ಮಧ್ಯಪ್ರಾಚ್ಯದಲ್ಲಿ ಮತ್ತೆ ಯುದ್ಧದ ಕಾರ್ಮೋಡ: ಇರಾನ್ ಕ್ಷಿಪಣಿ ದಾಳಿ, ಗಾಜಾ ಗಡಿದ್ವಾರ ಬಂದ್; ‘ಪ್ರತಿದಾಳಿ ಬೇಡ’- ನೆತನ್ಯಾಹುಗೆ ಟ್ರಂಪ್ ಖಡಕ್ ಸಂದೇಶ

ಕ್ಷಿಪಣಿ ದಾಳಿಯ ನಂತರ ಗಾಜಾ ಪಟ್ಟಿಗೆ ಮಾನವೀಯ ನೆರವು ಮತ್ತು ಅಗತ್ಯ ವಸ್ತುಗಳ ಸಾಗಣೆಗೆ ಬಳಸಲಾಗುತ್ತಿದ್ದ ರಫಾ ಹಾಗೂ ಕೆರೆಮ್ ಶಾಲೋಮ್ ಗಡಿದ್ವಾರಗಳನ್ನು ಇಸ್ರೇಲ್ ತಾತ್ಕಾಲಿಕವಾಗಿ ಬಂದ್ ಮಾಡಿದೆ. ಭದ್ರತಾ ಪರಿಸ್ಥಿತಿ ಸುಧಾರಿಸುವವರೆಗೆ ಈ ಕ್ರಮ ಮುಂದುವರಿಯಲಿದೆ.
Iran targets US-UK base 4,000 km away in Diego Garcia
ಇರಾನ್ ಕ್ಷಿಪಣಿ ದಾಳಿ
Updated on

ಮಧ್ಯಪ್ರಾಚ್ಯದಲ್ಲಿ ಮತ್ತೆ ಯುದ್ಧದ ಕಾರ್ಮೋಡ ಕವಿದಿದ್ದು, ಇರಾನ್ ಮತ್ತು ಇಸ್ರೇಲ್ ನಡುವಿನ ಉದ್ವಿಗ್ನತೆ ಹೊಸ ಹಂತಕ್ಕೆ ತಲುಪಿದೆ. ಯುದ್ಧ ವಿರಾಮ ಜಾರಿಯಾದ ಹಲವು ವಾರಗಳ ಬಳಿಕ ಇರಾನ್ ಭಾನುವಾರ ಇಸ್ರೇಲ್ ಮೇಲೆ ಕ್ಷಿಪಣಿ ದಾಳಿ ನಡೆಸಿದ್ದು, ಈ ಬೆಳವಣಿಗೆ ಪ್ರದೇಶದಲ್ಲಿ ಮತ್ತೆ ಭದ್ರತಾ ಆತಂಕವನ್ನು ಹೆಚ್ಚಿಸಿದೆ.

ದಾಳಿಯ ಬೆನ್ನಲ್ಲೇ ಇಸ್ರೇಲ್ ಗಾಜಾ ಪಟ್ಟಿಗೆ ಸಂಪರ್ಕ ಕಲ್ಪಿಸುವ ಪ್ರಮುಖ ಗಡಿದ್ವಾರಗಳನ್ನು ಬಂದ್ ಮಾಡಲಾಗಿದ್ದು, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೇರವಾಗಿ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರಿಗೆ ಕರೆ ಮಾಡಿ ಪ್ರತಿದಾಳಿ ನಡೆಸದಂತೆ ಖಡಕ್ ಸೂಚನೆ ನೀಡಿದ್ದಾರೆಂದು ತಿಳಿದುಬಂದಿದೆ.

ಇರಾನ್‌ನಿಂದ ಉಡಾಯಿಸಲಾದ ಹಲವು ಕ್ಷಿಪಣಿಗಳಿಂದಾಗಿ ಇಸ್ರೇಲ್‌ನ ವಿವಿಧ ಭಾಗಗಳಲ್ಲಿ ಎಚ್ಚರಿಕೆ ಸೈರನ್‌ಗಳು ಮೊಳಗಿದವು. ಇಸ್ರೇಲ್‌ನ ವಾಯು ರಕ್ಷಣಾ ವ್ಯವಸ್ಥೆ ಬಹುತೇಕ ಕ್ಷಿಪಣಿಗಳನ್ನು ತಡೆದಿದ್ದರೂ, ಈ ದಾಳಿ ಕದನ ವಿರಾಮದ ಬಳಿಕದ ಅತ್ಯಂತ ಮಹತ್ವದ ಬೆಳವಣಿಗೆಯಾಗಿ ಪರಿಗಣಿಸಲಾಗಿದೆ. ಪರಿಸ್ಥಿತಿ ಮತ್ತಷ್ಟು ಹದಗೆಡುವ ಸಾಧ್ಯತೆಯನ್ನು ಮನಗಂಡ ಇಸ್ರೇಲ್ ಸೇನೆ ದೇಶದಾದ್ಯಂತ ಭದ್ರತಾ ಕ್ರಮಗಳನ್ನು ಬಿಗಿಗೊಳಿಸಿದೆ.

ಕ್ಷಿಪಣಿ ದಾಳಿಯ ನಂತರ ಗಾಜಾ ಪಟ್ಟಿಗೆ ಮಾನವೀಯ ನೆರವು ಮತ್ತು ಅಗತ್ಯ ವಸ್ತುಗಳ ಸಾಗಣೆಗೆ ಬಳಸಲಾಗುತ್ತಿದ್ದ ರಫಾ ಹಾಗೂ ಕೆರೆಮ್ ಶಾಲೋಮ್ ಗಡಿದ್ವಾರಗಳನ್ನು ಇಸ್ರೇಲ್ ತಾತ್ಕಾಲಿಕವಾಗಿ ಬಂದ್ ಮಾಡಿದೆ. ಭದ್ರತಾ ಪರಿಸ್ಥಿತಿ ಸುಧಾರಿಸುವವರೆಗೆ ಈ ಕ್ರಮ ಮುಂದುವರಿಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ನಿರ್ಧಾರದಿಂದ ಈಗಾಗಲೇ ಯುದ್ಧ ಮತ್ತು ಆಹಾರ ಕೊರತೆಯಿಂದ ಸಂಕಷ್ಟದಲ್ಲಿರುವ ಗಾಜಾದ ಜನರಿಗೆ ಮತ್ತಷ್ಟು ತೊಂದರೆ ಎದುರಾಗುವ ಸಾಧ್ಯತೆ ಇದೆ.

ಈ ಬೆಳವಣಿಗೆಗಳ ನಡುವೆ ಅಮೆರಿಕ ಅಧ್ಯಕ್ಷ ಟ್ರಂಪ್ ಪರಿಸ್ಥಿತಿಯನ್ನು ನಿಯಂತ್ರಣದಲ್ಲಿಡಲು ತೀವ್ರ ರಾಜತಾಂತ್ರಿಕ ಪ್ರಯತ್ನ ನಡೆಸುತ್ತಿದ್ದಾರೆ. ಇರಾನ್ ಮತ್ತು ಇಸ್ರೇಲ್ ನಡುವಿನ ಸಂಘರ್ಷವನ್ನು ಶಮನಗೊಳಿಸಲು ಅಮೆರಿಕ ಮಧ್ಯಸ್ಥಿಕೆಯಲ್ಲಿ ನಡೆಯುತ್ತಿರುವ ಮಾತುಕತೆಗಳು ಅಂತಿಮ ಹಂತ ತಲುಪಿರುವ ಸಂದರ್ಭದಲ್ಲಿ ಹೊಸ ದಾಳಿ ನಡೆದಿರುವುದು ಶಾಂತಿ ಪ್ರಯತ್ನಗಳಿಗೆ ದೊಡ್ಡ ಹಿನ್ನಡೆಯಾಗುವ ಆತಂಕ ಮೂಡಿಸಿದೆ.

Iran targets US-UK base 4,000 km away in Diego Garcia
ಮಾತುಕತೆ ವಿಫಲವಾದರೆ ಇರಾನ್ "ಸರ್ವನಾಶ": ಟ್ರಂಪ್ ಬೆದರಿಕೆ; ಲೆಬನಾನ್‌ನಲ್ಲಿ ಹೆಚ್ಚಿನ ಸರ್ಜಿಕಲ್ ಸ್ಟ್ರೈಕ್ ಗೆ ಕರೆ!

ನೆತನ್ಯಾಹು ಅವರೊಂದಿಗೆ ದೂರವಾಣಿ ಮೂಲಕ ಮಾತನಾಡಿದ ಟ್ರಂಪ್, ಇಸ್ರೇಲ್ ಪ್ರತಿದಾಳಿ ನಡೆಸಿದರೆ ಪರಿಸ್ಥಿತಿ ಮತ್ತಷ್ಟು ಸಂಕೀರ್ಣಗೊಳ್ಳಲಿದೆ ಎಂದು ಎಚ್ಚರಿಕೆ ನೀಡಿದ್ದಾರೆ.

“ನಾವು ಶಾಂತಿ ಒಪ್ಪಂದಕ್ಕೆ ಅತ್ಯಂತ ಸಮೀಪದಲ್ಲಿದ್ದೇವೆ. ಈಗ ಮತ್ತೊಂದು ದಾಳಿ ನಡೆದರೆ ಎಲ್ಲ ಪ್ರಯತ್ನಗಳು ವ್ಯರ್ಥವಾಗಬಹುದು. ಇರಾನ್ ತನ್ನ ಕ್ಷಿಪಣಿಗಳನ್ನು ಹಾರಿಸಿದೆ, ಇಸ್ರೇಲ್ ಈಗ ತಾಳ್ಮೆ ಪ್ರದರ್ಶಿಸಬೇಕು” ಎಂದು ಹೇಳಿದ್ದಾರೆಂದು ತಿಳಿದುಬಂದಿದೆ.

ಇರಾನ್‌ನ ದಾಳಿಯಿಂದ ದೊಡ್ಡ ಪ್ರಮಾಣದ ಹಾನಿಯಾಗಿಲ್ಲ ಎಂದು ಹೇಳಿರುವ ಟ್ರಂಪ್, “ಇಸ್ರೇಲ್ ತನ್ನ ಸೇನಾ ಕಾರ್ಯಾಚರಣೆ ನಡೆಸಿದ್ದು, ಇರಾನ್ ಪ್ರತಿಕ್ರಿಯೆ ನೀಡಿದೆ. ಈಗ ಎರಡೂ ದೇಶಗಳು ಮತ್ತೊಂದು ಹಂತದ ಸಂಘರ್ಷಕ್ಕೆ ಹೋಗದೆ ಮಾತುಕತೆ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳಬೇಕು” ಎಂದು ಅಭಿಪ್ರಾಯಪಟ್ಟಿದ್ದಾರೆಂದು ವರದಿಗಳಿಂದ ತಿಳಿದುಬಂದಿದೆ.

ಅಮೆರಿಕ ಮತ್ತು ಇರಾನ್ ನಡುವಿನ ಮಾತುಕತೆಗಳು ಸಕಾರಾತ್ಮಕ ಹಂತದಲ್ಲಿದ್ದು, ಮುಂದಿನ ಕೆಲ ದಿನಗಳಲ್ಲಿ ಮಹತ್ವದ ಒಪ್ಪಂದಕ್ಕೆ ಸಹಿ ಬೀಳುವ ಸಾಧ್ಯತೆ ಇದೆ ಎಂಬ ವಿಶ್ವಾಸವನ್ನೂ ಅವರು ವ್ಯಕ್ತಪಡಿಸಿದ್ದಾರೆ.

ಇದೇ ವೇಳೆ, ಇಸ್ರೇಲ್ ಇತ್ತೀಚೆಗೆ ಲೆಬನಾನ್ ರಾಜಧಾನಿ ಬೈರೂತ್ ಸೇರಿದಂತೆ ಹಲವು ಪ್ರದೇಶಗಳಲ್ಲಿ ನಡೆಸಿದ ಸೇನಾ ದಾಳಿಗಳ ಬಗ್ಗೆಯೂ ಟ್ರಂಪ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇಂತಹ ಕ್ರಮಗಳು ಪ್ರದೇಶದಲ್ಲಿ ಉದ್ವಿಗ್ನತೆಯನ್ನು ಹೆಚ್ಚಿಸಿ ಶಾಂತಿ ಪ್ರಯತ್ನಗಳಿಗೆ ಧಕ್ಕೆ ತರುತ್ತವೆ ಎಂದು ಹೇಳಿದ್ದಾರೆಂದು ತಿಳಿದುಬಂದಿದೆ.

ಅಮೆರಿಕದ ಅಧಿಕಾರಿಗಳ ಪ್ರಕಾರ, ಟ್ರಂಪ್ ಮತ್ತು ನೆತನ್ಯಾಹು ನಡುವಿನ ಇತ್ತೀಚಿನ ಮಾತುಕತೆ ಕಳೆದ ವಾರ ನಡೆದ ಉದ್ವಿಗ್ನ ಸಂಭಾಷಣೆಗಿಂತ ಹೆಚ್ಚು ಶಾಂತ ವಾತಾವರಣದಲ್ಲಿ ನಡೆದಿತ್ತು ಎಂದು ತಿಳಿಸಿದ್ದಾರ.

ಟ್ರಂಪ್ ತಮ್ಮ ಕಳವಳವನ್ನು ಸ್ಪಷ್ಟವಾಗಿ ವ್ಯಕ್ತಪಡಿಸಿದ ನಂತರ ನೆತನ್ಯಾಹು ತಾತ್ಕಾಲಿಕವಾಗಿ ಪರಿಸ್ಥಿತಿಯನ್ನು ಅವಲೋಕಿಸಲು ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ. ಆದರೆ, ಇಸ್ರೇಲ್ ಮುಂದಿನ ದಿನಗಳಲ್ಲಿ ಯಾವ ಕ್ರಮ ಕೈಗೊಳ್ಳಲಿದೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.

ಇರಾನ್‌ನ ಕ್ಷಿಪಣಿ ದಾಳಿ, ಗಾಜಾ ಗಡಿದ್ವಾರಗಳ ಬಂದ್ ಮತ್ತು ಅಮೆರಿಕದ ರಾಜತಾಂತ್ರಿಕ ಒತ್ತಡದ ನಡುವೆಯೇ ಮಧ್ಯಪ್ರಾಚ್ಯ ಮತ್ತೊಮ್ಮೆ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ. ಶಾಂತಿ ಮಾತುಕತೆಗಳು ಯಶಸ್ವಿಯಾದರೆ ಹಲವು ತಿಂಗಳ ಸಂಘರ್ಷಕ್ಕೆ ಅಂತ್ಯ ಸಿಗುವ ಸಾಧ್ಯತೆ ಇದೆ. ಆದರೆ, ಯಾವುದೇ ಹೊಸ ಸೇನಾ ಕ್ರಮ ಪರಿಸ್ಥಿತಿಯನ್ನು ಮತ್ತೆ ಪೂರ್ಣ ಪ್ರಮಾಣದ ಯುದ್ಧದತ್ತ ಕೊಂಡೊಯ್ಯುವ ಅಪಾಯವಿದ್ದು, ಜಾಗತಿಕ ಸಮುದಾಯ ತೀವ್ರ ಕಳವಳದಿಂದ ಬೆಳವಣಿಗೆಗಳನ್ನು ಗಮನಿಸುತ್ತಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com