
ವಿಶ್ವಸಂಸ್ಥೆ: ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಶುಕ್ರವಾರದಂದು ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಭಾಷಣ ಮಾಡುತ್ತಿದ್ದಂತೆಯೇ ಇತ್ತ ಗಾಜಾ ಗಡಿ ಪ್ರದೇಶದಲ್ಲಿ ಇಸ್ರೇಲ್ ಸೇನೆ ಕಂಡು ಕೇಳರಿಯದ ಕ್ರಮ ಕೈಗೊಂಡಿದೆ.
ಇಸ್ರೇಲ್ ಗಾಜಾದಲ್ಲಿ ಹಮಾಸ್ ವಿರುದ್ಧದ "ಕೆಲಸವನ್ನು ಮುಗಿಸಬೇಕು" ಎಂಬ ಸಂದೇಶವನ್ನು ಬೆಂಜಮಿನ್ ನೆತನ್ಯಾಹು ವಿಶ್ವಸಂಸ್ಥೆಯ ವೇದಿಕೆಯಲ್ಲಿ ಸ್ಪಷ್ಟ ಹೇಳಿದ್ದಾರೆ. ಈ ಹೇಳಿಕೆಯ ಮೂಲಕ ಅವರು ಗಾಜಾದೊಂದಿಗಿನ ಯುದ್ಧವನ್ನು ಕೊನೆಗೊಳಿಸಲು ನಿರಾಕರಿಸಿದ್ದಾರೆ.
ಅತ್ತ ಈ ಸಂದೇಶವನ್ನು ಗಡಿ ಭಾಗದಲ್ಲಿ ಧ್ವನಿ ವರ್ಧಕಗಳನ್ನು ಅಳವಡಿಸುವ ಮೂಲಕ ಇಸ್ರೇಲ್ ಗಾಜಾದಲ್ಲಿರುವವರಿಗೆ ನೆತನ್ಯಾಹು ಸಂದೇಶ ಕೇಳುವಂತೆ ಮಾಡಿದೆ. ಅಷ್ಟೇ ಅಲ್ಲದೇ ಅಸೋಸಿಯೇಟೆಡ್ ಪ್ರೆಸ್‌ನ ವರದಿಯ ಪ್ರಕಾರ, ಸೈನ್ಯವು ಗಾಜಾ ನಿವಾಸಿಗಳು ಮತ್ತು ಹಮಾಸ್ ಕಾರ್ಯಕರ್ತರ ಫೋನ್‌ಗಳನ್ನು ವಶಪಡಿಸಿಕೊಂಡು, ಆ ಮೂಲಕ ನೆತನ್ಯಾಹು ಅವರ ಭಾಷಣವನ್ನು ಅವರ ಸಾಧನಗಳ ಮೂಲಕ ನೇರ ಪ್ರಸಾರ ಮಾಡಬಹುದು ಎಂದು ಇಸ್ರೇಲ್ ಪ್ರಧಾನ ಮಂತ್ರಿ ಕಚೇರಿ ಹೇಳಿದೆ.
"ಪ್ರಧಾನ ಮಂತ್ರಿ ಕಚೇರಿ ನಾಗರಿಕ ಘಟಕಗಳಿಗೆ, ಐಡಿಎಫ್‌ನ ಸಹಕಾರದೊಂದಿಗೆ, ಗಾಜಾ ಗಡಿಯ ಇಸ್ರೇಲ್ ಬದಿಯಲ್ಲಿರುವ ಟ್ರಕ್‌ಗಳಲ್ಲಿ ಧ್ವನಿವರ್ಧಕಗಳನ್ನು ಇರಿಸಲು ಸೂಚಿಸಲಾಗಿತ್ತು" ಎಂದು ಇಸ್ರೇಲ್ ಪಿಎಂಒ ಹೇಳಿದೆ.
ಇತ್ತ ನೆತನ್ಯಾಹು ಭಾಷಣ ಪ್ರಾರಂಭಿಸುತ್ತಿದ್ದಂತೆಯೇ, ಡಜನ್ಗಟ್ಟಲೆ ಪ್ರತಿನಿಧಿಗಳು ಅಸೆಂಬ್ಲಿ ಹಾಲ್‌ನಿಂದ ಸಾಮೂಹಿಕವಾಗಿ ಹೊರನಡೆದರು. ಅವರ ಭಾಷಣದ ಸಮಯದಲ್ಲಿಯೂ ಸಹ ಸಭಾಂಗಣದಾದ್ಯಂತ ಕೂಗುಗಳು ಪ್ರತಿಧ್ವನಿಸುತ್ತಿದ್ದವು.
"ಪಾಶ್ಚಿಮಾತ್ಯ ನಾಯಕರು ಒತ್ತಡಕ್ಕೆ ಮಣಿದಿರಬಹುದು" ಎಂದು ನೆತನ್ಯಾಹು ಹೇಳಿದ್ದು. "ನಾನು ನಿಮಗೆ ಒಂದು ವಿಷಯವನ್ನು ಖಾತರಿಪಡಿಸುತ್ತೇನೆ ಇಸ್ರೇಲ್ ಯಾವುದೇ ಕಾರಣಕ್ಕೂ ಮಣಿಯುವುದಿಲ್ಲ" ಎಂದು ನೆತನ್ಯಾಹು ಸ್ಪಷ್ಟ ಸಂದೇಶ ರವಾನಿಸಿದ್ದಾರೆ.
Advertisement