Hormuz ಡ್ರೋನ್ ದಾಳಿಗೆ ಅಮೆರಿಕ ತಿರುಗೇಟು; ಇರಾನ್ ಮೇಲೆ ವಾಯುದಾಳಿ, ಮಧ್ಯಪ್ರಾಚ್ಯದಲ್ಲಿ ಮತ್ತೆ ಯುದ್ಧದ ಕಾರ್ಮೋಡ..!

ನಿನ್ನೆ ಅವರು ನಾಲ್ಕು ಬಾರಿ ದಾಳಿ ನಡೆಸಿರುವುದು ನನಗೆ ಇಷ್ಟವಾಗಲಿಲ್ಲ," ಎಂದು ಶ್ವೇತಭವನದಲ್ಲಿ ಸುದ್ದಿಗಾರರಿಗೆ ತಿಳಿಸಿದ ಟ್ರಂಪ್, ಅಮೆರಿಕ ಪ್ರತಿದಾಳಿ ನಡೆಸುತ್ತದೆಯೇ ಎಂಬ ಪ್ರಶ್ನೆಗೆ, ನಿಮಗೇ ಗೊತ್ತಾಗುತ್ತದೆ ಎಂದು ಹೇಳಿದ್ದರು.
Strait of Hormuz
ಹಾರ್ಮುಜ್ ಜಲಸಂಧಿ
Updated on

ವಾಷಿಂಗ್ಟನ್: ಹಾರ್ಮುಜ್ ಜಲಸಂಧಿಯಲ್ಲಿ ಸರಕು ಸಾಗಣೆ ಹಡಗಿನ ಮೇಲೆ ನಡೆದ ಡ್ರೋನ್ ದಾಳಿಗೆ ಪ್ರತಿಯಾಗಿ ಅಮೆರಿಕ ಶುಕ್ರವಾರ ಇರಾನ್‌ನ ಕ್ಷಿಪಣಿ ಮತ್ತು ಡ್ರೋನ್ ನೆಲೆಗಳ ಮೇಲೆ ವಾಯುದಾಳಿ ನಡೆಸಿದೆ.

ಕಳೆದ ವಾರವೇ ಯುದ್ಧ ಅಂತ್ಯಗೊಳಿಸಲು ಹಾಗೂ ಹಾರ್ಮುಜ್ ಜಲಸಂಧಿಯನ್ನು ಮತ್ತೆ ಸಂಪೂರ್ಣವಾಗಿ ತೆರೆಯಲು ಉಭಯ ದೇಶಗಳ ನಡುವೆ ಮಧ್ಯಂತರ ಒಪ್ಪಂದವಾಗಿದ್ದರೂ, ಈ ದಾಳಿ ಹಿನ್ನಡೆಯುಂಟು ಮಾಡಿದಂತಾಗಿದೆ.

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಸರಕು ಹಡಗಿನ ಮೇಲಿನ ಡ್ರೋನ್ ದಾಳಿ ಕದನ ವಿರಾಮದ ಸ್ಪಷ್ಟ ಉಲ್ಲಂಘನೆ ಎಂದು ಆರೋಪಿಸಿದ್ದಾರೆ.

ನಿನ್ನೆ ಅವರು ನಾಲ್ಕು ಬಾರಿ ದಾಳಿ ನಡೆಸಿರುವುದು ನನಗೆ ಇಷ್ಟವಾಗಲಿಲ್ಲ," ಎಂದು ಶ್ವೇತಭವನದಲ್ಲಿ ಸುದ್ದಿಗಾರರಿಗೆ ತಿಳಿಸಿದ ಟ್ರಂಪ್, ಅಮೆರಿಕ ಪ್ರತಿದಾಳಿ ನಡೆಸುತ್ತದೆಯೇ ಎಂಬ ಪ್ರಶ್ನೆಗೆ ಮೊದಲು "ನಿಮಗೇ ಗೊತ್ತಾಗುತ್ತದೆ" ಎಂದು ಉತ್ತರಿಸಿದ್ದರು.

ಈ ಹೇಳಿಕೆ ನೀಡಿದ ಕೆಲವೇ ಗಂಟೆಗಳಲ್ಲಿ ಅಮೆರಿಕದ ಸೆಂಟ್ರಲ್ ಕಮಾಂಡ್ (CENTCOM) ಇರಾನ್‌ನಲ್ಲಿರುವ ಕ್ಷಿಪಣಿ ಉಡಾವಣಾ ಕೇಂದ್ರಗಳು, ಡ್ರೋನ್ ತಾಣಗಳು ಹಾಗೂ ಕರಾವಳಿ ರಾಡಾರ್ ವ್ಯವಸ್ಥೆಗಳ ಮೇಲೆ ನಿಖರ ವಾಯುದಾಳಿ ನಡೆಸಿರುವುದಾಗಿ ಘೋಷಿಸಿದೆ. ಸುಮಾರು ಒಂದು ಗಂಟೆಯೊಳಗೆ ಕಾರ್ಯಾಚರಣೆ ಪೂರ್ಣಗೊಂಡಿದೆ ಎಂದು ಅಮೆರಿಕದ ಅಧಿಕಾರಿಗಳು ತಿಳಿಸಿದ್ದಾರೆ.

ಅಮೆರಿಕ ಮತ್ತು ಇರಾನ್ ನಡುವಿನ ಮಧ್ಯಂತರ ಒಪ್ಪಂದದ ಪ್ರಕಾರ, ಹಾರ್ಮುಜ್ ಜಲಸಂಧಿಯಲ್ಲಿ ಹಡಗುಗಳ ಸುರಕ್ಷಿತ ಸಂಚಾರ, ಇರಾನ್‌ನ ಅಧಿಕ ಪ್ರಮಾಣದಲ್ಲಿ ಸಂಸ್ಕರಿಸಿದ ಯುರೇನಿಯಂ ಸಂಗ್ರಹ ಸೇರಿದಂತೆ ಹಲವು ವಿಷಯಗಳಲ್ಲಿ 60 ದಿನಗಳೊಳಗೆ ಅಂತಿಮ ಒಪ್ಪಂದಕ್ಕೆ ಬರಬೇಕಿದೆ. ಆದರೆ, ಇತ್ತೀಚಿನ ಬೆಳವಣಿಗೆಗಳಿಂದ ಮಾತುಕತೆಗಳ ಭವಿಷ್ಯದ ಬಗ್ಗೆ ಮತ್ತೆ ಅನುಮಾನಗಳು ಮೂಡಿವೆ.

ಇರಾನ್ ಸಂಸತ್ತಿನ ರಾಷ್ಟ್ರೀಯ ಭದ್ರತಾ ಸಮಿತಿಯ ಅಧ್ಯಕ್ಷ ಇಬ್ರಾಹಿಂ ಅಜೀಜಿ, ಟ್ರಂಪ್ ಹೇಳಿಕೆಗೆ ಸಾಮಾಜಿಕ ಜಾಲತಾಣದಲ್ಲಿ ತಿರುಗೇಟು ನೀಡಿ, "ಹಾರ್ಮುಜ್ ಜಲಸಂಧಿಯ ನಿಯಂತ್ರಣ ಇರಾನ್‌ನಲ್ಲಿದೆ. ನಿಯಮಗಳನ್ನು ಗೌರವಿಸಿ. ನಿಯಂತ್ರಣವನ್ನು ಕದನ ವಿರಾಮ ಉಲ್ಲಂಘನೆ ಎಂದು ತಪ್ಪಾಗಿ ಅರ್ಥೈಸಬೇಡಿ. ಇದು ಕದನ ವಿರಾಮದ ಉಲ್ಲಂಘನೆಯಲ್ಲ, ಕದನ ವಿರಾಮದ ನಿರ್ವಹಣೆ" ಎಂದು ಹೇಳಿದ್ದಾರೆ.

Strait of Hormuz
ಅಮೆರಿಕ-ಇರಾನ್ ಶಾಂತಿ ಒಪ್ಪಂದ: ಜೂನ್ 17 ರಿಂದ ಹಾರ್ಮುಜ್ ಜಲಸಂಧಿ ದಾಟಿದ ಭಾರತದ 11 ಹಡಗುಗಳು! ಇನ್ನೂ ಎಷ್ಟಿವೆ ಗೊತ್ತಾ? Video

ಇದೇ ವೇಳೆ ಅಮೆರಿಕ ಉಪಾಧ್ಯಕ್ಷ ಜೆ.ಡಿ. ವ್ಯಾನ್ಸ್, "ಕದನ ವಿರಾಮದ ಬಗ್ಗೆ ಭಿನ್ನಾಭಿಪ್ರಾಯಗಳಿದ್ದರೆ ಇರಾನ್ ಮಾತುಕತೆಗೆ ಬರಬೇಕು ಎಂದು ಹೇಳಿದ್ದು, ಹಿಂಸೆಗೆ ಪ್ರತಿಯಾಗಿ ಹಿಂಸೆಯೇ ಉತ್ತರವಾಗುತ್ತದೆ" ಎಂದು ಎಚ್ಚರಿಕೆ ನೀಡಿದ್ದಾರೆ.

ಈ ಬೆಳವಣಿಗೆ ಜಾಗತಿಕ ತೈಲ ಸಾಗಣೆಗೆ ಪ್ರಮುಖ ಮಾರ್ಗವಾಗಿರುವ ಹಾರ್ಮುಜ್ ಜಲಸಂಧಿಯಲ್ಲಿ ಮತ್ತೆ ಆತಂಕದ ವಾತಾವರಣ ಸೃಷ್ಟಿಸಿದೆ. ಕಳೆದ ಒಂದು ವಾರದಿಂದ ಪರಿಸ್ಥಿತಿ ಸುಧಾರಿಸುತ್ತಿದ್ದರೂ, ಡ್ರೋನ್ ದಾಳಿಯ ನಂತರ ಹಡಗುಗಳ ಸಂಚಾರ ಮತ್ತೆ ನಿಧಾನಗೊಂಡಿದೆ ಎಂದು ತಿಳಿದುಬಂದಿದೆ.

ಸಮುದ್ರ ಮಾಹಿತಿ ಸಂಸ್ಥೆ ವಿಂಡ್‌ವಾರ್ಡ್ ಪ್ರಕಾರ, ಘಟನೆ ಬಳಿಕವೂ 43 ಹಡಗುಗಳು ಜಲಸಂಧಿಯನ್ನು ದಾಟಿದರೂ, ಸಹಜ ಸ್ಥಿತಿಗೆ ಮರಳುವ ಪ್ರಕ್ರಿಯೆ ನಿಧಾನಗೊಂಡಿದೆ. ಯುದ್ಧ ಆರಂಭಕ್ಕೂ ಮುನ್ನ ಪ್ರತಿದಿನ ಸರಾಸರಿ 130ಕ್ಕೂ ಹೆಚ್ಚು ಹಡಗುಗಳು ಸಂಚರಿಸುತ್ತಿದ್ದರೆ, ಬುಧವಾರ 78 ಹಡಗುಗಳು ಸಂಚರಿಸಿದ್ದವು. ಆದರೆ ದಾಳಿಯ ಬಳಿಕ ಕನಿಷ್ಠ ಎರಡು ತೈಲ ಟ್ಯಾಂಕರ್‌ಗಳು ಮಾರ್ಗ ಮಧ್ಯದಲ್ಲೇ ಹಿಂದಿರುಗಿವೆ ಎಂದು ತಿಳಿಸಿದೆ.

ಒಮಾನ್ ಕರಾವಳಿಯ ಸಮೀಪ ಸರಕು ಸಾಗಣೆ ಹಡಗಿನ ಮೇಲೆ ಉತ್ಕ್ಷೇಪಕ ಕ್ಷಿಪಣಿ ಬಿದ್ದಿರುವುದನ್ನು ಬ್ರಿಟನ್ ಸೇನೆಯೂ ದೃಢಪಡಿಸಿದೆ. ಈ ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.

ಈ ನಡುವೆ ಹಡಗುಗಳನ್ನು ಸುರಕ್ಷಿತವಾಗಿ ಹೊರತೆಗೆದುಕೊಳ್ಳಲು ಆರಂಭಿಸಿದ್ದ ಕಾರ್ಯಾಚರಣೆಯನ್ನು ಅಂತರರಾಷ್ಟ್ರೀಯ ಸಾಗರ ಸಂಸ್ಥೆ (IMO) ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ. ಉಳಿದ ಹಡಗುಗಳ ಸುರಕ್ಷತೆಗೆ ಖಾತರಿ ದೊರೆಯುವವರೆಗೆ ಕಾರ್ಯಾಚರಣೆ ಪುನರಾರಂಭಿಸುವುದಿಲ್ಲ ಎಂದು ಸಂಸ್ಥೆ ತಿಳಿಸಿದೆ.

ಇತ್ತೀಚಿನ ದಿನಗಳಲ್ಲಿ ಸುಮಾರು 115 ಹಡಗುಗಳು ಹಾರ್ಮುಜ್ ಜಲಸಂಧಿಯಿಂದ ಹೊರಬಂದಿದ್ದರೂ, ಇನ್ನೂ ಸುಮಾರು 500 ಹಡಗುಗಳು ಆ ಪ್ರದೇಶದಲ್ಲೇ ಸಿಲುಕಿಕೊಂಡಿವೆ ಎಂದು IMO ಮಹಾಸಚಿವ ಅರ್ಸೆನಿಯೊ ಡೊಮಿಂಗ್ವೆಜ್ ತಿಳಿಸಿದ್ದಾರೆ.

ಇದರ ನಡುವೆ ವಾಷಿಂಗ್ಟನ್‌ನಲ್ಲಿ ಅಮೆರಿಕದ ಮಧ್ಯಸ್ಥಿಕೆಯಲ್ಲಿ ಇಸ್ರೇಲ್ ಮತ್ತು ಲೆಬನಾನ್ ನಡುವೆಯೂ ಶಾಂತಿ ಚೌಕಟ್ಟು ಒಪ್ಪಂದಕ್ಕೆ ಸಹಿ ಹಾಕಲಾಗಿದೆ. ಇದನ್ನು ಶಾಶ್ವತ ಶಾಂತಿಯತ್ತ ಮೊದಲ ಹೆಜ್ಜೆ ಎಂದು ಎರಡೂ ರಾಷ್ಟ್ರಗಳು ಬಣ್ಣಿಸಿವೆ. ಆದರೆ, ಹಿಜ್ಬುಲ್ಲಾ ಸಂಪೂರ್ಣ ನಿಶಸ್ತ್ರೀಕರಣಗೊಳ್ಳುವವರೆಗೆ ದಕ್ಷಿಣ ಲೆಬನಾನ್‌ನ ಭದ್ರತಾ ವಲಯದಿಂದ ಇಸ್ರೇಲ್ ಸೇನೆ ಹಿಂದೆ ಸರಿಯುವುದಿಲ್ಲ ಎಂದು ಪ್ರಧಾನಿ ಬೆಂಜಮಿನ್ ನೆತನ್ಯಾಹು ಸ್ಪಷ್ಟಪಡಿಸಿದ್ದಾರೆ.

ಒಟ್ಟಾರೆ, ಅಮೆರಿಕ–ಇರಾನ್ ಉದ್ವಿಗ್ನತೆ ಮತ್ತೊಮ್ಮೆ ಹೆಚ್ಚುತ್ತಿರುವುದರಿಂದ ಮಧ್ಯಪ್ರಾಚ್ಯದ ಭದ್ರತಾ ಪರಿಸ್ಥಿತಿ ಹಾಗೂ ಜಾಗತಿಕ ತೈಲ ಪೂರೈಕೆಯ ಮೇಲೆ ಅನಿಶ್ಚಿತತೆ ಮುಂದುವರೆಯುವಂತೆ ಮಾಡಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X
Kannada Prabha
www.kannadaprabha.com