

ನವದೆಹಲಿ: ಅಲ್ಪಸಂಖ್ಯಾತರ ಮೇಲಿನ ಯಾವುದೇ ದಾಳಿ ಬಾಂಗ್ಲಾದೇಶದ ಸ್ವಾತಂತ್ರ್ಯದ ಮೇಲಿನ ದಾಳಿಯೇ ಎಂದು ಬಾಂಗ್ಲಾದೇಶ ಮಾಜಿ ಪ್ರಧಾನಿ ಶೇಖ್ ಹಸೀನಾ ಹೇಳಿದ್ದಾರೆ.
ಭಾರತದ ರಾಷ್ಟ್ರೀಯ ಸುದ್ದಿವಾಹಿನಿ ಜೊತೆ ಸಂದರ್ಶನದಲ್ಲಿ ಮಾತನಾಡಿದ ಶೇಖ್ ಹಸೀನಾ, 'ಅಲ್ಪಸಂಖ್ಯಾತರ ಮೇಲಿನ ಯಾವುದೇ ದಾಳಿ ಬಾಂಗ್ಲಾದೇಶದ ಸ್ವಾತಂತ್ರ್ಯದ ಮೇಲಿನ ದಾಳಿಯಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ತಮ್ಮ ಬಾಂಗ್ಲಾದೇಶ ಆವಾಮಿ ಲೀಗ್ ಪಕ್ಷದ 77ನೇ ವರ್ಷದ ಅಂಗವಾಗಿ ನಮ್ಮ ನಾಯಕರು, ಕಾರ್ಯಕರ್ತರು ಮತ್ತು ಬೆಂಬಲಿಗರಿಗೆ ನನ್ನ ಸಂದೇಶ ತುಂಬಾ ಸರಳವಾಗಿದೆ ಎಂದು ಹೇಳಿರುವ ಶೇಖ್ ಹಸೀನಾ, 'ಒಂದಾಗಿ ಇರಿ ಮತ್ತು ಜನರೊಂದಿಗೆ ಸದಾ ನಿಲ್ಲಿ' ಎಂದು ಹೇಳಿದ್ದಾರೆ.
ಪ್ರತಿ ಗ್ರಾಮ, ಪ್ರತಿ ಬಡಾವಣೆ, ಪ್ರತಿ ವಾರ್ಡ್ ಹಾಗೂ ಪ್ರತಿ ಯೂನಿಯನ್ ಮಟ್ಟದಲ್ಲಿ ಜನರೊಂದಿಗೆ ನಿಮ್ಮ ಬಾಂಧವ್ಯವನ್ನು ಇನ್ನಷ್ಟು ಗಟ್ಟಿಗೊಳಿಸಿ. ಹಿಂಸೆಗೆ ಒಳಗಾದವರ ಬೆನ್ನಿಗೆ ನಿಲ್ಲಿ.
ಅಲ್ಪಸಂಖ್ಯಾತರು, ಮಹಿಳೆಯರು, ಮಕ್ಕಳು, ಕಾರ್ಮಿಕರು, ಬಡವರು ಹಾಗೂ ಸಮಾಜದ ಅಂಚಿನಲ್ಲಿರುವ ಜನರ ಸುರಕ್ಷತೆ ಮತ್ತು ಘನತೆಯ ವಿಷಯದಲ್ಲಿ ಯಾವುದೇ ರಾಜಿ ಮಾಡಿಕೊಳ್ಳಬೇಡಿ ಎಂದರು.
ಅಲ್ಲದೆ ಅವಾಮಿ ಲೀಗ್‌ನ ರಾಜಕೀಯವು ಪ್ರತೀಕಾರಕ್ಕಾಗಿ ಅಲ್ಲ. ಅದು ಹಕ್ಕುಗಳು, ಭದ್ರತೆ, ಘನತೆ ಮತ್ತು ಅಭಿವೃದ್ಧಿಗಾಗಿ ಮಾಡುವ ರಾಜಕೀಯವಾಗಿದೆ.
ಅವಾಮಿ ಲೀಗ್ ಹಿಂದೆ ಜನರೊಂದಿಗೆ ಇತ್ತು, ಈಗಲೂ ಜನರೊಂದಿಗೇ ಇದೆ ಮತ್ತು ಮುಂದೆಯೂ ಜನರೊಂದಿಗೇ ಇರುತ್ತದೆ. ಜನರ ಶಕ್ತಿಯ ಬಲದಿಂದ ಅವಾಮಿ ಲೀಗ್ ಮತ್ತೊಮ್ಮೆ ಪುನರುತ್ಥಾನಗೊಳ್ಳಲಿದೆ ಎಂದು ಹೇಳಿದರು.
ಅಲ್ಪ ಸಂಖ್ಯಾತರ ಭದ್ರತೆ ಖಚಿತಪಡಿಸಿ
ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತರ ಭದ್ರತೆಯನ್ನು ಖಚಿತಪಡಿಸಬೇಕು. ದೇವಾಲಯಗಳು ಹಾಗೂ ಇತರೆ ಧಾರ್ಮಿಕ ಆರಾಧನಾ ಸ್ಥಳಗಳ ಮೇಲಿನ ದಾಳಿಗಳಲ್ಲಿ ಭಾಗಿಯಾಗಿರುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ಸಾಮುದಾಯಿಕ ದ್ವೇಷವನ್ನು ಹರಡುವ ಗುಂಪುಗಳ ಬೆದರಿಕೆಗಳ ವಿರುದ್ಧ ಸರ್ಕಾರ ದೃಢವಾದ ನಿಲುವು ತಾಳಬೇಕು ಎಂದು ಶೇಖ್ ಹಸೀನಾ ಹೇಳಿದರು.
ಅಲ್ಲದೆ ಅಲ್ಪಸಂಖ್ಯಾತರ ಹಕ್ಕುಗಳ ಪರವಾಗಿ ಶಾಂತಿಯುತವಾಗಿ ಧ್ವನಿ ಎತ್ತುವವರ ವಿರುದ್ಧ ಸುಳ್ಳು ಪ್ರಕರಣಗಳನ್ನು ದಾಖಲಿಸುವುದು ಅಥವಾ ಅವರನ್ನು ಕಿರುಕುಳ ನೀಡುವುದು ನಡೆಯಬಾರದು. ಅವರ ಮಾತುಗಳನ್ನು ಸರ್ಕಾರ ಆಲಿಸಬೇಕು. ಧಾರ್ಮಿಕ ಸ್ವಾತಂತ್ರ್ಯ, ಸಮಾನ ಹಕ್ಕುಗಳು ಮತ್ತು ಭದ್ರತೆಯನ್ನು ಖಚಿತಪಡಿಸುವುದು ರಾಜ್ಯದ ಮೂಲಭೂತ ಕರ್ತವ್ಯವಾಗಿದೆ. ಈ ಕರ್ತವ್ಯವನ್ನು ನಿರ್ವಹಿಸುವಲ್ಲಿ ವಿಫಲವಾಗುವುದು ಕೇವಲ ಬಾಂಗ್ಲಾದೇಶದ ಆಂತರಿಕ ಸಮಸ್ಯೆಯಷ್ಟೇ ಅಲ್ಲ; ಅದು ದಕ್ಷಿಣ ಏಷ್ಯಾದ ಸ್ಥಿರತೆ ಹಾಗೂ ಮಾನವೀಯ ಮೌಲ್ಯಗಳ ಮೇಲೆಯೂ ಪರಿಣಾಮ ಬೀರುವ ಗಂಭೀರ ವಿಷಯವಾಗಿದೆ ಎಂದು ಶೇಖ್ ಹಸೀನಾ ಹೇಳಿದ್ದಾರೆ.
ಪ್ರಸ್ತುತ ದೇಶದಿಂದ ಹೊರಗಿರುವ ಶೇಖ್ ಹಸೀನಾ, ನೀಡಿದ ವಿಶೇಷ ಇ-ಮೇಲ್ ಸಂದರ್ಶನದಲ್ಲಿ ಬಾಂಗ್ಲಾದೇಶದ ರಾಜಕೀಯ ಬೆಳವಣಿಗೆಗಳು ಸೇರಿದಂತೆ ಹಲವು ಮಹತ್ವದ ವಿಷಯಗಳ ಕುರಿತು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ. ಅಮೆರಿಕದ ಖ್ಯಾತ ಸೇನಾ ಜನರಲ್ ಡಗ್ಲಸ್ ಮ್ಯಾಕ್‌ಆರ್ಥರ್ ಅವರಂತೆ, "ಈ ವರ್ಷವೇ ನಾನು ನನ್ನ ದೇಶಕ್ಕೆ ಮರಳುತ್ತೇನೆ" ಎಂದು ದೇಶದಿಂದ ಹೊರಗಿರುವ ಹಸೀನಾ ಘೋಷಿಸಿದ್ದಾರೆ. ಅವಾಮಿ ಲೀಗ್ ಕೇವಲ ಒಂದು ರಾಜಕೀಯ ಸಂಘಟನೆ ಅಲ್ಲ, ಅದು ಒಂದು ಶಕ್ತಿಯಾಗಿದೆ ಎಂದು ಅವರು ಹೇಳಿದ್ದಾರೆ.