

ಕರಾಚಿ: ಅತಿದೊಡ್ಡ ನ್ಯೂಸ್ ಚಾನೆಲ್ ಗಳಲ್ಲಿ ಒಂದಾದ ಜಿಯೋ ನ್ಯೂಸ್‌ನ ಪರವಾನಗಿ ಮತ್ತು ಪ್ರಸಾರವನ್ನು ಪಾಕಿಸ್ತಾನದ ಎಲೆಕ್ಟ್ರಾನಿಕ್ ಮಾಧ್ಯಮ ನಿಯಂತ್ರಣ ಸಂಸ್ಥೆಯು 15 ದಿನಗಳವರೆಗೆ ನಿಷೇಧಿಸಿದೆ.
ಪಾಕಿಸ್ತಾನ ಎಲೆಕ್ಟ್ರಾನಿಕ್ ಮಾಧ್ಯಮ ನಿಯಂತ್ರಣ ಪ್ರಾಧಿಕಾರ (PEMRA) ಶನಿವಾರ ತಡರಾತ್ರಿ ಅಮಾನತು ಆದೇಶ ಹೊರಡಿಸಿದ್ದು, ಈ ವಿಷಯದ ಬಗ್ಗೆ ಹೆಚ್ಚಿನ ಕಾನೂನು ಕ್ರಮಗಳನ್ನು ಸಹ ಪ್ರಾರಂಭಿಸಿದೆ.
ಶುಕ್ರವಾರ ಬೆಳಿಗ್ಗೆ ಪ್ರಸಾರವಾದ ಜಿಯೋ ನ್ಯೂಸ್‌ನ "ಸಫರ್-ಎ-ಇಷ್ಕ್" ಕಾರ್ಯಕ್ರಮದಲ್ಲಿ ತೋರಿಸಲಾದ ಕೆಲ ದೃಶ್ಯಗಳ ಆಧಾರದ ಮೇಲೆ ಕ್ರಮ ಕೈಗೊಳ್ಳಲಾಗಿದೆ. ಕೆಲವು ದೃಶ್ಯಗಳು ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿವೆ ಎಂದು ನಿಯಂತ್ರಣ ಸಂಸ್ಥೆ ಆರೋಪಿಸಿದೆ. ಇದು ಚಾನೆಲ್ ವಿರುದ್ಧ ಶಿಸ್ತು ಕ್ರಮಕ್ಕೆ ಕಾರಣವಾಗಿದೆ.
ಪಿಇಎಂಆರ್‌ಎ (PEMRA) ಪಾಕಿಸ್ತಾನದ ಕಾನೂನಿನ ಅಡಿಯಲ್ಲಿ ಈ ವಿಷಯ ಕುರಿತು ಹೆಚ್ಚಿನ ತನಿಖೆ ಮತ್ತು ಕಾನೂನು ಕ್ರಮಕ್ಕಾಗಿ ತನ್ನ ನಿಯಂತ್ರಕ ಮಂಡಳಿಗೆ ಉಲ್ಲೇಖಿಸಿದೆ. ಘಟನೆಯ ಬಗ್ಗೆ ಆಂತರಿಕ ತನಿಖೆ ನಡೆಸುವಂತೆ ಪ್ರಾಧಿಕಾರವು ಜಿಯೋ ನ್ಯೂಸ್‌ಗೆ ನಿರ್ದೇಶನ ನೀಡಿದೆ. ಕಾರ್ಯಕ್ರಮವನ್ನು ಪರಿಶೀಲಿಸಲು ಮತ್ತು ವಿವರವಾದ ವರದಿಯನ್ನು ಸಲ್ಲಿಸಲು ಚಾನೆಲ್ ಗೆ ಸೂಚಿಸಲಾಗಿದೆ.
ಮರ್ಕಜಿ ಜಮಿಯತ್ ಅಹ್ಲೆ ಹದೀಸ್ ಮುಖ್ಯಸ್ಥ ಇಬ್ತಿಶಾಮ್ ಜಹೀರ್ ಸಲ್ಲಿಸಿದ ದೂರಿನ ಮೇರೆಗೆ ಈ ಕ್ರಮ ಕೈಗೊಳ್ಳಲಾಗಿದೆ. ಜಹೀರ್ ನಿಷೇಧಿತ ಉಗ್ರಗಾಮಿ ಸಂಘಟನೆ ಲಷ್ಕರ್-ಇ- ತೊಯ್ಬಾ ಸಂಘಟನೆಯ ಸಂಸ್ಥಾಪಕ ಹಫೀಜ್ ಸಯೀದ್ ಅವರ ದೀರ್ಘಕಾಲದ ಸಹಚರ ಎಂದು ವರದಿಯಾಗಿದೆ.
ದೂರು ಸ್ವೀಕರಿಸಿದ ನಂತರ ಪಾಕಿಸ್ತಾನ ಸರ್ಕಾರ ಜಿಯೋ ನ್ಯೂಸ್ ವಿರುದ್ಧ ಕ್ರಮ ಕೈಗೊಂಡಿದೆ. ನಿಯಂತ್ರಣ ಮಂಡಳಿಯು ತನ್ನ ತನಿಖೆಯನ್ನು ಪೂರ್ಣಗೊಳಿಸಿದ ನಂತರ ಮುಂದಿನ ಕ್ರಮವನ್ನು ನಿರ್ಧರಿಸಲಾಗುತ್ತದೆ.