
ಕ್ವೆಟ್ಟಾ: ಪಾಕಿಸ್ತಾನದ ಪ್ಯಾರಾಮಿಲಿಟರಿಯ ಪ್ರಧಾನ ಕಚೇರಿಯ ಹೊರಗೆ ಮಂಗಳವಾರ ಪ್ರಬಲವಾದ ಕಾರ್ ಬಾಂಬ್ ಸ್ಫೋಟ ಸಂಭವಿಸಿದ್ದು, ಕನಿಷ್ಠ 10 ಜನ ಸಾವನ್ನಪ್ಪಿದ್ದಾರೆ ಮತ್ತು 30 ಜನ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇಂದು ಮಧ್ಯಾಹ್ನ ಕ್ವೆಟ್ಟಾದ ಜರ್ಘುನ್ ರಸ್ತೆಯಲ್ಲಿರುವ ಎಫ್‌ಸಿ(ಫ್ರಾಂಟಿಯರ್ ಕಾನ್‌ಸ್ಟಾಬ್ಯುಲರಿ) ಪ್ರಧಾನ ಕಚೇರಿಯ ಎದುರು ತಮ್ಮ ವಾಹನವನ್ನು ಸ್ಫೋಟಿಸುವ ಮೊದಲು, ಕಾರಿನೊಳಗಿದ್ದ ಆರು ಉಗ್ರರು ಹೊರಗೆ ಬಂದು ಸೇನೆಯೊಂದಿಗೆ ತೀವ್ರ ಗುಂಡಿನ ಚಕಮಕಿಯಲ್ಲಿ ತೊಡಗಿದರು ಎಂದು ಪೊಲೀಸರು ತಿಳಿಸಿದ್ದಾರೆ.
ಎಲ್ಲಾ ಆರು ದಾಳಿಕೋರರನ್ನು ಹತ್ಯೆ ಮಾಡಲಾಗಿದೆ ಎಂದು ವರದಿಯಾಗಿದೆ.
ಪಾಕಿಸ್ತಾನದ ನೈಋತ್ಯ ನಗರವಾದ ಕ್ವೆಟ್ಟಾದಲ್ಲಿ ಸಂಭವಿಸಿದ ಸ್ಫೋಟದ ಸದ್ದು ಮೈಲುಗಳಷ್ಟು ದೂರವರೆಗೆ ಕೇಳಿಬಂತು ಎಂದು ನಿವಾಸಿಗಳು ತಿಳಿಸಿದ್ದಾರೆ. ಬಾಂಬ್ ಸ್ಫೋಟದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ರಕ್ಷಣಾ ತಂಡಗಳು ಮತ್ತು ಪೊಲೀಸ್ ಸಿಬ್ಬಂದಿ ಸ್ಥಳಕ್ಕೆ ತಲುಪಿದ್ದು, ಶೋಧ ಕಾರ್ಯಾಚರಣೆಗಾಗಿ ಪ್ರದೇಶವನ್ನು ಸುತ್ತುವರೆದಿದೆ ಎಂದು ಪಾಕಿಸ್ತಾನದ ಆಜ್ ನ್ಯೂಸ್ ವರದಿ ಮಾಡಿದೆ.
ಯಾವುದೇ ಉಗ್ರ ಸಂಘಟನೆ ತಕ್ಷಣಕ್ಕೆ ಈ ದಾಳಿಯ ಹೊಣೆ ಹೊತ್ತುಕೊಂಡಿಲ್ಲ.
ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗಬಹುದು. ದಾಳಿಕೋರರು ಭದ್ರತಾ ಪಡೆಗಳ ಪ್ರಧಾನ ಕಚೇರಿಯನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿದ್ದಾರೆ. ಆದರೆ ಹೆಚ್ಚು ನಾಗರಿಕರು ಸಾವನ್ನಪ್ಪಿದ್ದಾರೆ ಎಂದು ಪ್ರಾಂತೀಯ ಆರೋಗ್ಯ ಸಚಿವ ಬಖತ್ ಕಾಕರ್ ಅವರು ಹೇಳಿದ್ದಾರೆ.
ಆಂತರಿಕ ಸಚಿವ ಮೊಹ್ಸಿನ್ ನಖ್ವಿ ಅವರು ದಾಳಿಯಲ್ಲಿ ಆರು ದಾಳಿಕೋರರು ಭಾಗಿಯಾಗಿದ್ದು, ಅವರೆಲ್ಲರನ್ನೂ ಭದ್ರತಾ ಪಡೆಗಳು ಹೊಡೆದುರುಳಿಸಿವೆ ಎಂದು ತಿಳಿಸಿದ್ದಾರೆ.
Advertisement