

ಪುರುಷರು ಗರ್ಭಧರಿಸಬಹುದೇ ಎಂದು ಭಾರತೀಯ ಮೂಲದ ಪ್ರಸೂತಿ-ಸ್ತ್ರೀರೋಗತಜ್ಞೆ ಡಾ. ನಿಶಾ ವರ್ಮಾ ಅವರನ್ನು ರಿಪಬ್ಲಿಕನ್ ಸೆನೆಟರ್ ಜೋಶ್ ಹಾವ್ಲಿ ಪದೇ ಪದೇ ಪ್ರಶ್ನಿಸಿದ್ದು, ಗರ್ಭಪಾತ ಮಾತ್ರೆಗಳ ಸುರಕ್ಷತೆ ಮತ್ತು ನಿಯಂತ್ರಣದ ಕುರಿತು ಯುಎಸ್ ಸೆನೆಟ್ ಸಮಿತಿ ಚರ್ಚೆ ಭಾರೀ ಸುದ್ದಿಯಾಗಿದೆ.
ಆರೋಗ್ಯ, ಶಿಕ್ಷಣ, ಕಾರ್ಮಿಕ ಮತ್ತು ಪಿಂಚಣಿ ಸೆನೆಟ್ ಸಮಿತಿಯ ಚರ್ಚೆ ಸಂದರ್ಭದಲ್ಲಿ ಇದು ನಡೆದಿದೆ. ಇದು ಮೂಲತಃ ಔಷಧ ಗರ್ಭಪಾತದ ಸುರಕ್ಷತೆ, ವಿಶೇಷವಾಗಿ ಔಷಧ ಮೈಫೆಪ್ರಿಸ್ಟೋನ್ ಮತ್ತು ಬಲವಂತ ಅಥವಾ ದುರುಪಯೋಗದ ಕಳವಳಗಳ ಮೇಲೆ ಕೇಂದ್ರೀಕರಿಸಿತ್ತು.
ಜಾರ್ಜಿಯಾ ಮತ್ತು ಮ್ಯಾಸಚೂಸೆಟ್ಸ್‌ನಲ್ಲಿ ಸಂತಾನೋತ್ಪತ್ತಿ ಆರೋಗ್ಯ ಸೇವೆಯನ್ನು ಒದಗಿಸುವ ಡಾ. ನಿಶಾ ವರ್ಮಾ ಅವರನ್ನು ಸಮಿತಿಯ ಡೆಮಾಕ್ರಟಿಕ್ ಸದಸ್ಯರು ಮಾತನಾಡಲು ಕರೆದಿದ್ದರು.
ಸೆನೆಟ್ ಯಾವುದರ ಬಗ್ಗೆ ಚರ್ಚೆ ನಡೆಸಿತು?
ಗರ್ಭಪಾತ ಮಾತ್ರೆಗಳ ಸುರಕ್ಷತೆ ಮತ್ತು ಅಸ್ತಿತ್ವದಲ್ಲಿರುವ ನಿಯಮಗಳು ಸಾಕಾಗುತ್ತವೆಯೇ ಎಂದು ಪರಿಶೀಲಿಸುವುದು ಈ ಚರ್ಚೆಯ ಉದ್ದೇಶವಾಗಿತ್ತು. ಅಧಿವೇಶನದಲ್ಲಿ ಎತ್ತಿದ ಒಂದು ಕಳವಳವೆಂದರೆ ಪುರುಷರು ಗರ್ಭಪಾತ ಮಾತ್ರೆಗಳನ್ನು ಪಡೆಯುವ ಸಾಧ್ಯತೆಯಾಗಿದ್ದು, ಮಹಿಳೆಯ ಮೇಲೆ ಗರ್ಭಧಾರಣೆಯನ್ನು ಅಂತ್ಯಗೊಳಿಸಲು ಒತ್ತಡ ಹೇರುವ ಸಾಧ್ಯತೆ.
ಆ ಸಂದರ್ಭದಲ್ಲಿ ಸೆನೆಟರ್ ಆಶ್ಲೇ ಮೂಡಿ ಈ ವಿಷಯವನ್ನು ಪ್ರಸ್ತಾಪಿಸಿ ಡಾ. ವರ್ಮಾ ಅವರನ್ನು ಪ್ರಶ್ನಿಸಿದರು. ಪುರುಷರು ಗರ್ಭಧರಿಸಬಹುದೇ ಎಂದು ಕೇಳಿದ ಪ್ರಶ್ನೆಗೆ ಡಾ ವರ್ಮಾ ನೇರವಾಗಿ ಉತ್ತರಿಸಲಿಲ್ಲ. ಬದಲಾಗಿ, ನಾನು ಮಹಿಳೆಯರು ಎಂದು ಗುರುತಿಸಿಕೊಳ್ಳದ ಜನರಿಗೂ ಚಿಕಿತ್ಸೆ ನೀಡುತ್ತೇನೆ ಎಂದರು. ಹಾಲೆ ಅವರು ಪದೇ ಪದೇ ನೇರ ಉತ್ತರಕ್ಕಾಗಿ ಒತ್ತಾಯಿಸಿದಾಗ, ಡಾ. ವರ್ಮಾ ಅದನ್ನು ರಾಜಕೀಯ ಪ್ರೇರಿತ ಪ್ರಶ್ನೆ ಎಂದರು. ಆದರೆ, ಕೊನೆಗೂ ಅವರು ಹಾಲೆ ಅವರ ಪ್ರಶ್ನೆಗೆ ಯಾವ ವಿಧಾನದಲ್ಲಿಯೂ ಉತ್ತರ ಕೊಡಲೇ ಇಲ್ಲ.
ನಂತರವೂ ಸೆನೆಟರ್ ಹಾವ್ಲಿ ನೇರವಾಗಿ ಉತ್ತರಿಸಲು ವರ್ಮಾ ಅವರನ್ನು ಒತ್ತಾಯಿಸಿದಾಗ, ನಿಮ್ಮ ಪ್ರಶ್ನೆಯ ಗುರಿ ಏನೆಂದು ನನಗೆ ನಿಜವಾಗಿಯೂ ಖಚಿತವಿಲ್ಲ ಎಂದು ವರ್ಮಾ ಹೇಳಿದರು.
ಜೈವಿಕ ವಾಸ್ತವವನ್ನು ಸ್ಥಾಪಿಸುವುದು ಗುರಿಯಾಗಿದೆ. ವಿಜ್ಞಾನ ಮತ್ತು ಪುರಾವೆಗಳು ರಾಜಕೀಯವನ್ನು ನಿಯಂತ್ರಿಸಬಾರದು, ಆದರೆ ನಿಯಂತ್ರಿಸಬೇಕು ಎಂದು ನೀವು ಸ್ವಲ್ಪ ಸಮಯದ ಹಿಂದೆ ಹೇಳಿದ್ದೀರಿ ಎಂದರು.
ಸೆನೆಟರ್ ಹಾವ್ಲಿ, ವಿಜ್ಞಾನವು ವೈದ್ಯಕೀಯಕ್ಕೆ ಮಾರ್ಗದರ್ಶನ ನೀಡಬೇಕು ಎಂದು ಅವರು ಪುನರಾವರ್ತಿಸಿದರು ಮತ್ತು ಸ್ಪಷ್ಟ ಉತ್ತರಕ್ಕಾಗಿ ವರ್ಮಾ ಅವರನ್ನು ಮತ್ತೆ ಕೇಳಿದರು. "ಹಾಗಾದರೆ ಪುರುಷರು ಗರ್ಭ ಧರಿಸಬಹುದೇ ಮತ್ತು ನೀವು ವೈದ್ಯರು. ಪುರಾವೆಗಳು ವೈದ್ಯಕೀಯಕ್ಕೆ ಮಾರ್ಗದರ್ಶನ ನೀಡಬೇಕು ಎಂದರು.
ಸಂಭಾಷಣೆ ಎಲ್ಲಿಗೆ ಹೋಗುತ್ತಿದೆ ಅಥವಾ ಈ ಪ್ರಶ್ನೆಯ ಉದ್ದೇಶ ಏನು ಎಂದು ನನಗೆ ಖಚಿತವಿಲ್ಲದ ಕಾರಣ ನಾನು ಅಲ್ಲಿ ಹಿಂಜರಿದೆ. ನಾನು ಅನೇಕ ಗುರುತುಗಳನ್ನು ಹೊಂದಿರುವ ಜನರನ್ನು ನೋಡಿಕೊಳ್ಳುತ್ತೇನೆ ಎಂದು ನಿಶಾ ವರ್ಮಾ ಹೇಳಿದರು.
ಯಾರು ಈ ಡಾ. ನಿಶಾ ವರ್ಮಾ?
ಡಾ. ನಿಶಾ ವರ್ಮಾ ಅವರು ಭಾರತೀಯ ಮೂಲದ ವಲಸೆ ದಂಪತಿ ಪುತ್ರಿ. ಈಕೆ ಉತ್ತರ ಕೆರೊಲಿನಾದ ಗ್ರೀನ್ಸ್‌ಬೊರೊದಲ್ಲಿ ಜನಿಸಿದರು. ಇವರು ಪ್ರಸೂತಿ ಮತ್ತು ಸ್ತ್ರೀರೋಗ ಶಾಸ್ತ್ರದಲ್ಲಿ ಮಂಡಳಿ-ಪ್ರಮಾಣೀಕೃತ ವೈದ್ಯರಾಗಿದ್ದಾರೆ . 'ಕಾಂಪ್ಲೆಕ್ಸ್ ಫ್ಯಾಮಿಲಿ ಪ್ಲಾನಿಂಗ್'ನಲ್ಲಿಯೂ ಪರಿಣತಿ ಹೊಂದಿದ್ದಾರೆ.
ಉತ್ತರ ಕೆರೊಲಿನಾ ವಿಶ್ವವಿದ್ಯಾಲಯದಿಂದ ಜೀವಶಾಸ್ತ್ರ ಮತ್ತು ಮಾನವಶಾಸ್ತ್ರದಲ್ಲಿ ಪದವಿ ಹಾಗೂ ವೈದ್ಯಕೀಯ ಪದವಿ ಪಡೆದಿದ್ದಾರೆ. ಎಮೋರಿ ವಿಶ್ವವಿದ್ಯಾಲಯದಿಂದ ಸಾರ್ವಜನಿಕ ಆರೋಗ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ನಿಶಾ ಅವರು ಬೆತ್ ಇಸ್ರೇಲ್ ಡೀಕೋನೆಸ್ ಮೆಡಿಕಲ್ ಸೆಂಟರ್‌ನಲ್ಲಿ ತರಬೇತಿ ಪಡೆದುಕೊಂಡಿದ್ದಾರೆ. ಸದ್ಯ ಅವರು ಅಮೆರಿಕನ್ ಕಾಲೇಜ್ ಆಫ್ ಅಬ್ಸ್ಟೆಟ್ರಿಶಿಯನ್ಸ್ ಅಂಡ್ ಗೈನೆಕಾಲಜಿಸ್ಟ್ಸ್ ನಲ್ಲಿ ಸಂತಾನೋತ್ಪತ್ತಿ ಆರೋಗ್ಯ ನೀತಿ ಮತ್ತು ಅಡ್ವೊಕಸಿಯ ಹಿರಿಯ ಸಲಹೆಗಾರರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರು ಎಮೋರಿ ವಿಶ್ವವಿದ್ಯಾಲಯದ ವೈದ್ಯಕೀಯ ಶಾಲೆಯಲ್ಲಿ ಅಡ್ಜಂಕ್ಟ್ ಅಸಿಸ್ಟೆಂಟ್ ಪ್ರೊಫೆಸರ್ ಆಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ.
Advertisement