

ನ್ಯೂಯಾರ್ಕ್: ನಾನು ವೆನೆಜುವೆಲಾದ ಅಧ್ಯಕ್ಷ, ಇನ್ನೂ ಆ ಹುದ್ದೆಯಲ್ಲಿರುವುದಾಗಿ ಹೇಳಿಕೊಂಡಿರುವ ನಿಕೋಲಾಸ್ ಮಡುರೊ, ಅಮೆರಿಕಾದ ಫೆಡರಲ್ ನ್ಯಾಯಾಲಯದಲ್ಲಿ ಮಾದಕ ವಸ್ತು ಕಳ್ಳಸಾಗಣೆ ಆರೋಪದಲ್ಲಿ ನಾನು ನಿರ್ದೋಷಿ ಎಂದು ಮನವಿ ಸಲ್ಲಿಸಿದ್ದಾರೆ.
ನ್ಯೂಯಾರ್ಕ್ ಕೋರ್ಟ್ ನಲ್ಲಿ ವಿಚಾರಣೆಗೆ ಹಾಜರುಪಡಿಸಿದಾಗ ನಿಕೋಲಾಸ್ ಮಡುರೊ ಅವರು,“ನನ್ನನ್ನು ನನ್ನ ದೇಶದಲ್ಲೇ ಅಪಹರಿಸಲಾಗಿದೆ. ನಾನು ಸಭ್ಯ ವ್ಯಕ್ತಿ, ನನ್ನ ದೇಶದ ಅಧ್ಯಕ್ಷನು ನಾನು,” ಎಂದು ಮಡುರೊ ಸ್ಪ್ಯಾನಿಷ್‌ನಲ್ಲಿ ಹೇಳಿದ್ದು, ನಾನು ಅಪರಾಧಿ ಅಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಇದೇ ವೇಳೆ ವಿಚಾರಣೆಗೆ ಹಾಜರಾಗಿದ್ದ ಮಡುರೊ ಅವರ ಪತ್ನಿ ಸಿಲಿಯಾ ಫ್ಲೋರ್ಸ್ ಅವರು ಮಾತನಾಡಿ, ನಾನು ವೆನೆಜುವೆಲಾದ ಪ್ರಥಮ ಮಹಿಳೆ. ಪ್ರಕರಣದಲ್ಲಿ ನಾವು ಸಂಪೂರ್ಣವಾಗಿ ನಿರಪರಾಧಿ ಎಂದು ಮನವಿ ಮಾಡಿದರು.
ಮುಂದಿನ ನ್ಯಾಯಾಲಯದ ವಿಚಾರಣೆ ಮಾರ್ಚ್ 17 ರಂದು ನಡೆಯಲಿದ್ದು, ನ್ಯಾಯಾಧೀಶರು ಮಡುರೊ ಅವರನ್ನು ಮತ್ತೆ ಹಾಜರಾಗಲು ಆದೇಶಿಸಿದ್ದಾರೆ.
ವೆನೆಝುವೆಲಾದಲ್ಲಿ ಅಮೆರಿಕ ಪ್ರಮುಖ ಮಿಲಿಟರಿ ಕಾರ್ಯಾಚರಣೆಯನ್ನು ನಡೆಸಿದ್ದು, ಅಲ್ಲಿನ ಅಧ್ಯಕ್ಷ ನಿಕೋಲಸ್ ಮಡುರೊ ಮತ್ತು ಅವರ ಪತ್ನಿ ಸಿಲಿಯಾ ಫ್ಲೋರ್ಸ್ ಅವರನ್ನು ಸೆರೆ ಹಿಡಿಯಲಾಗಿದೆ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
63 ವರ್ಷದ ಮಡುರೊ ಮತ್ತು ಅವರ ಪತ್ನಿ ಸಿಲಿಯಾ ಫ್ಲೋರೆಸ್ ಅವರನ್ನು ಶನಿವಾರ (ಜನವರಿ 3) ವೆನಿಜುವೆಲಾ ರಾಜಧಾನಿ ಕಾರಕಾಸ್‌ನಲ್ಲಿ ಅಮೆರಿಕ ಪಡೆಗಳು ವಶಕ್ಕೆ ಪಡೆದಿದ್ದು, ವಿಚಾರಣೆಗಾಗಿ ಅಮೆರಿಕಕ್ಕೆ ಕರೆದೊಯ್ಯಲಾಗಿದೆ. ಮಾದಕ ವಸ್ತು, ಭಯೋತ್ಪಾದನೆ ಕಳ್ಳಸಾಗಣೆಗೆ ಸಹಕಾರ ನೀಡುತ್ತಿರುವ ಆರೋಪಗಳ ಹಿನ್ನೆಲೆಯಲ್ಲಿ ಮಡುರೊ ಅವರನ್ನು ಬಂಧಿಸಿ ನ್ಯೂಯಾರ್ಕ್‌ನ ಕಾರಾಗೃಹದಲ್ಲಿ ಇರಿಸಲಾಗಿದೆ.
2020ರಲ್ಲಿ ಮಡುರೊ ವಿರುದ್ಧ ಮಾದಕ ವಸ್ತು ಸಾಗಣೆ-ಭಯೋತ್ಪಾದನಾ ಸಂಚು ಸೇರಿದಂತೆ ಹಲವು ಆರೋಪಗಳನ್ನು ಅಮೆರಿಕ ದಾಖಲಿಸಿತ್ತು. ಆದರೆ ಅವರು ಯಾವುದೇ ಅಪರಾಧ ಚಟುವಟಿಕೆಯಲ್ಲಿ ತೊಡಗಿಕೊಂಡಿಲ್ಲವೆಂದು ನಿರಾಕರಿಸುತ್ತಾ ಬಂದಿದ್ದಾರೆ.
ಇನ್ನು ಅಮೆರಿಕದ ಪಡೆಗಳಿಂದ ಸೆರೆಹಿಡಿಯಲ್ಪಟ್ಟ ವೆನಿಜುವೆಲಾದ ಅಧ್ಯಕ್ಷ ನಿಕೋಲಸ್ ಮಡುರೊ ಅವರ ಮೊದಲ ಫೋಟೊವನ್ನು ಡೊನಾಲ್ಡ್ ಟ್ರಂಪ್ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದರು.
ಬೂದು ಬಣ್ಣದ ಸ್ವೆಟ್‌ಶರ್ಟ್ ಮತ್ತು ಸ್ವೆಟ್‌ಪ್ಯಾಂಟ್ ಧರಿಸಿ, ದೊಡ್ಡ ಹೆಡ್‌ಫೋನ್‌ಗಳನ್ನು ಧರಿಸಿ, 63 ವರ್ಷದ ಮಡುರೊ ಪ್ಲಾಸ್ಟಿಕ್ ನೀರಿನ ಬಾಟಲಿಯನ್ನು ಹಿಡಿದುಕೊಂಡು ನಿಂತಿರುವ ಫೋಟೋ ವೈರಲ್ ಆಗಿದೆ.
ವೆನಿಜುವೆಲಾ ಅಧ್ಯಕ್ಷರನ್ನು ಬಂಧಿಸಿದ ಬಳಿಕ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕೊಲಂಬಿಯಾದ ಅಧ್ಯಕ್ಷರಿಗೆ ಎಚ್ಚರಿಕೆ ನೀಡಿದ್ದಾರೆ. ಅಮೆರಿಕದ ಅಧ್ಯಕ್ಷರ ಎಚ್ಚರಿಕೆಗೆ ಪ್ರತಿಕ್ರಿಯಿಸಿರುವ ಕೊಲಂಬಿಯಾದ ಅಧ್ಯಕ್ಷ ಗುಸ್ಟಾವೊ ಪೆಟ್ರೋ, ಅಮೆರಿಕವು ಲ್ಯಾಟಿನ್ ಅಮೆರಿಕದ ಸಾರ್ವಭೌಮತ್ವದ ಮೇಲೆ ದಾಳಿ ನಡೆಸುತ್ತಿದೆ. ಇದು ಮಾನವೀಯ ಬಿಕ್ಕಟ್ಟಿಗೆ ಕಾರಣವಾಗುತ್ತದೆ ಎಂದು ಹೇಳಿದ್ದಾರೆ.
Advertisement