
ನ್ಯೂಯಾರ್ಕ್: ಪ್ರಸ್ತುತ ನ್ಯೂಯಾರ್ಕ್‌ನಲ್ಲಿರುವ ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಷರೀಫ್ ಅವರು ಗುರುವಾರ ವಾಷಿಂಗ್ಟನ್ ತೆರಳಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಭೇಟಿ ಮಾಡಲಿದ್ದಾರೆ.
ಶೆಹಬಾಜ್ ಷರೀಫ್ ಅವರು ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಭಾಗವಹಿಸಲು ನ್ಯೂಯಾರ್ಕ್‌ಗೆ ತೆರಳಿದ್ದು, ನಾಳೆ ಅಮೆರಿಕ ಅಧ್ಯಕ್ಷರನ್ನು ಭೇಟಿ ಮಾಡಿ, ದ್ವಿಪಕ್ಷೀಯ ಸಂಬಂಧಗಳನ್ನು ಪುನಃಸ್ಥಾಪಿಸಲು ಹೊಸ ಪ್ರಯತ್ನ ಮಾಡಲಿದ್ದಾರೆ.
ಪಾಕ್ ಪ್ರಧಾನಿ, ಟ್ರಂಪ್ ಅವರನ್ನು ಭೇಟಿ ಮಾಡಲು ನ್ಯೂಯಾರ್ಕ್‌ನಿಂದ ವಾಷಿಂಗ್ಟನ್‌ಗೆ ಪ್ರಯಾಣಿಸಲಿದ್ದಾರೆ ಮತ್ತು ತಮ್ಮ ವಿಶ್ವಸಂಸ್ಥೆಯ ಕಾರ್ಯಕ್ರಮಗಳನ್ನು ಮುಂದುವರಿಸಲು ಅದೇ ದಿನ ನ್ಯೂಯಾರ್ಕ್‌ಗೆ ಹಿಂತಿರುಗಲಿದ್ದಾರೆ ಎಂದು ದಿ ಎಕ್ಸ್‌ಪ್ರೆಸ್ ಟ್ರಿಬ್ಯೂನ್ ಪತ್ರಿಕೆ ರಾಜತಾಂತ್ರಿಕ ಮೂಲಗಳನ್ನು ಉಲ್ಲೇಖಿಸಿ ಬುಧವಾರ ವರದಿ ಮಾಡಿದೆ.
ಜುಲೈ 2019 ರಲ್ಲಿ ಆಗಿನ ಪ್ರಧಾನಿ ಇಮ್ರಾನ್ ಖಾನ್ ವಾಷಿಂಗ್ಟನ್‌ಗೆ ಪ್ರಯಾಣ ಬೆಳೆಸಿ, ಆಗ ಅಮೆರಿಕ ಅಧ್ಯಕ್ಷರಾಗಿದ್ದ ಟ್ರಂಪ್ ಅವರನ್ನು ಭೇಟಿಯಾದ ನಂತರ ಶ್ವೇತಭವನದಲ್ಲಿ ಅಮೆರಿಕ ಅಧ್ಯಕ್ಷ ಮತ್ತು ಪಾಕಿಸ್ತಾನಿ ಪ್ರಧಾನಿ ನಡುವಿನ ಮೊದಲ ಸಭೆ ಇದಾಗಿದೆ. ಟ್ರಂಪ್ ನಂತರ ಅಧಿಕಾರಕ್ಕೆ ಜೋ ಬೈಡನ್ ಅವರು, ತಮ್ಮ ಅಧಿಕಾರಾವಧಿಯಲ್ಲಿ ಪಾಕಿಸ್ತಾನವನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದರು ಮತ್ತು ಪಾಕಿಸ್ತಾನದ ಯಾವುದೇ ಪ್ರಧಾನಿಯೊಂದಿಗೆ ಫೋನ್‌ನಲ್ಲೂ ಮಾತನಾಡಲಿಲ್ಲ.
ಆದಾಗ್ಯೂ, ಅಧ್ಯಕ್ಷ ಟ್ರಂಪ್ ಜನವರಿಯಲ್ಲಿ ಅಧಿಕಾರ ವಹಿಸಿಕೊಂಡಾಗಿನಿಂದ, ಪಾಕಿಸ್ತಾನ-ಯುಎಸ್ ಸಂಬಂಧದಲ್ಲಿ ನಾಟಕೀಯ ಮತ್ತು ಅನಿರೀಕ್ಷಿತ ಬದಲಾವಣೆಯಾಗಿದೆ. ಮುಂಬರುವ ಟ್ರಂಪ್-ಶೆಹಬಾಜ್ ಸಭೆಯು ಇಸ್ಲಾಮಾಬಾದ್ ಮತ್ತು ವಾಷಿಂಗ್ಟನ್ ನಡುವಿನ ಸಂಬಂಧಗಳನ್ನು ಸುಧಾರಿಸುವ ಹಿನ್ನೆಲೆಯಲ್ಲಿ ನಡೆಯುತ್ತಿದೆ.
Advertisement