
ವಾಷಿಂಗ್ಟನ್: ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಷರೀಫ್ ಮತ್ತು ದೇಶದ ಸೇನಾ ಮುಖ್ಯಸ್ಥ ಫೀಲ್ಡ್ ಮಾರ್ಷಲ್ ಅಸಿಮ್ ಮುನೀರ್ ಅವರನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶ್ಲಾಘಿಸಿದ್ದಾರೆ.
ಸೋಮವಾರ ಶ್ವೇತಭವನದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಟ್ರಂಪ್, ಕಳೆದ ವಾರ ಶ್ವೇತಭವನದಲ್ಲಿ ಭೇಟಿಯಾದ ಪಾಕಿಸ್ತಾನಿ ನಾಯಕರನ್ನು 'ಅದ್ಭುತ' ಎಂದು ಕರೆದರು ಮತ್ತು ಇಸ್ರೇಲ್ ಮತ್ತು ಹಮಾಸ್ ನಡುವಿನ ಯುದ್ಧವನ್ನು ಕೊನೆಗೊಳಿಸುವ ಗುರಿಯನ್ನು ಹೊಂದಿರುವ ತನ್ನ 20 ಅಂಶಗಳ ಪ್ರಸ್ತಾಪಕ್ಕೆ ಇಸ್ಲಾಮಾಬಾದ್ ಆರಂಭದಿಂದಲೂ ಬೆಂಬಲಿಸಿದೆ ಎಂದು ಹೇಳಿದರು.
'ಪಾಕಿಸ್ತಾನದ ಪ್ರಧಾನಿ ಮತ್ತು ಫೀಲ್ಡ್ ಮಾರ್ಷಲ್ ಆರಂಭದಿಂದಲೂ ನಮ್ಮೊಂದಿಗಿದ್ದರು. ಅವರು ಅದ್ಭುತ. ಅವರು ಈ ಒಪ್ಪಂದವನ್ನು ಸಂಪೂರ್ಣವಾಗಿ ನಂಬುತ್ತಾರೆ ಎಂದು ಹೇಳಿಕೆ ನೀಡಿದ್ದಾರೆ. ಅವರು ಇದನ್ನು ಶೇ 100 ರಷ್ಟು ನಂಬಿದ್ದಾರೆ ಮತ್ತು ಈ ಯೋಜನೆಯನ್ನು ಸಂಪೂರ್ಣವಾಗಿ ಬೆಂಬಲಿಸುತ್ತಾರೆ' ಎಂದು ಟ್ರಂಪ್ ಹೇಳಿದರು.
ಗಾಜಾ ಯುದ್ಧವನ್ನು ಕೊನೆಗೊಳಿಸುವ ತನ್ನ ಹೊಸ ಯೋಜನೆಗೆ 'ಅಗಾಧ ಬೆಂಬಲ' ನೀಡಿದ ಹಲವಾರು ಮುಸ್ಲಿಂ ಮತ್ತು ಅರಬ್ ರಾಷ್ಟ್ರಗಳ ನಾಯಕರಿಗೆ ಟ್ರಂಪ್ ಧನ್ಯವಾದ ಅರ್ಪಿಸಿದರು.
'ಈ ಪ್ರಸ್ತಾವನೆಯನ್ನು ಅಭಿವೃದ್ಧಿಪಡಿಸುವಲ್ಲಿ ಅಪಾರ ಬೆಂಬಲ ನೀಡಿದ್ದಕ್ಕಾಗಿ ಅನೇಕ ಅರಬ್ ಮತ್ತು ಮುಸ್ಲಿಂ ರಾಷ್ಟ್ರಗಳ ನಾಯಕರಿಗೆ ನಾನು ಧನ್ಯವಾದ ಹೇಳಲು ಬಯಸುತ್ತೇನೆ... ಸೌದಿ ಅರೇಬಿಯಾ, ಕತಾರ್‌ನ ಎಮಿರ್, ಯುಎಇ, ಜೋರ್ಡಾನ್ ಕಿಂಗ್, ಟರ್ಕಿ ಅಧ್ಯಕ್ಷ ಎರ್ಡೋಗನ್ ಮತ್ತು ಇಂಡೋನೇಷ್ಯಾ ಅಧ್ಯಕ್ಷರೊಂದಿಗಿನ ನನ್ನ ಸಭೆಗಳು ಮತ್ತು ಮಾತುಕತೆ ನಡೆಯಿತು. ನಾವೆಲ್ಲರೂ ಒಟ್ಟಿಗೆ ಇದ್ದೆವು' ಎಂದು ಅವರು ಹೇಳಿದರು.
ಟ್ರಂಪ್ ಯೋಜನೆ
ಸೋಮವಾರ ಘೋಷಿಸಲಾದ ಟ್ರಂಪ್ ಅವರ 'ಗಾಜಾ ಸಂಘರ್ಷವನ್ನು ಕೊನೆಗೊಳಿಸುವ ಸಮಗ್ರ ಯೋಜನೆ'ಯು, ಗಾಜಾವನ್ನು ಮೂಲಭೂತವಾದ ಮುಕ್ತ, ಭಯೋತ್ಪಾದನೆ ಮುಕ್ತ ವಲಯವನ್ನಾಗಿ ಮಾಡಲಾಗುವುದು ಮತ್ತು ಅದರ ನೆರೆಹೊರೆಯವರಿಗೆ ಬೆದರಿಕೆಯನ್ನುಂಟು ಮಾಡುವುದಿಲ್ಲ ಮತ್ತು ಅದನ್ನು ಪುನರಾಭಿವೃದ್ಧಿ ಮಾಡಲಾಗುವುದು ಎಂದು ಹೇಳುತ್ತದೆ.
'ಈ ಪ್ರಸ್ತಾಪಕ್ಕೆ ಎರಡೂ ಕಡೆಯವರು (ಇಸ್ರೇಲ್ ಮತ್ತು ಹಮಾಸ್) ಒಪ್ಪಿದರೆ, ಯುದ್ಧವು ತಕ್ಷಣವೇ ಕೊನೆಗೊಳ್ಳುತ್ತದೆ. ಒತ್ತೆಯಾಳುಗಳ ಬಿಡುಗಡೆಗೆ ಸಿದ್ಧತೆ ನಡೆಸಲು ಇಸ್ರೇಲಿ ಪಡೆಗಳು ಅಲ್ಲಿಂದ ಹಿಂದಿರುಗುತ್ತವೆ. ಈ ಸಮಯದಲ್ಲಿ, ವೈಮಾನಿಕ ಮತ್ತು ಫಿರಂಗಿ ಬಾಂಬ್ ದಾಳಿ ಸೇರಿದಂತೆ ಎಲ್ಲ ಮಿಲಿಟರಿ ಕಾರ್ಯಾಚರಣೆಗಳನ್ನು ಸ್ಥಗಿತಗೊಳಿಸಲಾಗುತ್ತದೆ ಮತ್ತು ಸಂಪೂರ್ಣ ಹಂತ ಹಂತದ ಹಿಂತೆಗೆದುಕೊಳ್ಳುವಿಕೆಗೆ ಷರತ್ತುಗಳನ್ನು ಪೂರೈಸುವವರೆಗೆ ಯುದ್ಧ ಸ್ಥಗಿತಗೊಂಡಿರುತ್ತದೆ. ಅಲ್ಲದೆ, ಈ ಯೋಜನೆಯ ಪ್ರಕಾರ, ಈ ಒಪ್ಪಂದವನ್ನು ಸಾರ್ವಜನಿಕವಾಗಿ ಒಪ್ಪಿಕೊಂಡ 72 ಗಂಟೆಗಳ ಒಳಗೆ ಇಸ್ರೇಲ್ ಎಲ್ಲ ಒತ್ತೆಯಾಳುಗಳು, ಜೀವಂತವಾಗಿರಲಿ ಅಥವಾ ಸತ್ತಿರಲಿ, ಹಿಂತಿರುಗಿಸಬೇಕೆಂದು ಸಹ ಕರೆ ನೀಡುತ್ತದೆ.
ಎಲ್ಲ ಒತ್ತೆಯಾಳುಗಳನ್ನು ಬಿಡುಗಡೆ ಮಾಡಿದ ನಂತರ, ಇಸ್ರೇಲ್ 250 ಜೀವಾವಧಿ ಶಿಕ್ಷೆ ಕೈದಿಗಳನ್ನು ಮತ್ತು ಅಕ್ಟೋಬರ್ 7, 2023ರ ನಂತರ ಬಂಧಿಸಲ್ಪಟ್ಟ 1700 ಗಾಜಾ ನಿವಾಸಿಗಳನ್ನು ಬಿಡುಗಡೆ ಮಾಡುತ್ತದೆ. ಅವರಲ್ಲಿ ಎಲ್ಲ ಮಹಿಳೆಯರು ಮತ್ತು ಮಕ್ಕಳು ಸೇರಿದ್ದಾರೆ.
ಈ ಘೋಷಣೆಯ ನಂತರ, ಸೌದಿ ಅರೇಬಿಯಾ, ಜೋರ್ಡಾನ್, ಯುಎಇ, ಇಂಡೋನೇಷ್ಯಾ, ಪಾಕಿಸ್ತಾನ, ಟರ್ಕಿ, ಕತಾರ್ ಮತ್ತು ಈಜಿಪ್ಟ್ ವಿದೇಶಾಂಗ ಮಂತ್ರಿಗಳು ಟ್ರಂಪ್ ಅವರ 'ನಾಯಕತ್ವ' ಮತ್ತು ಗಾಜಾದಲ್ಲಿ ಯುದ್ಧವನ್ನು ಕೊನೆಗೊಳಿಸಲು ಅವರ 'ಪ್ರಾಮಾಣಿಕ ಪ್ರಯತ್ನಗಳನ್ನು' ಸ್ವಾಗತಿಸಿ ಜಂಟಿ ಹೇಳಿಕೆ ನೀಡಿದರು.
Advertisement