

ವಾಷಿಂಗ್ಟನ್: ರಷ್ಯಾದಿಂದ ತೈಲ ಖರೀದಿ ನಿಲ್ಲಿಸದಿದ್ದರೆ ಸುಂಕ ಏರಿಕೆ ಮಾಡುವುದಾಗಿ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಮತ್ತೆ ಭಾರತಕ್ಕೆ ಬೆದರಿಕೆ ಹಾಕಿದ್ದಾರೆ.
ಶ್ವೇತಭವನ ಬಿಡುಗಡೆ ಮಾಡಿದ ಆಡಿಯೋದಲ್ಲಿ ಈ ಹೇಳಿಕೆ ನೀಡಿರುವುದಾಗಿ ತಿಳಿದುಬಂದಿದೆ. ಹೇಳಿಕೆಯಲ್ಲಿ ಟ್ರಂಪ್ ಅವರು ಪ್ರಧಾನಮಂತ್ರಿ ನರೇಂದ್ರ ಮೋದಿಯವರನ್ನು ಹೊಗಳುತ್ತಲೇ ಭಾರತಕ್ಕೆ ಮತ್ತಷ್ಟು ತೆರಿಗೆ ಹೇರುವ ಬೆದರಿಕೆ ಹಾಕಿದ್ದಾರೆ.
ಮೋದಿ ತುಂಬಾ ಒಳ್ಳೆಯ ವ್ಯಕ್ತಿ. ನನ್ನನ್ನು ಸಂತೋಷಪಡಿಸಲು ಬಯಸಿದ್ದರು, ಆದರೆ, ನಾನು ಸಂತೋಷವಾಗಿಲ್ಲ ಎಂದು ಅವರಿಗೆ ತಿಳಿದಿದೆ. ನನ್ನನ್ನು ಸಂತೋಷಪಡಿಸುವುದು ಮುಖ್ಯವಾಗಿತ್ತು. ಅವರು ವ್ಯಾಪಾರ ಮುಂದುವರಿಸಿದ್ದಾರೆ ಮತ್ತು ನಾವು ಅವರ ಮೇಲೆ ಶೀಘ್ರದಲ್ಲೇ ಸುಂಕವನ್ನು ಹೆಚ್ಚಿಸಬಹುದು ಎಂದು ಹೇಳಿದ್ದಾರೆ.
ಕಳೆದ ವರ್ಷ ಟ್ರಂಪ್ ಅವರು ಭಾರತದ ಮೇಲೆ 25 ಪ್ರತಿಶತ ಸುಂಕವನ್ನು ಮತ್ತು ರಷ್ಯಾದಿಂದ ತೈಲ ಖರೀದಿಸುತ್ತಿರುವುದಕ್ಕೆ ಹೆಚ್ಚುವರಿಯಾಗಿ 25 ಪ್ರತಿಶತ ಸುಂಕವನ್ನು ವಿಧಿಸಿದ್ದರು. ಭಾರತದ ಮೇಲೆ ಒಟ್ಟು ಶೇ.50ರಷ್ಟು ಸುಂಕವನ್ನು ವಿಧಿಸಿದ್ದರು. ಈ ನಿರ್ಧಾರದಿಂದ ಭಾರತ ಮತ್ತು ಅಮೆರಿಕ ನಡುವಿನ ಸಂಬಂಧ ಹಳಸಿತ್ತು.
ಇತ್ತೀಚೆಗೆ ಪ್ರಧಾನಿ ಮೋದಿ ಅವರೊಂದಿಗೆ ದೂರವಾಣಿ ಸಂಭಾಷಣೆ ನಡೆಸಿದ ಸಂದರ್ಭದಲ್ಲಿ ಉಭಯ ನಾಯಕರು ದ್ವಿಪಕ್ಷೀಯ ವ್ಯಾಪಾರವನ್ನು ಬಲಪಡಿಸುವ ನಿಟ್ಟಿನಲ್ಲಿ ಮಾತುಕತೆಯನ್ನು ನಡೆಸಿದ್ದರು. ಇದಾದ ಕೆಲವೇ ವಾರಗಳ ಬಳಿಕ ಟ್ರಂಪ್ ಮತ್ತೆ ಸುಂಕ ಹೆಚ್ಚಳದ ಸುಳಿವು ನೀಡಿದ್ದಾರೆ.
Advertisement