

ಸ್ಪೇನ್: ಆಂಡಲೂಸಿಯಾದ ದಕ್ಷಿಣ ಪ್ರದೇಶದಲ್ಲಿ ಎರಡು ಹೈಸ್ಪೀಡ್ ರೈಲುಗಳ ನಡುವೆ ಡಿಕ್ಕಿ ಉಂಟಾಗಿ 21 ಜನರು ಸಾವನ್ನಪ್ಪಿದ್ದು, 70 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.
ಭಾನುವಾರ ಸಂಜೆ ಮಲಗಾದಿಂದ ಮ್ಯಾಡ್ರಿಡ್‌ಗೆ ತೆರಳುತ್ತಿದ್ದ ಪ್ರಯಾಣಿಕ ರೈಲೊಂದು ಆಡಮುಜ್ ಬಳಿ ಹಳಿತಪ್ಪಿ, ಇನ್ನೊಂದು ಟ್ರ್ಯಾಕ್‌ಗೆ ಜಿಗಿದಿದ್ದು, ಎದುರುನಿಂದ ಬರುತ್ತಿದ್ದ ರೈಲಿಗೆ ಅಪ್ಪಳಿಸಿದೆ ಎಂದು ಸ್ಪೇನ್ ನ ಅದಿಪ್ ರೈಲು ನೆಟ್ ವಾರ್ಕ್ ಆಪರೇಟರ್ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ.
21 ಜನರು ಸಾವನ್ನಪ್ಪಿದ್ದಾರೆ ಎಂದು ಪೊಲೀಸ್ ವಕ್ತಾರರು ಸುದ್ದಿಸಂಸ್ಥೆ AFP ಗೆ ತಿಳಿಸಿದ್ದಾರೆ. ಕನಿಷ್ಠ 73 ಜನರು ಗಾಯಗೊಂಡಿದ್ದಾರೆ ಎಂದು ಆಂಡಲೂಸಿಯಾದ ಉನ್ನತ ತುರ್ತುಸ್ಥಿತಿ ಅಧಿಕಾರಿ ಆಂಟೋನಿಯೊ ಸ್ಯಾನ್ಜ್ ತಿಳಿಸಿದ್ದಾರೆ.
ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆಯಿದೆ ಎಂದು ಅವರು ಹೇಳಿದ್ದಾರೆ. ಗಂಭೀರವಾಗಿ ಗಾಯಗೊಂಡಿರುವ 30 ಜನರನ್ನು ಆಸ್ಪತ್ರೆಗೆ ಸಾಗಿಸಲಾಗಿದೆ ಎಂದು ಸಾರಿಗೆ ಸಚಿವ ಆಸ್ಕರ್ ಪುಯೆಂಟೆ ಸುದ್ದಿಗಾರರಿಗೆ ತಿಳಿಸಿದರು.
ಮಲಗಾ-ಮ್ಯಾಡ್ರಿಡ್ ರೈಲಿನಲ್ಲಿ ಸುಮಾರು 300 ಜನರು ಇದ್ದರು ಎಂದು ರೈಲ್ ಆಪರೇಟರ್ ಇರಿಯೊ ಹೇಳಿದ್ದಾರೆ. ನೂರಾರು ಪ್ರಯಾಣಿಕರು ಡಿಕ್ಕಿಯಾದ ರೈಲುಗಳಲ್ಲಿ ಉಳಿದಿದ್ದರಿಂದ ತುರ್ತು ಸೇವೆಗೆ ಅಡ್ಡಿಯುಂಟಾಯಿತು ಎಂದು ಅಗ್ನಿಶಾಮಕ ದಳದ ಮುಖ್ಯಸ್ಥರು ತಿಳಿಸಿದ್ದಾರೆ.
ಅಡಮುಜ್‌ನಲ್ಲಿ ಸಂಭವಿಸಿದ ದುರಂತ ರೈಲು ಅಪಘಾತದಿಂದಾಗಿ ತೀವ್ರ ನೋವಾಗಿದೆ. ಈ ದುರಂತದ ಸಂದರ್ಭದಲ್ಲಿ ದೇಶ ಸಂತ್ರಸ್ತರ ನೆರವಿಗೆ ಇದೆ ಎಂದು ಸ್ಪೇನ್ ಪ್ರಧಾನಿ ಪೆಡ್ರೊ ಸ್ಯಾಂಚೆಜ್ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಬರೆದುಕೊಂಡಿದ್ದಾರೆ.
Advertisement