಾರಿಗಳು ಒಂದು ಉನ್ನತ-ಶಕ್ತಿಯ ರೈಫಲ್ ನ್ನು ವಶಪಡಿಸಿಕೊಂಡಿದ್ದಾರೆ.
ಗುಂಡು ಹಾರಿಸಿದ ವ್ಯಕ್ತಿ "ಕಾಲೇಜು ವಯಸ್ಸಿನವ" ಎಂದು ಕಂಡುಬಂದಿದ್ದು, ಕಿರ್ಕ್ ಅವರನ್ನು ಗುಂಡು ಹಾರಿಸಿದ ವಿಶ್ವವಿದ್ಯಾಲಯದ ಆವರಣದಲ್ಲಿ ಇದ್ದ ಎಂದು ನಂಬಲಾಗಿದೆ ಎಂದು ಅಮೆರಿಕದಲ್ಲಿ ನಡೆಯುತ್ತಿರುವ ಇತ್ತೀಚಿನ ರಾಜಕೀಯ ಹಿಂಸಾಚಾರದ ಕೃತ್ಯದ ತನಿಖೆ ನಡೆಸುತ್ತಿರುವಾಗ ಅಧಿಕಾರಿಗಳು ತಿಳಿಸಿದ್ದಾರೆ.
"ಇದು ಟಾರ್ಗೆಟ್ ಮಾಡಿ ನಡೆಸಿರುವ ಕೃತ್ಯವಾಗಿದೆ ಎಂದು ನಾನು ನಿಮಗೆ ಹೇಳಬಲ್ಲೆ" ಎಂದು ಸಾಲ್ಟ್ ಲೇಕ್ ಸಿಟಿಯ ಉನ್ನತ ಎಫ್‌ಬಿಐ ಏಜೆಂಟ್ ರಾಬರ್ಟ್ ಬೋಲ್ಸ್ ಹೇಳಿದ್ದಾರೆ.
ಉತಾಹ್ ವ್ಯಾಲಿ ವಿಶ್ವವಿದ್ಯಾಲಯದ ಆವರಣದಲ್ಲಿ ದೂರದ ಗುಂಡೇಟಿನಿಂದ ಕಿರ್ಕ್ ಹತ್ಯೆ ನಡೆದಿದೆ. "ಇದು ನಮ್ಮ ರಾಜ್ಯಕ್ಕೆ ಕರಾಳ ದಿನ. ಇದು ನಮ್ಮ ರಾಷ್ಟ್ರಕ್ಕೆ ದುರಂತ ದಿನ" ಎಂದು ಉತಾಹ್ ಗವರ್ನರ್ ಸ್ಪೆನ್ಸರ್ ಕಾಕ್ಸ್ ಬುಧವಾರ ಹೇಳಿದರು. "ಇದು ರಾಜಕೀಯ ಹತ್ಯೆ ಎಂದು ನಾನು ಸ್ಪಷ್ಟವಾಗಿ ಹೇಳಲು ಬಯಸುತ್ತೇನೆ." ಎಂದು ಅವರು ತಿಳಿಸಿದ್ದಾರೆ.
ಘಟನೆಯ ಸಂಬಂಧ ಇಬ್ಬರು ಜನರನ್ನು ಬಂಧಿಸಲಾಯಿತು, ಆದರೆ ಅವರಿಬ್ಬರೂ ಗುಂಡಿನ ದಾಳಿಗೆ ಸಂಬಂಧ ಹೊಂದಿಲ್ಲ ಎಂದು ತಿಳಿದ ಬಳಿಕ ಇಬ್ಬರನ್ನೂ ಬಿಡುಗಡೆ ಮಾಡಲಾಗಿದೆ ಎಂದು ಸಾರ್ವಜನಿಕ ಸುರಕ್ಷತಾ ಅಧಿಕಾರಿಗಳು ತಿಳಿಸಿದ್ದಾರೆ.
Advertisement