ಮಹಾಭೂಕಂಪಕ್ಕೆ ವೆನೆಜುವೆಲಾ ತತ್ತರ: ಸಾವಿನ ಸಂಖ್ಯೆ 1,430ಕ್ಕೆ ಏರಿಕೆ, 68 ಸಾವಿರಕ್ಕೂ ಹೆಚ್ಚು ಮಂದಿ ನಾಪತ್ತೆ

ಇನ್ನೂ 68,900ಕ್ಕೂ ಹೆಚ್ಚು ಮಂದಿ ನಾಪತ್ತೆಯಾಗಿರುವುದಾಗಿ ಸರ್ಕಾರ ತಿಳಿಸಿದ್ದು, ಸಾವಿರಾರು ಕುಟುಂಬಗಳು ತಮ್ಮ ಪ್ರೀತಿಪಾತ್ರರಿಗಾಗಿ ಕಣ್ಣೀರಿನ ನಡುವೆ ಹುಡುಕಾಟ ಮುಂದುವರಿಸಿವೆ.
Venezuela Earth quake
ವೆನೆಜುವೆಲಾ ಭೂಕಂಪನ
Updated on

ಲಾ ಗ್ವೈರಾ (ವೆನೆಜುವೆಲಾ): ವೆನೆಜುವೆಲಾದಲ್ಲಿ ಸಂಭವಿಸಿದ ಮಹಾಭೂಕಂಪದ ದುರಂತ ದಿನದಿಂದ ದಿನಕ್ಕೆ ಮತ್ತಷ್ಟು ಭಯಾನಕ ಸ್ವರೂಪ ಪಡೆದುಕೊಳ್ಳುತ್ತಿದೆ. ಸತತವಾಗಿ ಸಂಭವಿಸಿದ 7.2 ಮತ್ತು 7.5 ತೀವ್ರತೆಯ ಎರಡು ಪ್ರಬಲ ಭೂಕಂಪಗಳಿಂದ ದೇಶದ ಹಲವು ಭಾಗಗಳು ನೆಲಸಮವಾಗಿದ್ದು, ಸಾವಿನ ಸಂಖ್ಯೆ 1,430ಕ್ಕೆ ಏರಿಕೆಯಾಗಿದೆ.

ಇನ್ನೂ 68,900ಕ್ಕೂ ಹೆಚ್ಚು ಮಂದಿ ನಾಪತ್ತೆಯಾಗಿರುವುದಾಗಿ ಸರ್ಕಾರ ತಿಳಿಸಿದ್ದು, ಸಾವಿರಾರು ಕುಟುಂಬಗಳು ತಮ್ಮ ಪ್ರೀತಿಪಾತ್ರರಿಗಾಗಿ ಕಣ್ಣೀರಿನ ನಡುವೆ ಹುಡುಕಾಟ ಮುಂದುವರಿಸಿವೆ.

ಭೂಕಂಪದಿಂದ ತೀವ್ರವಾಗಿ ಹಾನಿಗೊಳಗಾದ ಲಾ ಗ್ವೈರಾ ರಾಜ್ಯದಲ್ಲಿ ರಕ್ಷಣಾ ಕಾರ್ಯಾಚರಣೆಗಳು ನಿರಂತರವಾಗಿ ಸಾಗುತ್ತಿವೆ. ಸ್ಥಳೀಯ ನಿವಾಸಿಗಳು, ಸ್ವಯಂಸೇವಕರು ಹಾಗೂ ರಕ್ಷಣಾ ಸಿಬ್ಬಂದಿ ಸಲಿಕೆಗಳು, ಹಗ್ಗಗಳು, ಭಾರೀ ಯಂತ್ರೋಪಕರಣಗಳು ಮತ್ತು ಕೆಲವೆಡೆ ಬರಿಗೈಗಳಿಂದಲೇ ಅವಶೇಷಗಳನ್ನು ತೆರವುಗೊಳಿಸಿ ಹುಡುಕಾಟ ನಡೆಸುತ್ತಿದ್ದಾರೆ.

ಮೆಕ್ಸಿಕೊ, ಅಮೆರಿಕ, ಬ್ರೆಜಿಲ್, ಎಲ್ ಸಾಲ್ವಡಾರ್, ಫ್ರಾನ್ಸ್ ಸೇರಿದಂತೆ ಹಲವು ದೇಶಗಳಿಂದ ಆಗಮಿಸಿರುವ ಅಂತರರಾಷ್ಟ್ರೀಯ ರಕ್ಷಣಾ ತಂಡಗಳು ಕಾರ್ಯಾಚರಣೆಯಲ್ಲಿ ಕೈಜೋಡಿಸಿದ್ದು, ಸಂಕಷ್ಟದಲ್ಲಿರುವ ಕುಟುಂಬಗಳಿಗೆ ಸ್ವಲ್ಪ ಮಟ್ಟಿನ ಭರವಸೆ ಮೂಡಿಸಿದೆ.

ಆದರೆ, ಸರ್ಕಾರದ ಕಾರ್ಯವೈಖರಿಯ ವಿರುದ್ಧ ಜನರ ಆಕ್ರೋಶ ಹೆಚ್ಚಾಗಿದೆ. ದುರಂತದ ಪ್ರಮಾಣಕ್ಕೆ ತಕ್ಕಂತೆ ಸರ್ಕಾರ ಸ್ಪಂದಿಸುತ್ತಿಲ್ಲ ಎಂಬ ಆರೋಪಗಳು ಕೇಳಿಬರುತ್ತಿವೆ.

ಸೈನಿಕರು, ಅಗ್ನಿಶಾಮಕ ಸಿಬ್ಬಂದಿ, ಪೊಲೀಸರು ಮತ್ತು ಇತರ ಅಧಿಕಾರಿಗಳು ಸಮರ್ಪಕ ಸಿದ್ಧತೆಯಿಲ್ಲದೆ ಕಾರ್ಯಾಚರಣೆ ನಡೆಸುತ್ತಿದ್ದಾರೆ ಎಂದು ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಭೂಕಂಪದ ನಂತರದ ಮೊದಲ 48 ರಿಂದ 72 ಗಂಟೆಗಳು ಜೀವಂತವಾಗಿ ಸಿಲುಕಿರುವವರ ರಕ್ಷಣೆ ಅತ್ಯಂತ ಮಹತ್ವದ್ದಾಗಿದ್ದರೂ, ಅಮೂಲ್ಯ ಸಮಯ ವ್ಯರ್ಥವಾಗುತ್ತಿದೆ ಎಂದು ಆರೋಪಿಸಿದ್ದಾರೆ.

Venezuela Earth quake
Venezuela: 40 ಸೆಕೆಂಡ್​​ ನಲ್ಲಿ 2 ಬಾರಿ ಭೂಕಂಪ, ಭಾರೀ ವಿನಾಶ, ಕನಿಷ್ಠ 32 ಸಾವು, ಸಾವಿನ ಸಂಖ್ಯೆ 1 ಲಕ್ಷಕ್ಕೇರುವ ಸಾಧ್ಯತೆ!

ಕರಾವಳಿ ಪಟ್ಟಣ ಕಾರಬಲ್ಲೆಡಾದ ನಿವಾಸಿ ಮೈಲೇಡಿ ರೊಮೆರೊ ಮಾತನಾಡಿ, "ನಿನ್ನೆ ರಾತ್ರಿ ಇಲ್ಲಿಯೇ ಹಲವು ಮೃತದೇಹಗಳು ಬಿದ್ದಿದ್ದವು. ನವಜಾತ ಶಿಶುಗಳೂ ಮೃತಪಟ್ಟಿವೆ. ರಾತ್ರಿ ಎಂಟು ಗಂಟೆ ವೇಳೆಗೆ ಇನ್ನೂ ಹಲವರು ಜೀವಂತವಾಗಿದ್ದರು. ಆದರೆ ಅವರನ್ನು ರಕ್ಷಿಸಲು ಯಾರೂ ಮುಂದಾಗಲಿಲ್ಲ. ನಾವು ಹಲವು ಮೃತದೇಹಗಳನ್ನು ಪತ್ತೆಹಚ್ಚಿದ್ದರೂ ಅವುಗಳನ್ನು ಹೊರತೆಗೆಯಲು ಸಹ ಸರ್ಕಾರ ಸಹಾಯ ಮಾಡುತ್ತಿಲ್ಲ" ಎಂದು ಕಣ್ಣೀರಿಟ್ಟಿದ್ದಾರೆ.

ವೆನೆಜುವೆಲಾದ ಹಂಗಾಮಿ ಅಧ್ಯಕ್ಷೆ ಡೆಲ್ಸಿ ರೋಡ್ರಿಗಸ್ ಅವರು ಮಾತನಾಡಿ, 14 ಸಾವಿರಕ್ಕೂ ಹೆಚ್ಚು ಸೇನೆ ಮತ್ತು ಪೊಲೀಸ್ ಸಿಬ್ಬಂದಿಯನ್ನು ದುರಂತ ಪೀಡಿತ ಪ್ರದೇಶಗಳಲ್ಲಿ ನಿಯೋಜಿಸಲಾಗಿದೆ ಎಂದು ದೂರದರ್ಶನದಲ್ಲಿ ಘೋಷಿಸಿದ್ದಾರೆ.

ಆದರೆ, ಸ್ಥಳೀಯರ ಪ್ರಕಾರ, ಸರ್ಕಾರದ ಸಿಬ್ಬಂದಿ ಸ್ಥಳದಲ್ಲಿ ಕಾಣಿಸಿಕೊಳ್ಳುತ್ತಿಲ್ಲ. ಕೆಲವರು ಕಟ್ಟಡಗಳ ಅವಶೇಷಗಳ ಮೇಲೆ ಏರಿ ತಮ್ಮ ಕುಟುಂಬದವರ ಹೆಸರನ್ನು ಕೂಗುತ್ತಾ ಜೀವಂತವಾಗಿರುವವರಿಗಾಗಿ ಹುಡುಕುತ್ತಿದ್ದಾರೆ.

ಭೂಕಂಪದ ಅವಶೇಷಗಳ ನಡುವೆ ಮೃತದೇಹಗಳು ಕೊಳೆಯತೊಡಗಿರುವ ಕಾರಣ ದುರ್ವಾಸನೆ ವ್ಯಾಪಿಸಿದೆ. ಅನೇಕರು ಮಾಸ್ಕ್ ಧರಿಸಿ ಹುಡುಕಾಟ ನಡೆಸುತ್ತಿದ್ದಾರೆ. ಆಸ್ಪತ್ರೆಗಳ ಆವರಣದಲ್ಲಿ ಮೃತದೇಹಗಳ ಗುರುತಿಸುವ ಕಾರ್ಯ ನಡೆಯುತ್ತಿದೆ.

ಸುರಕ್ಷತಾ ಹೆಲ್ಮೆಟ್‌ಗಳ ಕೊರತೆಯಿಂದ ರಕ್ಷಣಾ ಸಿಬ್ಬಂದಿ ಮತ್ತು ಸ್ಥಳೀಯರು ಬೈಕ್ ಹೆಲ್ಮೆಟ್‌ಗಳನ್ನು ಧರಿಸಿಕೊಂಡೇ ಅವಶೇಷಗಳಡಿ ಸಿಲುಕಿರುವವರನ್ನು ಹುಡುಕುತ್ತಿದ್ದಾರೆ. ಧ್ವಂಸಗೊಂಡ ಮನೆಗಳ ನಡುವೆ ಮಕ್ಕಳ ಆಟಿಕೆಗಳು, ಅಡುಗೆಮನೆಯ ಸಾಮಗ್ರಿಗಳು, ಹಾಸಿಗೆಗಳು, ಬಟ್ಟೆಗಳು ಮತ್ತು ವೈಯಕ್ತಿಕ ವಸ್ತುಗಳು ಚದುರಿಬಿದ್ದಿದ್ದು, ದುರಂತದ ತೀವ್ರತೆಯನ್ನು ವಿವರಿಸುತ್ತಿವೆ.

ಈ ನಡುವೆ ಸರ್ಕಾರದ ನಿರ್ಲಕ್ಷ್ಯದ ವಿರುದ್ಧ ಜನರ ಆಕ್ರೋಶ ಮತ್ತಷ್ಟು ತೀವ್ರಗೊಂಡಿದೆ. ಕೆಲವೆಡೆ ರಕ್ಷಣಾ ಕಾರ್ಯ ಪೂರ್ಣಗೊಳಿಸದೇ ತೆರಳಲು ಯತ್ನಿಸಿದ ಸರ್ಕಾರಿ ಯಂತ್ರೋಪಕರಣಗಳನ್ನು ಸ್ಥಳೀಯರು ತಡೆದಿದ್ದಾರೆ. ರಕ್ಷಣಾ ಕಾರ್ಯದಲ್ಲಿ ತೊಡಗುವ ಬದಲು ಕೆಲವು ಅಧಿಕಾರಿಗಳು ಧ್ವಂಸಗೊಂಡ ಕಟ್ಟಡಗಳ ಮುಂದೆ ಸೆಲ್ಫಿ ತೆಗೆದುಕೊಳ್ಳುತ್ತಿರುವ ದೃಶ್ಯಗಳು ಜನರ ಆಕ್ರೋಶಕ್ಕೆ ಕಾರಣವಾಗಿವೆ.

Venezuela Earth quake
Venezuelaದಲ್ಲಿ ಪ್ರಕೃತಿ ವಿಕೋಪ; ಅವಳಿ ಭೂಕಂಪದ ಬೆನ್ನಲ್ಲೇ ಮತ್ತೆ ಕಂಪಿಸಿದ ಭೂಮಿ, ರಿಕ್ಟರ್ ಮಾಪಕದಲ್ಲಿ 4.9 ತೀವ್ರತೆ ದಾಖಲು; 900ರ ಗಡಿ ದಾಟಿದ ಸಾವಿನ ಸಂಖ್ಯೆ..!

ಇದೇ ವೇಳೆ ಅವಶೇಷಗಳಡಿಯಿಂದ ವಯೋವೃದ್ಧರೊಬ್ಬರನ್ನು ಜೀವಂತವಾಗಿ ರಕ್ಷಿಸಲಾಗಿದೆ. ಗಂಭೀರವಾಗಿ ಗಾಯಗೊಂಡಿದ್ದ ಅವರು ನೀರು ಕೇಳುತ್ತಾ ತಮ್ಮ ಕುಟುಂಬದವರನ್ನು ಹುಡುಕುವಂತೆ ಮನವಿ ಮಾಡಿದರು. ಈ ದೃಶ್ಯ ಅಲ್ಲಿದ್ದವರ ಕಣ್ಣುಗಳಲ್ಲಿ ನೀರು ತರಿಸಿತು.

ಅಂತರರಾಷ್ಟ್ರೀಯ ವಲಸೆ ಸಂಸ್ಥೆ (IOM) ಅಂದಾಜಿನ ಪ್ರಕಾರ, ಈ ಭೂಕಂಪದಿಂದ 60 ಲಕ್ಷಕ್ಕೂ ಹೆಚ್ಚು ಜನರು ಬಾಧಿತರಾಗುವ ಸಾಧ್ಯತೆಯಿದ್ದು, ರಾಜಧಾನಿ ಕರಾಕಾಸ್‌ನಲ್ಲೇ ಸುಮಾರು 20 ಲಕ್ಷ ಮಂದಿ ಪರಿಣಾಮಕ್ಕೆ ಒಳಗಾಗಿದ್ದಾರೆ.

ಸತತವಾಗಿ ಸಂಭವಿಸಿದ ಎರಡು ಪ್ರಬಲ ಹಾಗೂ ಆಳ ಕಡಿಮೆ ಇರುವ ಭೂಕಂಪಗಳಿಂದಲೇ ಹಾನಿಯ ಪ್ರಮಾಣ ಭಾರೀ ಪ್ರಮಾಣದಲ್ಲಿ ಹೆಚ್ಚಾಗಿದೆ ಎಂದು ತಜ್ಞರು ತಿಳಿಸಿದ್ದಾರೆ. ಶನಿವಾರವೂ 4.8 ತೀವ್ರತೆಯ ಮತ್ತೊಂದು ಲಘು ಭೂಕಂಪ ಸಂಭವಿಸಿದ್ದು, ಜನರಲ್ಲಿ ಆತಂಕ ಮುಂದುವರಿದಿದೆ.

ಈ ದುರಂತವು ಅಧ್ಯಕ್ಷೆಯಾಗಿರುವ ಡೆಲ್ಸಿ ರೋಡ್ರಿಗಸ್ ಸರ್ಕಾರಕ್ಕೆ ದೊಡ್ಡ ಸವಾಲಾಗಿ ಪರಿಣಮಿಸಿದೆ. ಕಳೆದ ಹಲವು ವರ್ಷಗಳಿಂದ ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ವೆನೆಜುವೆಲಾದಲ್ಲಿ ಇದೀಗ ಭೂಕಂಪದಿಂದ ಪರಿಸ್ಥಿತಿ ಮತ್ತಷ್ಟು ಹದಗೆಟ್ಟಿದೆ.

ಇನ್ನೊಂದೆಡೆ ಮೆಕ್ಸಿಕೊ ಸೇರಿದಂತೆ ಹಲವು ದೇಶಗಳ ರಕ್ಷಣಾ ತಂಡಗಳು ಅವಶೇಷಗಳ ನಡುವೆ ಜೀವಂತ ವ್ಯಕ್ತಿಗಳಿಗಾಗಿ ನಿರಂತರ ಹುಡುಕಾಟ ನಡೆಸುತ್ತಿವೆ. "ಯಾರಾದರೂ ಜೀವಂತವಾಗಿದ್ದರೆ ದಯವಿಟ್ಟು ಶಬ್ದ ಮಾಡಿ" ಎಂದು ಮೆಕ್ಸಿಕೊದ ರಕ್ಷಣಾ ಸಿಬ್ಬಂದಿ ಅವಶೇಷಗಳ ಬಳಿ ಕೂಗಿ ಶೋಧ ಕಾರ್ಯ ಮುಂದುವರಿಸಿದ್ದಾರೆ.

ಈ ನಡುವೆ ಭೂಕಂಪದ ಪರಿಣಾಮ ಕರಾಕಾಸ್‌ನ ಪ್ರಮುಖ ಸೈಮನ್ ಬೊಲಿವರ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೂ ಭಾರೀ ಹಾನಿಯಾಗಿದ್ದು, ಒಂದು ರನ್‌ವೇ ಮಾತ್ರ ಕಾರ್ಯನಿರ್ವಹಿಸುತ್ತಿದೆ. ಅಮೆರಿಕದ ತಾಂತ್ರಿಕ ತಂಡಗಳು ವಿಮಾನ ನಿಲ್ದಾಣವನ್ನು ಮರುಸ್ಥಾಪಿಸಲು ಕಾರ್ಯನಿರ್ವಹಿಸುತ್ತಿವೆ.

ಅಮೆರಿಕ ನೌಕಾಪಡೆಯ ಹಡಗು ಕೂಡ ಕರಾವಳಿಯಲ್ಲಿ ನಿಯೋಜನೆಯಾಗಿದ್ದು, ಗಂಭೀರ ಗಾಯಾಳುಗಳನ್ನು ಚಿಕಿತ್ಸೆಗಾಗಿ ಸಾಗಿಸಲು ಸಿದ್ಧವಾಗಿದೆ. ಜೀವಂತವಾಗಿ ಸಿಲುಕಿರುವವರನ್ನು ರಕ್ಷಿಸಲು ಇದು ಸಮಯದ ವಿರುದ್ಧದ ಹೋರಾಟವಾಗಿದೆ ಎಂದು ಅಮೆರಿಕದ ಅಧಿಕಾರಿಗಳು ತಿಳಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X
Kannada Prabha
www.kannadaprabha.com