

ನ್ಯೂಯಾರ್ಕ್: ಅಮೆರಿಕ ಸೇನೆಯಿಂದ ವೆನಿಜುವೆಲಾ ಅಧ್ಯಕ್ಷ ನಿಕೊಲಸ್ ಮಡೂರೊ ಮತ್ತು ಅವರ ಪತ್ನಿ ಸಿಲಿಯಾ ಪ್ಲೋರ್ಸ್ ಅವರನ್ನು ಸೆರೆಹಿಡಿಯಲ್ಪಟ್ಟ ನಂತರ ಅಮೆರಿಕದ ಡ್ರಗ್ಸ್ ಏಜೆನ್ಸಿ ಕಚೇರಿಯ ಕಾರಿಡಾರ್ ನಲ್ಲಿ ಸಶಸ್ತ್ರ ಸಿಬ್ಬಂದಿಯೊಂದಿಗೆ ತೆರಳುತ್ತಿರುವ ಮೊದಲ ವಿಡಿಯೋವನ್ನು ಅಮೆರಿಕದ ಅಧಿಕಾರಿಗಳು ಬಿಡುಗಡೆ ಮಾಡಿದ್ದಾರೆ.
ಮಡೂರೊ ಮತ್ತು ಪ್ಲೋರ್ಸ್ ಅವರು ಅಮೆರಿಕದ ಸರ್ಕಾರಿ ವಿಮಾನದಿಂದ ನ್ಯೂಯಾರ್ಕ್ ನಲ್ಲಿ ಇಳಿಯುತ್ತಿದ್ದಂತೆಯೇ ಅವರನ್ನು FBI ಏಜೆಂಟರು ಸುತ್ತುವರೆದಿದ್ದು, ಅವರನ್ನು ಗಾರ್ಡ್ ರಕ್ಷಣೆಯಲ್ಲಿ ಕರೆದೊಯ್ಯಲಾಗಿದೆ.
ನಿಕೊಲಸ್ ಮಡೂರೊ ಅಂತಾರಾಷ್ಟ್ರೀಯ ಮಾದಕ ವಸ್ತು ಕಳ್ಳಸಾಗಣೆ ಜಾಲದ ಪ್ರಮುಖ ಸೂತ್ರದಾರ ಎಂದು ಅಮೆರಿಕ ಆರೋಪಿಸಿದ್ದು, ಇಬ್ಬರನ್ನು ಕಸ್ಟಡಿಯಲ್ಲಿ ಇರಿಸಿ, ವಿಚಾರಣೆಗಾಗಿ ನ್ಯೂಯಾರ್ಕ್ ನ್ಯಾಯಾಧೀಶರ ಮುಂದೆ ಹಾಜರುಪಡಿಸುವ ಸಾಧ್ಯತೆಯಿದೆ. ಮಡುರೊ ನ್ಯೂಯಾರ್ಕ್ ಜೈಲಿನಲ್ಲಿದ್ದರು ಎನ್ನಲಾಗಿದೆ.
'Absolute Resolve' ಹೆಸರಿನ ಕಾರ್ಯಾಚರಣೆಯನ್ನು ತಿಂಗಳುಗಟ್ಟಲೇ ಪ್ಲಾನ್ ಮಾಡಿ ನಡೆಸಲಾಗಿದೆ ಎಂದು ರಾಯಿಟರ್ಸ್ ಸುದ್ದಿಸಂಸ್ಥೆ ವರದಿ ಮಾಡಿದೆ. ಇದು ಒಮ್ಮೆ ಆರಂಭವಾದರೆ 30 ನಿಮಿಷದಲ್ಲೇ ಮುಗಿಯುತ್ತದೆ. ಮಡುರೊ ಮತ್ತು ಅವರ ಪತ್ನಿಯನ್ನು ಬಂಧಿಸಿ ದೇಶದಿಂದ ಕರೆದೊಯ್ಯುವ ಮುನ್ನ US ಪಡೆಗಳು ವೆನೆಜುವೆಲಾದ ರಾಜಧಾನಿ ಕ್ಯಾರಕಾಸ್ ಮತ್ತು ಸುತ್ತಮುತ್ತಲಿನ ಪ್ರದೇಶದಲ್ಲಿ ವಾಯುದಾಳಿ ನಡೆಸಿದೆ. ಕ್ಯಾರಕಾಸ್‌ನಲ್ಲಿ ನಡೆದ ವೈಮಾನಿಕ ದಾಳಿಯಲ್ಲಿ ಕನಿಷ್ಠ 40 ಜನರು ಸಾವನ್ನಪ್ಪಿದ್ದಾರೆ ಎಂದು ವೆನೆಜುವೆಲಾದ ಅಧಿಕಾರಿಯೊಬ್ಬರು ದಿ ನ್ಯೂಯಾರ್ಕ್ ಟೈಮ್ಸ್‌ಗೆ ತಿಳಿಸಿದ್ದಾರೆ.
ಇನ್ನೂ ನಿಕೊಲಸ್ ಮಡೂರೊ ಸೆರೆಯಾದ ನಂತರ ಮಾತನಾಡಿದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ವೆನಿಜುವೆಲಾದಲ್ಲಿ ಅಧಿಕಾರ ವರ್ಗಾವಣೆ ಆಗುವವರೆಗೂ ದೇಶವನ್ನು ನಾವೇ ಮುನ್ನಡೆಸಲಿದ್ದೇವೆ ಎಂದು ಹೇಳಿದ್ದಾರೆ.
ಕಣ್ಣು ಕುಕ್ಕುವ ತೈಲ ಸಂಪತ್ತು:
ವೆನಿಜುವೆಲಾದ ಕಣ್ಣು ಕುಕ್ಕುವ ಸಮೃದ್ಧ ತೈಲ ಸಂಪತ್ತು ಇದಕ್ಕೆಲ್ಲಾ ಕಾರಣ ಎಂಬಂತಹ ಮಾತುಗಳು ಕೇಳಿಬರುತ್ತಿವೆ. ಇದಕ್ಕೆ ಪೂರಕವಾಗಿ ಮಾತನಾಡಿದ ಟ್ರಂಪ್, ವಾಷಿಂಗ್ಟನ್ ವೆನೆಜುವೆಲಾದ ಅಪಾರ ತೈಲ ನಿಕ್ಷೇಪಗಳನ್ನು ವಶಕ್ಕೆ ಪಡೆದು ಇತರ ದೇಶಗಳಿಗೆ ದೊಡ್ಡ ಪ್ರಮಾಣದಲ್ಲಿ" ಮಾರಾಟ ಮಾಡುತ್ತದೆ ಎಂದು ಹೇಳಿರುವುದಾಗಿ ಸುದ್ದಿಸಂಸ್ಥೆ AP ವರದಿ ಮಾಡಿದೆ.
ಯುಎಸ್ ಬೆಂಬಲಿತ ವಿರೋಧ ಪಕ್ಷದ ನಾಯಕಿ ಮತ್ತು ಕಳೆದ ವರ್ಷದ ನೊಬೆಲ್ ಶಾಂತಿ ಪ್ರಶಸ್ತಿ ಪುರಸ್ಕೃತೆ ಮಾರಿಯಾ ಕೊರಿನಾ ಮಚಾಡೊ ಸಾಮಾಜಿಕ ಮಾಧ್ಯಮದಲ್ಲಿ "ಸ್ವಾತಂತ್ರ್ಯದ ಸಮಯ ಬಂದಿದೆ" ಎಂದು ಪೋಸ್ಟ್ ಮಾಡಿದ್ದಾರೆ ಮತ್ತು 2024 ರ ಚುನಾವಣಾ ಅಭ್ಯರ್ಥಿ ಎಡ್ಮಂಡೊ ಗೊನ್ಜಾಲೆಜ್ ಉರುಟಿಯಾ ಅವರನ್ನು ತಕ್ಷಣ ಅಧ್ಯಕ್ಷ ಸ್ಥಾನ ವಹಿಸಿಕೊಳ್ಳುವಂತೆ ಒತ್ತಾಯಿಸಿದ್ದಾರೆ.
ಆದರೆ ಮಚಾಡೊ ವೆನೆಜುವೆಲಾದ ಹೊಸ ನಾಯಕನಾಗಬಹುದೆಂಬ ನಿರೀಕ್ಷೆಗಳ ಬಗ್ಗೆ ಟ್ರಂಪ್ ಒಲವು ಹೊಂದಿಲ್ಲ. ಅವರು ದೇಶದೊಳಗೆ "ಬೆಂಬಲ ಅಥವಾ ಗೌರವ" ಹೊಂದಿಲ್ಲ ಎಂದು ಹೇಳಿದ್ದಾರೆ. ಬದಲಾಗಿ, ವೆನೆಜುವೆಲಾದ ಸುಪ್ರೀಂ ಕೋರ್ಟ್‌ನಿಂದ ಹಂಗಾಮಿ ಅಧ್ಯಕ್ಷರಾಗಿ ನೇಮಕಗೊಂಡ ಉಪಾಧ್ಯಕ್ಷ ರಾದ ಡೆಲ್ಸಿ ರಾಡ್ರಿಗಸ್ ಅವರನ್ನು ಟ್ರಂಪ್ ಸಾರ್ವಜನಿಕವಾಗಿ ಹೊಗಳಿದ್ದಾರೆ. "ವೆನೆಜುವೆಲಾವನ್ನು ಮತ್ತೊಮ್ಮೆ ಶ್ರೇಷ್ಠಗೊಳಿಸಲು ನಾವು ಅಗತ್ಯವೆಂದು ಭಾವಿಸುವದನ್ನು ಮಾಡಲು ಅವರು ಸಿದ್ಧರಿದ್ದಾರೆ ಎಂದು ಹೇಳಿರುವುದಾಗಿ AP ತಿಳಿಸಿದೆ.
ನಾಳೆ ವಿಶ್ವಸಂಸ್ಥೆ ಸಭೆ: ಯುಎಸ್ ಮಿಲಿಟರಿ ಕ್ರಮ ಅಂತಾರಾಷ್ಟ್ರೀಯ ಮಟ್ಟದಲ್ಲಿ ವ್ಯಾಪಕ ಖಂಡನೆಗೆ ಗುರಿಯಾಗಿದೆ. ವಿಶ್ವಸಂಸ್ಥೆಯ ಭದ್ರತಾ ಮಂಡಳಿಯು ಕೊಲಂಬಿಯಾದ ಕೋರಿಕೆಯ ಮೇರೆಗೆ ರಷ್ಯಾ ಮತ್ತು ಚೀನಾ ಬೆಂಬಲದೊಂದಿಗೆ ಪರಿಸ್ಥಿತಿ ಕುರಿತು ಚರ್ಚಿಸಲು ಸೋಮವಾರ ಸಭೆ ಸೇರಲಿದೆ. ಅಮೆರಿಕದ ಕ್ರಮ ಅಪಾಯಕಾರಿಯಾದದ್ದು ಎಂದು ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿ ಜನರಲ್ ಆಂಟೋನಿಯೊ ಗುಟೆರೆಸ್ ಕಳವಳ ವ್ಯಕ್ತಪಡಿಸಿದ್ದಾರೆ.
ವಾಷಿಂಗ್ಟನ್ ಮತ್ತು ಕ್ಯಾರಕಾಸ್ ನಡುವಿನ ಉದ್ವಿಗ್ನತೆಯನ್ನು ಹೆಚ್ಚಿಸುವ ಕುರಿತು ಇತ್ತೀಚಿನ ತಿಂಗಳುಗಳಲ್ಲಿ ಭದ್ರತಾ ಮಂಡಳಿಯು ಈಗಾಗಲೇ ಎರಡು ಬಾರಿ ಸಭೆ ನಡೆಸಿದೆ ಎಂದು ರಾಯಿಟರ್ಸ್ ಹೇಳಿದೆ. ಅಮೆರಿಕದಲ್ಲಿಯೂ ಇದು ಟೀಕೆಗೆ ಗುರಿಯಾಗಿದೆ. ಟ್ರಂಪ್ ಅವರ ಕ್ರಮವನ್ನು ಡೆಮಾಕ್ರಟಿಕ್ ಪಕ್ಷದ ಕಮಲಾ ಹ್ಯಾರಿಸ್ ತೀವ್ರವಾಗಿ ಟೀಕಿಸಿದ್ದಾರೆ.
Advertisement