

ದುಬೈ: ಇರಾನ್ ಸರ್ಕಾರದ ವಿರುದ್ಧ ನಡೆಯುತ್ತಿರುವ ಪ್ರತಿಭಟನೆ ಎರಡು ವಾರಗಳನ್ನು ಪೂರೈಸಿದೆ. ಪ್ರತಿಭಟನೆ ಹತ್ತಿಕ್ಕಲ್ಲು ಸರ್ಕಾರ ಪ್ರಯತ್ನ ನಡೆಸುತ್ತಿದ್ದರೂ ಪ್ರತಿಭಟನೆ ಕಾವು ತಣಗಾಗಿಲ್ಲ. ಶನಿವಾರ ಕರಾಜ್ ನಗರದಲ್ಲಿ ಸರ್ಕಾರಿ ಕಟ್ಟಡಗಳಿಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಲಾಗಿದೆ.
ಈ ಮಧ್ಯೆ ಇಸ್ಲಾಮಿಕ್ ಗಣರಾಜ್ಯವು ಹೊರ ಜಗತ್ತಿನ ಸಂಪರ್ಕ ಕಳೆದುಕೊಂಡಿದೆ. ಇಂಟರ್ ನೆಟ್ ಮತ್ತು ದೂರವಾಣಿ ಸಂಪರ್ಕಗಳನ್ನು ಕಡಿತಗೊಳಿಸಿರುವುದರಿಂದ ಇರಾನ್ ಹೊರ ಜಗತ್ತಿನ ಸಂಪರ್ಕ ಕಳೆದುಕೊಂಡಿದೆ. ಆದ್ದರಿಂದ ಅಲ್ಲಿ ನಡೆಯುತ್ತಿರುವ ಬೆಳವಣಿಗೆಗಳ ಬಗ್ಗೆ ವಿದೇಶದಿಂದ ಮಾಹಿತಿ ಕಲೆಹಾಕುವುದು ಕಷ್ಟಕರವಾಗಿದೆ.
ಪ್ರತಿಭಟನೆ ವೇಳೆ ನಡೆದ ಹಿಂಸಾಚಾರದಲ್ಲಿ ಈವರೆಗೆ 65 ಮಂದಿ ಮೃತಪಟ್ಟಿದ್ದಾರೆ. 2,300 ಕ್ಕೂ ಹೆಚ್ಚು ಜನರನ್ನು ಬಂಧಿಸಲಾಗಿದೆ ಎಂದು ಯುಎಸ್ ಮೂಲದ ಮಾನವ ಹಕ್ಕುಗಳ ಸಂಸ್ಥೆ ತಿಳಿಸಿದೆ. ಭದ್ರತಾ ಪಡೆಯ ಕೆಲವು ಸಿಬ್ಬಂದಿ ಮೃತಪಟ್ಟಿರುವುದಾಗಿ ಇರಾನ್ ನ ಸರ್ಕಾರಿ ವಾಹಿನಿ ವರದಿ ಮಾಡಿದೆ.
ಅಮೆರಿಕದ ಎಚ್ಚರಿಕೆಗಳ ಹೊರತಾಗಿಯೂ ಸುಪ್ರೀಂ ನಾಯಕ ಅಯತೊಲ್ಲಾ ಅಲಿ ಖಮೇನಿ, ಇರಾನ್ ಹಿಂದೆ ಸರಿಯುವುದಿಲ್ಲ ಎಂದು ಹೇಳಿದ್ದಾರೆ.
ಪ್ರತಿಭಟನೆಗಳಲ್ಲಿ ಭಾಗವಹಿಸುವವರನ್ನು "ದೇವರ ಶತ್ರು" ಎಂದು ಪರಿಗಣಿಸಲಾಗುತ್ತದೆ, ಮರಣದಂಡನೆ ಆರೋಪ ಎದುರಿಸಬೇಕಾಗುತ್ತದೆ ಎಂದು ಇರಾನ್‌ನ ಅಟಾರ್ನಿ ಜನರಲ್ ಮೊಹಮ್ಮದ್ ಮೊವಾಹೇದಿ ಆಜಾದ್ ಹೇಳುವುದರೊಂದಿಗೆ ಬೆದರಿಕೆ ಹಾಕಿದ್ದಾರೆ.
"ಗಲಭೆಕೋರರಿಗೆ ಸಹಾಯ ಮಾಡಿದವರು" ಸಹ ಈ ಆರೋಪವನ್ನು ಎದುರಿಸಬೇಕಾಗುತ್ತದೆ ಎಂದು ಅವರು ನೀಡಿರುವ ಹೇಳಿಕೆಯನ್ನು ಇರಾನ್ ರಾಜ್ಯ ವಾಹಿನಿ ಪ್ರಸಾರ ಮಾಡಿದೆ.
ಪ್ರಾಸಿಕ್ಯೂಟರ್‌ಗಳು ಎಚ್ಚರಿಕೆಯಿಂದ ಮತ್ತು ವಿಳಂಬವಿಲ್ಲದೆ, ದೋಷಾರೋಪಣೆ ನೀಡುವ ಮೂಲಕ ದೇಶದ ಮೇಲೆ ವಿದೇಶಿ ಪ್ರಾಬಲ್ಯವನ್ನು ಬಯಸುವವರ ವಿರುದ್ಧ ವಿಚಾರಣೆ ಮತ್ತು ನಿರ್ಣಾಯಕ ಘರ್ಷಣೆಗೆ ಆಧಾರವನ್ನು ಸಿದ್ಧಪಡಿಸಬೇಕು ಎಂದು ಹೇಳಿಕೆಯಲ್ಲಿ ಉಲ್ಲೇಖಿಸಲಾಗಿದೆ. ಸಹಾನುಭೂತಿ ತೋರದೆ ವಿಚಾರಣೆ ಪ್ರಕ್ರಿಯೆ ನಡೆಸಬೇಕು ಎಂದು ಸೂಚಿಸಲಾಗಿದೆ.
ಈ ನಡುವೆ ಯುಎಸ್ ಸ್ಟೇಟ್ ಸೆಕ್ರೆಟರಿ ಮಾರ್ಕೊ ರೂಬಿಯೊ ಪ್ರತಿಭಟನಾಕಾರರಿಗೆ ಬೆಂಬಲ ನೀಡಿದ್ದಾರೆ.
Advertisement