

ಢಾಕಾ: ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತ ಹಿಂದೂಗಳ ನರಮೇಧ ಮುಂದುವರೆದಿದ್ದು, ಸೋಮವಾರ ಮತ್ತೆ ಇಬ್ಬರು ಹಿಂದೂ ಯುವಕರನ್ನು ಕೊಲೆ ಮಾಡಲಾಗಿದೆ. ನರಸಿಂಗಡಿ ಜಿಲ್ಲೆಯ ನಿವಾಸಿ, ದಿನಸಿ ಅಂಗಡಿ ಮಾಲೀಕರಾದ ಮೋನಿ ಚಕ್ರಬೊರ್ತಿ ಅವರನ್ನು ದುಷ್ಕರ್ಮಿಗಳು ಅಟ್ಟಾಡಿಸಿ ಮಾರಕಾಸ್ತ್ರಗಳಿಂದ ಹೊಡೆದು ಕೊಂದಿದ್ದಾರೆ.
ಮತ್ತೊಂದು ಘಟನೆಯಲ್ಲಿ, ಯಶೋರ್ ಜಿಲ್ಲೆಯ ಕೋಪಾಲಿಯಾ ಬಜಾರ್‌ನಲ್ಲಿ 45 ವರ್ಷದ ರಾಣಾ ಪ್ರತಾಪ್ ಅವರನ್ನು ಹತ್ಯೆ ಮಾಡಲಾಗಿದೆ. ಇವರು ಪತ್ರಿಕೆಯೊಂದರ ಕಾರ್ಯಕಾರಿ ಸಂಪಾದಕರೂ ಆಗಿದ್ದರು ಎನ್ನಲಾಗಿದೆ.
ಬೈಕ್‌ನಲ್ಲಿ ಬಂದ ದುಷ್ಕರ್ಮಿಗಳು ಅವರೊಂದಿಗೆ ವಾಗ್ವಾದ ನಡೆಸಿದ್ದು, ಅವರ ತಲೆಗೆ ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ. ಅಷ್ಟೇ ಅಲ್ಲದೆ, ಅವರ ಗಂಟಲನ್ನು ಸೀಳಿ ವಿಕೃತಿ ಮೆರೆದಿದ್ದಾರೆ ಎನ್ನಲಾಗಿದೆ. ಹೀಗೆ 18 ದಿನಗಳಲ್ಲಿ ಆರು ಮಂದಿ ಹಿಂದೂಗಳನ್ನು ಹತ್ಯೆ ಮಾಡಲಾಗಿದೆ.
ಈ ಮಧ್ಯೆ ಹತ್ಯೆಗೀಡಾದ ವಿದ್ಯಾರ್ಥಿ ನಾಯಕ ಷರೀಫ್ ಒಸ್ಮಾನ್ ಹಾದಿಗೆ ನ್ಯಾಯ ಒದಗಿಸಬೇಕು. ಬಾಂಗ್ಲಾದೇಶದಲ್ಲಿ ನೆಲೆಸಿರುವ ಎಲ್ಲಾ ಭಾರತೀಯರ ಪರವಾನಗಿಗಳನ್ನು ರದ್ದುಗೊಳಿಸಬೇಕು ಎಂದು ಒತ್ತಾಯಿಸಿ ಒಸ್ಮಾನ್ ಹಾದಿ ಪಕ್ಷ ಢಾಕಾದಲ್ಲಿ ಪ್ರತಿಭಟನೆ ನಡೆಸಿದೆ. ಭಾರತದಲ್ಲಿ ಆಶ್ರಯ ಪಡೆದಿರುವ ಕೊಲೆ ಆರೋಪಿಯನ್ನು ಬಾಂಗ್ಲಾದೇಶಕ್ಕೆ ಹಿಂದಿರುಗಿಸಬೇಕು. ಒಂದು ವೇಳೆ ಇದಕ್ಕೆ ಭಾರತ ಒಪ್ಪದಿದ್ದರೆ ಬಾಂಗ್ಲಾದೇಶ ಅಂತಾರಾಷ್ಟ್ರೀಯ ನ್ಯಾಯಾಲಯದ ಮೊರೆ ಹೋಗಬೇಕು ಎಂದು
Inqilab Moncho ಎಚ್ಚರಿಸಿದೆ ಎಂದು ಢಾಕಾ ಟ್ರಿಬ್ಯೂನ್ ಪತ್ರಿಕೆ ವರದಿ ಮಾಡಿದೆ. ಹಾದಿ ಕೊಂದ ಹಂತಕರು ಭಾರತಕ್ಕೆ ಬಂದಿದ್ದಾರೆ ಎಂಬ ಆರೋಪವನ್ನು ಭಾರತೀಯ ಅಧಿಕಾರಿಗಳು ತಳ್ಳಿಹಾಕಿದ್ದಾರೆ. ಅಕ್ರಮವಾಗಿ ಗಡಿಯೊಳಗೆ ನುಸುಳಿದಿರುವುದಕ್ಕೆ ಯಾವುದೇ ಸಾಕ್ಷ್ಯ ಇಲ್ಲ ಎಂದಿದ್ದಾರೆ.
ಹಾದಿ ಕೊಲೆ ಪ್ರಕರಣದ ತನಿಖೆ ಸರಿಯಾಗಿ ನಡೆಯುತ್ತಿಲ್ಲ. ಕೊಲೆ ಮಾಡಿದವರು, ಕೊಲೆ ಸಂಚು ರೂಪಿಸಿದವರು, ಅವರ ಸಹಚರರು ಹಾಗೂ ಅವರಿಗೆ ಆಶ್ರಯ ನೀಡಿದವರು ಸೇರಿದಂತೆ ಎಲ್ಲರನ್ನೂ ಫೆಬ್ರವರಿ 12 ರಂದು ನಡೆಯಲಿರುವ ಸಂಸತ್ ಚುನಾವಣೆಗೂ ಮುನ್ನಾ ವಿಚಾರಣೆಗೆ ಒಳಪಡಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ. ಹಾದಿಯ ರಕ್ತ ವ್ಯರ್ಥವಾಗಲು ಬಿಡುವುದಿಲ್ಲ,' ನನ್ನ ಸಹೋದರ ಸಮಾಧಿಯಲ್ಲಿ ಮಲಗಿರುವಾಗ ಕೊಲೆಗಾರರು ಯಾಕೆ ಸ್ವಚ್ಛಂದವಾಗಿ ಓಡಾಡಬೇಕು. ಫ್ಯಾಸಿಸ್ಟ್ ಸಹಚರರನ್ನು' ಗುರುತಿಸಿ, ಬಂಧಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದ್ದಾರೆ.
Advertisement