

ವಾಷಿಂಗ್ಟನ್: ಇರಾನ್‌ನ ಹೊಸ ಸರ್ವೋಚ್ಚ ನಾಯಕ ಎಂದು ಹೇಳಲಾಗುತ್ತಿರುವ ಮೊಜ್ತಬಾ ಖಮೇನಿಯ ಅವರ ಆರೋಗ್ಯ ಸ್ಥಿತಿಯ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆ ನಡೆಯುತ್ತಿರುವ ನಡುವೆ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಮಹತ್ವದ ಹೇಳಿಕೆ ನೀಡಿದ್ದಾರೆ. ಖಮೇನಿ ಗಾಯಗೊಂಡಿರುವುದು ನಿಜ. ಆದರೆ ಬದುಕಿದ್ದಾನೆಂದು ಹೇಳಿದ್ದಾರೆ.
ಇತ್ತೀಚೆಗೆ ನಡೆದ ದಾಳಿಯ ಬಳಿಕ ಖಮೇನಿ ಅವರ ಆರೋಗ್ಯದ ಬಗ್ಗೆ ಹಲವು ವರದಿಗಳು ಹರಿದಾಡುತ್ತಿದ್ದು, ಈ ಸಂದರ್ಭದಲ್ಲಿ ಟ್ರಂಪ್ ಅವರ ಈ ಹೇಳಿಕೆ ಗಮನ ಸೆಳೆದಿದೆ.
ಮಾಧ್ಯಮ ಸಂದರ್ಶನದಲ್ಲಿ ಮಾತನಾಡಿದ ಟ್ರಂಪ್, ಮೊಜ್ತಬಾ ಖಮೇನಿ ಬದುಕಿದ್ದಾನೆಂಬ ನಂಬಿಕೆ ಇದೆ, ಆದರೆ, ಅವರು ಗಂಭೀರವಾಗಿ ಗಾಯಗೊಂಡಿರಬಹುದು ಎಂದು ಹೇಳಿದ್ದಾರೆ.
“ಅವರು ಯಾವದೋ ರೂಪದಲ್ಲಿ ಬದುಕಿದ್ದಾರೆ, ಆದರೆ ದಾಳಿಯಿಂದ ಹಾನಿಗೊಳಗಾಗಿರಬಹುದು” ಎಂಬ ಅರ್ಥದಲ್ಲಿ ಟ್ರಂಪ್ ಹೇಳಿಕೆ ನೀಡಿದ್ದಾರೆ. ಈ ಮಾತುಗಳು ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಸಂಘರ್ಷದ ನಡುವೆ ಹೊಸ ಚರ್ಚೆಗೆ ಕಾರಣವಾಗಿವೆ.
ಇತ್ತೀಚೆಗೆ ಟೆಹ್ರಾನ್‌ನಲ್ಲಿ ನಡೆದ ಭಾರೀ ವೈಮಾನಿಕ ದಾಳಿಯ ನಂತರ ಇರಾನ್‌ನ ಮಾಜಿ ಸರ್ವೋಚ್ಚ ನಾಯಕ ಅಲಿ ಖಮೇನಿ ಮೃತಪಟ್ಟಿದ್ದರು. ಇದೀಗ ಇದೇ ರೀತಿಯ ಮತ್ತೊಂದು ದಾಳಿಯಲ್ಲಿ ಅವರ ಪುತ್ರ ಮೊಜ್ತಬಾ ಖಮೇನಿಗೂ ಗಾಯಗಳಾಗಿವೆ ಎಂಬ ಮಾಹಿತಿಗಳು ಹೊರಬಂದಿವೆ.
ದಾಳಿಯ ನಂತರ ಮೊಜ್ತಬಾ ಖಮೇನಿ ಸಾರ್ವಜನಿಕವಾಗಿ ಕಾಣಿಸಿಕೊಳ್ಳದಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಅವರ ಸಂದೇಶವನ್ನು ಅವರು ಸ್ವತಃ ನೀಡದೇ, ಇರಾನ್‌ನ ರಾಜ್ಯ ಟಿವಿಯ ಮೂಲಕ ಪ್ರಕಟಿಸಲಾಗಿತ್ತು.
ಇದರಿಂದ ಅವರ ಆರೋಗ್ಯದ ಬಗ್ಗೆ ಊಹಾಪೋಹಗಳು ಹೆಚ್ಚಾಗುವಂತಾಗಿದೆ. ಕೆಲ ಮಾಧ್ಯಮ ವರದಿಗಳ ಪ್ರಕಾರ ದಾಳಿಯಲ್ಲಿ ಖಮೇನಿ ಅವರು ಗಂಭೀರವಾಗಿ ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.
ಆದರೆ ಇರಾನ್ ಅಧಿಕಾರಿಗಳು ಈ ಕುರಿತು ವರದಿಗಳನ್ನು ತಳ್ಳಿಹಾಕಿದ್ದಾರೆ. ಖಮೇನಿ ಸುರಕ್ಷಿತರಾಗಿದ್ದು ದೇಶದ ನಾಯಕತ್ವವನ್ನು ಮುಂದುವರೆಸುತ್ತಿದ್ದಾರೆ ಎಂದು ಹೇಳಿದೆ. ಆದರೂ ಅವರ ನಿಖರ ಆರೋಗ್ಯ ಸ್ಥಿತಿ ಕುರಿತು ಸ್ಪಷ್ಟ ಮಾಹಿತಿ ಹೊರಬರದಿರುವುದರಿಂದ ಜಾಗತಿಕ ಮಟ್ಟದಲ್ಲಿ ಕುತೂಹಲ ಮತ್ತು ಚರ್ಚೆಗಳು ಮುಂದುವರೆಯುವಂತೆ ಮಾಡಿದೆ.
Advertisement