
ಲಂಡನ್: ಪಾಕಿಸ್ತಾನ ತನ್ನ ದೇಶದ ಮೇಲೆಯೇ ನಡೆಸಿರುವ ವಾಯು ದಾಳಿಯಲ್ಲಿ 30 ಮಂದಿ ನಾಗರಿಕರು ಬಲಿಯಾಗಿದ್ದು, ದಾಳಿ ಕುರಿತು ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮಂಡಳಿ ಸಭೆಯಲ್ಲಿ ಭಾರತ ವ್ಯಂಗ್ಯವಾಡಿದೆ.
ಪಾಕಿಸ್ತಾನಿ ವಾಯುಪಡೆಯು ಖೈಬರ್ ಪಖ್ತುನ್ಖ್ವಾದ ತಿರಾ ಕಣಿವೆಯಲ್ಲಿ ವೈಮಾನಿಕ ದಾಳಿ ನಡೆಸಿದ್ದು, ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ಕನಿಷ್ಠ 30 ಜನರು ಸಾವನ್ನಪ್ಪಿದ್ದಾರೆಂದು ವರದಿಗಳಿಂದ ತಿಳಿದುಬಂದಿದೆ.
ವೈಮಾನಿಕ ದಾಳಿಯ ಫೋಟೋ ಹಾಗೂ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಫೋಟೋ ಹಾಗೂ ವಿಡಿಯೋದಲ್ಲಿ ಅವಶೇಷಗಳಿಂದ ಕೂಡಿದ ಬೀದಿಗಳು, ಸುಟ್ಟುಹೋದ ವಾಹನಗಳು ಮತ್ತು ಕುಸಿದ ಕಟ್ಟಡಗಳಿಂದ ಶವಗಳನ್ನು ಹೊರತೆಗೆಯುತ್ತಿರುವುದು ಕಂಡು ಬಂದಿದೆ.
ಯುಎನ್‌ಎಚ್‌ಆರ್‌ಸಿ ಅಧಿವೇಶನದ ಕಾರ್ಯಸೂಚಿ ಐಟಂ 4 ರ ಸಂದರ್ಭದಲ್ಲಿ ಪಾಕಿಸ್ತಾನ ವೈಮಾನಿಕ ದಾಳಿ ಕುರಿತು ಭಾರತೀಯ ರಾಜತಾಂತ್ರಿಕ, 2012 ರ ಬ್ಯಾಚ್‌ನ ಭಾರತೀಯ ವಿದೇಶಾಂಗ ಸೇವಾ ಅಧಿಕಾರಿ ಕ್ಷಿತಿಜ್ ತ್ಯಾಗಿ ಅವರು ಮಾತನಾಡಿದ್ದು, ದಾಳಿ ಕುರಿತು ವ್ಯಂಗ್ಯವಾಡಿದ್ದಾರೆ,
ಜಾಗತಿಕವಾಗಿ ಅಸ್ಥಿರತೆ ಉಂಟುಮಾಡಲು ಭಯೋತ್ಪಾದನೆ ರಫ್ತು ಮಾಡುತ್ತದೆ. ಈಗ ನೋಡಿದ್ರೆ ತನ್ನ ಸ್ವಂತ ನಾಗರಿಕರ ಮೇಲೆಯೇ ಬಾಂಬ್ ದಾಳಿ ಮಾಡಿದೆ. ಭಯೋತ್ಪಾದನೆಯ ಪ್ರಚಾರಕ್ಕಾಗಿ ಅಂತಾರಾಷ್ಟ್ರೀಯ ವೇದಿಕೆಗಳನ್ನ ದುರುಪಯೋಗಪಡಿಸಿಕೊಂಡಿದೆ ಎಂದು ಹೇಳಿದ್ದಾರೆ,
ನಮ್ಮ ಪ್ರದೇಶವನ್ನು ಅಪೇಕ್ಷಿಸುವ ಬದಲು, ಪಾಕಿಸ್ತಾನ ಅಕ್ರಮವಾಗಿ ಆಕ್ರಮಿಸಿಕೊಂಡಿರುವ ಭಾರತೀಯ ಪ್ರದೇಶವನ್ನು ಖಾಲಿ ಮಾಡಬೇಕು. ಭಯೋತ್ಪಾದನೆ ರಫ್ತು ಮಾಡುವುದರಿಂದ, ತಮ್ಮದೇ ಜನರ ಮೇಲೆ ಬಾಂಬ್ ದಾಳಿ ಮಾಡುವುದರಿಂದ, ವಿಶ್ವಸಂಸ್ಥೆ ಗುರುತಿಸಿದ ಉಗ್ರರಿಗೆ ಆಶ್ರಯ ನೀಡುವುದರಿಂದ ಸಮಯ ಸಿಕ್ಕರೆ ಜೀವ ಬೆಂಬಲದ ಮೇಲೆ ಆರ್ಥಿಕತೆ ಸುಧಾರಿಸುವತ್ತ ಗಮನಹರಿಸಬೇಕು. ಆದರೆ, ಪಾಕಿಸ್ತಾನಕ್ಕೆ ಸಮಯ ಸಿಕ್ಕರೆ ತನ್ನದೇ ದೇಶದ ನಾಗರಿಕೆ ಮೇಲೆ ದಾಳಿ ಮಾಡುವ ಕೆಲಸವನ್ನು ಮಾಡುತ್ತಿದೆ ಎಂದು ವಾಗ್ತಾಳಿ ನಡೆಸಿದರು.
ಇದೇ ವೇಳೆ ಪುಲ್ವಾಮಾ, ಉರಿ, ಪಠಾಣ್‌ಕೋಟ್ ಮತ್ತು ಮುಂಬೈ ಸೇರಿದಂತೆ ಹಿಂದಿನ ದಾಳಿಗಳು ಹಾಗೂ ಪಹಲ್ಗಾಮ್ ದಾಳಿಯನ್ನು ಉಲ್ಲೇಖಿಸಿ ಪಾಕ್ ವಿರುದ್ಧ ಕಿಡಿಕಾರಿದರು.
Advertisement