

ಲಾಸ್ ಏಂಜಲೀಸ್: ಅಮೆರಿಕದಲ್ಲಿ ಪೆಟ್ರೋಲ್ ಬೆಲೆ ಗಗನಕ್ಕೇರಿದ್ದು, ಇದರ ಬೆನ್ನಲ್ಲೇ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಡಳಿತದ ವಿರುದ್ಧ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪ್ರಮುಖವಾಗಿ ಕ್ಯಾಲಿಫೋರ್ನಿಯಾದ ಜನರಲ್ಲಿ ತೀವ್ರ ಅಸಮಾಧಾನ ವ್ಯಕ್ತವಾಗಿದೆ. ಬೆಲೆ ಏರಿಕೆಯಿಂದ ಕ್ಯಾಲಿಫೋರ್ನಿಯಾದಲ್ಲಿ ಸಾಮಾನ್ಯ ಜನರ ಜೀವನ ವೆಚ್ಚ ಹೆಚ್ಚಾಗಿದ್ದು, ಹಲವರು ಸರ್ಕಾರದ ನೀತಿಗಳ ವಿರುದ್ಧ ಆಕ್ರೋಶ ಹೊರಹಾಕುತ್ತಿದ್ದಾರೆ.
ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಆಡಳಿತದಲ್ಲಿ ಇರಾನ್ ವಿರುದ್ಧ ನಡೆದ ಯುದ್ಧ ಹಾಗೂ ಮಧ್ಯಪ್ರಾಚ್ಯದಲ್ಲಿ ಹೆಚ್ಚಿದ ಸಂಘರ್ಷದಿಂದ ತೈಲ ಸರಬರಾಜಿಗೆ ತೊಂದರೆ ಉಂಟಾಗಿದೆ. ಇದರ ಪರಿಣಾಮವಾಗಿ ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಏರಿಕೆಯಾಗಿದ್ದು, ಅಮೆರಿಕದಲ್ಲೂ ಪೆಟ್ರೋಲ್ ದರಗಳು ಏರಿಕೆ ಕಂಡಿವೆ.
ಲಾಸ್ ಏಂಜಲೀಸ್‌ನಲ್ಲಿ ಒಂದು ಗ್ಯಾಸ್ ಸ್ಟೇಷನ್‌ನಲ್ಲಿ ಇಂಧನ ತುಂಬುತ್ತಿದ್ದ ರೈಡರ್ ಥಾಮಸ್ ಎಂಬ ಯುವಕ ಟ್ರಂಪ್ ಅವರನ್ನು ಮೂರ್ಖ ಎಂದು ಕರೆದಿದ್ದು, ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬೆಲೆಯ ಬಗ್ಗೆ ನನಗೆ ಕೋಪವಿದೆ, ಆದರೆ, ಇದ್ದಕ್ಕಿದ್ದಂತೆ ಬೆಲೆ ಏರಿಕೆಯಾಗಿದ್ದು, ಅದರ ಹಿಂದಿರುವ ಕಾರಣ ನನ್ನ ಕೋಪ ಹೆಚ್ಚಾಗುವಂತೆ ಮಾಡಿದೆ ಎಂದು ಹೇಳಿದ್ದಾರೆ.
ಈ ಮೊದಲು ಟ್ರಕ್ ಟ್ಯಾಂಕ್ ತುಂಬಲು ಸುಮಾರು 100 ಡಾಲರ್ ಖರ್ಚು ಮಾಡುತ್ತಿದ್ದೆ. ಆದರೆ, ಇದೀಗ 30 ಡಾಲರ್ ಹೆಚ್ಚಾಗಿ 130 ಡಾಲರ್ ವ್ಯಯಿಸುವಂತೆ ಮಾಡಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ಯುದ್ಧದ ಅಗತ್ಯವಿರಲಿಲ್ಲ. ನಾವು ಇರಾಕ್ ಅನ್ನು ಆಕ್ರಮಿಸಿದಾಗ ವಿನಾಶದ ಶಸ್ತ್ರಾಸ್ತ್ರಗಳು ಇರಲಿಲ್ಲ. ಟ್ರಂಪ್ ಒಬ್ಬ ಮೂರ್ಖ, ಅಷ್ಟೇ ಎಂದು ಥಾಮಸ್ ಹೇಳಿದ್ದಾರೆ.
ಇದೇ ವೇಳೆ ಟ್ರಂಪ್ ಅವರಿಗೆ ಮತ ಹಾಕಿದ ಮತದಾರರ ಕುರಿತಂತೆಯೂ ಥಾಮಸ್ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮತ ಹಾಕಿದವರು ತಮಗೆ ಟ್ರಂಪ್ ಏನು ಮಾಡಿದರು ಎಂಬುದನ್ನು ಈಗ ಚಿಂತಿಸುತ್ತಾರೆಂದು ತಿಳಿಸಿದ್ದಾರೆ.
ಹೆಚ್ಚುತ್ತಿರುವ ಸಾರಿಗೆ ವೆಚ್ಚವು ಆಹಾರ ಮತ್ತು ಬಟ್ಟೆಯಂತಹ ದಿನನಿತ್ಯದ ವಸ್ತುಗಳ ಬೆಲೆಗಳನ್ನು ಹೆಚ್ಚಿಸುತ್ತಿದ್ದು, ಈ ತೈಲ ಕೊರತೆಯು ತಾನು ಖರೀದಿಸುವ ಎಲ್ಲದರ ಮೇಲೂ ಬೀರುತ್ತಿದೆ ಎಂದಿದ್ದಾರೆ.
ಡೇವಿಡ್ ಚಾವೆಜ್ ಎಂಬುವವರು ಮಾತನಾಡಿ, ಮಾಜಿ ಅಧ್ಯಕ್ಷ ಜೋ ಬೈಡೆನ್ ಅವರ "ವಲಸೆಯ ಕಳಪೆ ನಿರ್ವಹಣೆ ಮತ್ತು ಆರ್ಥಿಕತೆಯ ಕಳಪೆ ನಿರ್ವಹಣೆ"ಯಿಂದಾಗಿ ಟ್ರಂಪ್‌ಗೆ ಮತ ಹಾಕಿದ್ದೆ. ಆದರೆ. ಪ್ರಸ್ತುತ ನಡೆಯುತ್ತಿರುವ ಬೆಳವಣಿಗೆ ಒಳ್ಳೆಯದಲ್ಲ, ನಾವು ಗ್ಯಾಸ್‌ಗೆ ಹೆಚ್ಚು ಪಾವತಿಸಲು ಬಯಸುವುದಿಲ್ಲ ಎಂದು ಹೇಳಿದ್ದಾರೆ. ಎಲ್ಲಾ ಸಮಸ್ಯೆಗೆ ಒಬ್ಬ ವ್ಯಕ್ತಿಯನ್ನು ದೂಷಿಸುವುದು ಸುಲಭ. ಆದರೆ, ಒಳಗೆ ಏನಾಗುತ್ತಿದೆ ಎಂಬುದನ್ನು ಹೊರಗೆ ನಿಂತು ನೋಡಿ ಹೇಳಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
73 ವರ್ಷದ ವೃದ್ಧ ಮಹಿಳೆಯೊಬ್ಬರು ಮಾತನಾಡಿ, ಹೆಚ್ಚಿದ ಇಂಧನ ವೆಚ್ಚಗಳು ಜೀವನವನ್ನು ಹೆಚ್ಚು ಕಷ್ಟಕರವಾಗಿಸುತ್ತಿವೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಮಧ್ಯಪ್ರಾಚ್ಯದಲ್ಲಿ ಇರಾನ್ ಮತ್ತು ಇಸ್ರೇಲ್ ನಡುವಿನ ಸಂಘರ್ಷ ಹಾಗೂ ತೈಲ ಸಾಗಣೆಗೆ ಪ್ರಮುಖ ಮಾರ್ಗವಾದ ಹಾರ್ಮುಜ್ ಜಲಸಂಧಿ ಮೇಲಿನ ಒತ್ತಡದಿಂದ ಸರಬರಾಜು ಕಡಿಮೆಯಾಗಿದೆ. ಇದರ ಪರಿಣಾಮವಾಗಿ ಅಮೆರಿಕದಲ್ಲಿ ಗ್ಯಾಲನ್‌ಗೆ ಇಂಧನ ಬೆಲೆಗಳು $6ಕ್ಕೂ ಹೆಚ್ಚು ಮಟ್ಟಕ್ಕೆ ಏರಿವೆ.
ಒಟ್ಟಿನಲ್ಲಿ, ಮಧ್ಯಪ್ರಾಚ್ಯ ಸಂಘರ್ಷದಿಂದ ಆರಂಭವಾದ ತೈಲ ಸರಬರಾಜು ಸಮಸ್ಯೆ ಇದೀಗ ಅಮೆರಿಕಾದ ಆರ್ಥಿಕತೆಗೆ ನೇರ ಹೊಡೆತ ನೀಡುತ್ತಿದ್ದು, ಇಂಧನ ಬೆಲೆ ಏರಿಕೆ ಮುಂದಿನ ದಿನಗಳಲ್ಲಿ ಇನ್ನಷ್ಟು ರಾಜಕೀಯ ಚರ್ಚೆ ಮತ್ತು ಸಾರ್ವಜನಿಕ ಅಸಮಾಧಾನಕ್ಕೆ ಕಾರಣವಾಗುವ ಸಾಧ್ಯತೆ ಇದೆ.
Advertisement