

ಕಂಪಾಲ: ವಿಚಿತ್ರ ಬೆಳವಣಿಗೆಯಲ್ಲಿ ಉಗಾಂಡ ಸೇನಾ ಮುಖ್ಯಸ್ಥ ಟರ್ಕಿ ಬಳಿ ವಿಚಿತ್ರ ಬೇಡಿಕೆ ಇಟ್ಟಿದ್ದು, 'ಅತ್ಯಂತ ಸುಂದರ 'ಮದುವೆ ಹೆಣ್ಣು', 1 ಬಿಲಿಯನ್ ಡಾಲರ್ ಹಣ ಕೊಡಿ' ಎಂದು ಕೇಳಿದ್ದಾರೆ.
ಹೌದು.. ವಿಚಿತ್ರವಾದರೂ ಸತ್ಯ.. ಉಗಾಂಡಾದ ಸೇನಾ ಮುಖ್ಯಸ್ಥ ಮುಹೂಜಿ ಕೈನೆರುಗಾಬಾ, 1 ಬಿಲಿಯನ್ ಡಾಲರ್ ಕೇಳಿದ್ದಾರೆ. ಮಾತ್ರವಲ್ಲದೇ ಅತ್ಯಂತ ಸುಂದರ ಟರ್ಕಿಶ್ ಮಹಿಳೆಯನ್ನು ತಮ್ಮ ಪತ್ನಿಯಾಗಿ ನೀಡಬೇಕೆಂದು ಒತ್ತಾಯಿಸಿದ್ದಾರೆ.
ಇಸ್ಲಾಮಿಕ್ ಉಗ್ರಗಾಮಿಗಳನ್ನು ಎದುರಿಸುವಲ್ಲಿ ಸೊಮಾಲಿಯಾದಲ್ಲಿ ಉಗಾಂಡಾದ ದೀರ್ಘಕಾಲೀನ ಮಿಲಿಟರಿ ಕೊಡುಗೆಗಳಿಗಾಗಿ ಕೈನೆರುಗಾಬಾ ಈ ಬೇಡಿಕೆಗಳನ್ನು ಇಟ್ಟಿದ್ದಾರೆ ಎನ್ನಲಾಗಿದೆ.
ಒಂದು ವೇಳೆ ತಾವು ಕೇಳಿದ ಬೇಡಿಕೆಗಳನ್ನು ಟರ್ಕಿ 30 ದಿನಗಳೊಳಗೆ ಈಡೇರಿಸುವಲ್ಲಿ ವಿಫಲವಾದರೆ ಉಗಾಂಡಾದ ರಾಜಧಾನಿ ಕಂಪಾಲಾದಲ್ಲಿರುವ ಟರ್ಕಿಶ್ ರಾಯಭಾರ ಕಚೇರಿಯನ್ನು ಮುಚ್ಚುವುದು, ಟರ್ಕಿಶ್ ಏರ್‌ಲೈನ್ಸ್ ತನ್ನ ವಾಯುಪ್ರದೇಶದಲ್ಲಿ ಕಾರ್ಯನಿರ್ವಹಿಸುವುದರ ಮೇಲಿನ ನಿಷೇಧಿಸುವುದು ಸೇರಿದಂತೆ ತೀವ್ರ ರಾಜತಾಂತ್ರಿಕ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಕೈನೆರುಗಾಬಾ ಟರ್ಕಿಗೆ ಎಚ್ಚರಿಕೆ ನೀಡಿದ್ದಾರೆ.
ಯಾರು ಈ ಮುಹೂಜಿ ಕೈನೆರುಗಾಬಾ?
ಅಂದಹಾಗೆ ಉಗಾಂಡಾದ ಸೇನಾ ಮುಖ್ಯಸ್ಥ ಜನರಲ್ ಮುಹೂಜಿ ಕೈನೆರುಗಾಬಾ, ದೇಶದ ಅಧ್ಯಕ್ಷ ಯೊವೆರಿ ಮುಸೆವೇನಿ ಅವರ ಮಗ. ಇದೇ ಕಾರಣಕ್ಕೆ ಉಗಾಂಡದಲ್ಲಿ ಕೈನೆರುಗಾಬಾಗೆ ಅಧಿಕಾರ ಹೆಚ್ಚು.
ಶನಿವಾರ (ಏಪ್ರಿಲ್ 11) X ನಲ್ಲಿ ಮಾಡಿದ ಸರಣಿ ಪೋಸ್ಟ್‌ಗಳಲ್ಲಿ, ಉಗಾಂಡಾದ ರಕ್ಷಣಾ ಪಡೆಗಳ ಮುಖ್ಯಸ್ಥ ಕೈನೆರುಗಾಬಾ, ಸೊಮಾಲಿಯಾದಲ್ಲಿನ ಮೂಲಸೌಕರ್ಯ ಒಪ್ಪಂದಗಳಿಂದ ಮತ್ತು ದೇಶದ ರಾಜಧಾನಿ ಮೊಗಾದಿಶುವಿನಲ್ಲಿ ಬಂದರು ಮತ್ತು ವಿಮಾನ ನಿಲ್ದಾಣ ಕಾರ್ಯಾಚರಣೆಗಳಿಂದ ಟರ್ಕಿ ಲಾಭ ಗಳಿಸುತ್ತಿದೆ.
ಆದರೆ ಉಗಾಂಡಾ ಸುಮಾರು ಎರಡು ದಶಕಗಳ ಕಾಲ ಆಫ್ರಿಕನ್ ಯೂನಿಯನ್ ಕಾರ್ಯಾಚರಣೆಗಳ ಮೂಲಕ ಅಲ್-ಖೈದಾ ಅಂಗಸಂಸ್ಥೆ ಮತ್ತು ಇಸ್ಲಾಮಿಸ್ಟ್ ಭಯೋತ್ಪಾದಕ ಗುಂಪು ಅಲ್-ಶಬಾಬ್‌ನ ಉಗ್ರಗಾಮಿಗಳನ್ನು ಎದುರಿಸುವ ಭಾರೀ ಭದ್ರತಾ ಹೊರೆಯನ್ನು ಹೊತ್ತುಕೊಂಡಿದೆ. ಹೀಗಾಗಿ ಟರ್ಕಿ "ಭದ್ರತಾ ಲಾಭಾಂಶ"ವಾಗಿ $1 ಬಿಲಿಯನ್ ಹಣ ಮತ್ತು ಟರ್ಕಿಯ ಸುಂದರ ಹೆಣ್ಣನ್ನು ತಮಗೆ ಮದುವೆ ಮಾಡಿಕೊಡುವಂತೆ ಕೇಳಿದ್ದಾರೆ.
"ಟರ್ಕಿಯಿಂದ $1 ಬಿಲಿಯನ್ ಜೊತೆಗೆ, ನನಗೆ ಆ ದೇಶದ ಅತ್ಯಂತ ಸುಂದರ ಯುವತಿಯೊಬ್ಬಳು ಹೆಂಡತಿಯಾಗಬೇಕೆಂದು ನಾನು ಬಯಸುತ್ತೇನೆ!" ಎಂದು ಕೈನೆರುಗಾಬಾ ಅವರ X ನಲ್ಲಿ ಪೋಸ್ಟ್ ಮಾಡಿದ್ದಾರೆ.
"ಟರ್ಕಿಗೆ ಇದು ನಿಜವಾಗಿಯೂ ಸರಳ ಒಪ್ಪಂದ, ಟರ್ಕಿ ನಮ್ಮ ಸಮಸ್ಯೆಗಳನ್ನು ಪರಿಹರಿಸದಿದ್ದರೆ, ನಾವು 30 ದಿನಗಳಲ್ಲಿ ನಮ್ಮ ರಾಜತಾಂತ್ರಿಕ ಸಂಬಂಧಗಳನ್ನು ಕಡಿದುಕೊಳ್ಳುತ್ತೇವೆ. ನಾವು ಅವರೊಂದಿಗೆ ರಾಜತಾಂತ್ರಿಕ ಸಂಬಂಧಗಳನ್ನು ಶೀಘ್ರದಲ್ಲೇ ಮುಚ್ಚುತ್ತೇವೆ. ನಿಮ್ಮ ಬೆನ್ನಿಗೆ ಇರಿದ ಸ್ನೇಹಿತ ಯಾರಿಗೆ ಬೇಕು. ನಿಮ್ಮ ಸ್ವಂತ ಸುರಕ್ಷತೆಗಾಗಿ ಟರ್ಕಿಗೆ ಹೋಗುವ ಎಲ್ಲಾ ಪ್ರಯಾಣವನ್ನು ತಪ್ಪಿಸಿ ಎಂದು ಅವರು ಎಲ್ಲಾ ಉಗಾಂಡಾದವರಿಗೆ ಸಲಹೆ ನೀಡಿದ್ದಾರೆ.
ಕೈನೆರುಗಾಬಾ ವಿಚಿತ್ರ ಬೇಡಿಕೆ ಇದೇ ಮೊದಲೇನಲ್ಲ..
ಉಗಾಂಡಾ ಸೇನಾ ಮುಖ್ಯಸ್ಥ ಕೈನೆರುಗಾಬಾ ವಿಚಿತ್ರ ಬೇಡಿಕೆ ಇದೇ ಮೊದಲೇನಲ್ಲ.. ಈ ಹಿಂದೆ ಸಾಕಷ್ಟು ಬಾರಿ ಇಂತಹ ವಿಚಿತ್ರ ಬೇಡಿಕೆ ಇಟ್ಟಿದ್ದಾರೆ. 2022ರಲ್ಲಿ ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿಯನ್ನು ತಮಗೆ ಮದುವೆ ಮಾಡಿಕೊಟ್ಟರೆ ಇಟಲಿಗೆ 100 ಹಸುಗಳನ್ನು ನೀಡುವುದಾಗಿ ಬೇಡಿಕೆ ಇಟ್ಟಿದ್ದರು. ಅಲ್ಲದೆ ಈ ಹಸುಗಳನ್ನು ಅವರು ಭೂಮಿ ಮೇಲಿನ ಅತ್ಯಂತ ಸುಂದರವಾದ ಹಸುಗಳು ಎಂದು ಬಣ್ಣಿಸಿದ್ದರು.
ಅಲ್ಲದೆ "ರೋಮನ್ನರು ನಮ್ಮ ಹಸುಗಳನ್ನು ತಿರಸ್ಕರಿಸಿದರೆ, ನಾವು ರೋಮ್ ಅನ್ನು ವಶಪಡಿಸಿಕೊಳ್ಳಬೇಕು ಎಂದರ್ಥ. ಅದನ್ನು ಮಾಡಲು ನಮಗೆ ದಿನಗಳು ಬೇಕಾಗುತ್ತದೆ" ಎಂದು ಕೈನೆರುಗಾಬಾ ಹೇಳಿದ್ದರು.
ಇದಕ್ಕೆ ಪ್ರತಿಕ್ರಿಯೆಯಾಗಿ, ಕೈನೆರುಗಾಬಾ ಅವರ ತಂದೆ ಮತ್ತು ಉಗಾಂಡಾದ ಅಧ್ಯಕ್ಷ ಯೊವೆರಿ ಮುಸೆವೇನಿ ಅವರು ತಮ್ಮ ಮಗನ ಹೇಳಿಕೆಗಳಿಗೆ ಕ್ಷಮೆಯಾಚಿಸಬೇಕಾಯಿತು. ಅವರು "ಸಹೋದರ ರಾಷ್ಟ್ರಗಳ ಆಂತರಿಕ ವ್ಯವಹಾರಗಳಲ್ಲಿ" ಹಸ್ತಕ್ಷೇಪ ಮಾಡಿದ್ದಕ್ಕಾಗಿ ಅವರನ್ನು ಟೀಕಿಸಿದ್ದರು.
ತಮ್ಮ ತಂದೆಯ ಸಂಭಾವ್ಯ ಉತ್ತರಾಧಿಕಾರಿ ಎಂದು ಪರಿಗಣಿಸಲ್ಪಟ್ಟ ಮುಹೂಜಿ, 2022 ರಲ್ಲಿ ಕೀನ್ಯಾವನ್ನು ಆಕ್ರಮಿಸುವುದಾಗಿ ಸಾರ್ವಜನಿಕವಾಗಿ ಬೆದರಿಕೆ ಹಾಕಿದ್ದರು.
"ನೈರೋಬಿಯನ್ನು ವಶಪಡಿಸಿಕೊಳ್ಳಲು ನಮಗೆ, ನನ್ನ ಸೈನ್ಯ ಮತ್ತು ನನಗೆ ಎರಡು ವಾರಗಳೂ ಬೇಕಾಗುವುದಿಲ್ಲ" ಎಂದು ಅವರು ಹೇಳಿದ್ದರು. ಈ ಬೆದರಿಕೆಯು ಅವರ ತಂದೆ ಅವರನ್ನು ರಕ್ಷಣಾ ಪಡೆಗಳ ಮುಖ್ಯಸ್ಥ ಸ್ಥಾನದಿಂದ ತಾತ್ಕಾಲಿಕವಾಗಿ ವಜಾಗೊಳಿಸಲು ಮತ್ತು ಕೀನ್ಯಾಕ್ಕೆ ಔಪಚಾರಿಕ ಕ್ಷಮೆಯಾಚಿಸಲು ಕೇಳಿದ್ದರು.
Advertisement