

ಕೌಲಾಲಂಪುರ: ಪ್ರಿಯತಮೆಯ ಮನೆಯಲ್ಲಿ ಇದ್ದ ಫಿಟ್‌ನೆಸ್ ಟ್ರೈನರ್, ಆಕೆಯ ಪತಿ ಮನೆಗೆ ಮರಳಿದ ಬಳಿಕ ತಪ್ಪಿಸಿಕೊಳ್ಳಲು ಯತ್ನಿಸುವ ವೇಳೆ 30 ಅಂತಸ್ತಿನ ಕಟ್ಟಡದಿಂದ ಕೆಳಗೆ ಬಿದ್ದು ಮೃತಪಟ್ಟಿರುವ ಘಟನೆ ವರದಿಯಾಗಿದೆ.
ಸಿಂಗಾಪುರದ ವಸತಿ ಸಮುಚ್ಚಯದಲ್ಲಿ ಈ ಆಘಾತಕಾರಿ ಘಟನೆ ನಡೆದಿದ್ದು, ಮೃತಪಟ್ಟ ವ್ಯಕ್ತಿ ಸುಮಾರು 30 ವರ್ಷದ ಫಿಟ್‌ನೆಸ್ ಟ್ರೈನರ್ ಆಗಿದ್ದು, ವಿವಾಹಿತ ಮಹಿಳೆಯೊಂದಿಗೆ ಸಂಬಂಧ ಹೊಂದಿದ್ದನೆಂದು ಹೇಳಲಾಗಿದೆ.
ವಿವಾಹಿತ ಪ್ರಿಯತಮೆ ಜೊತೆ ಏಕಾಂತದಲ್ಲಿರುವಾಗಲೇ ಅನಿರೀಕ್ಷಿತವಾಗಿ ಆಕೆಯ ಗಂಡ ಆಗಮಿಸಿದ್ದು, ಈ ವೇಳೆ ಆತನಿಂದ ತಪ್ಪಿಸಿಕೊಳ್ಳಲು ಫಿಟ್ನೆಸ್ ಟ್ರೈನರ್ ಕಿಟಕಿಯಿಂದ ಹೊರಗೆ ಹೋಗಿದ್ದಾನೆ. ಆದರೆ ಅಲ್ಲಿ ಕಿಟಕಿಯ ಸರಳುಗಳ ಹಿಡಿದು ನೇತಾಡಿದ್ದು, ಹೆಚ್ಚು ಹೊತ್ತು ಅದನ್ನು ಹಿಡಿಯಲಾಗದೇ ಕೈಜಾರಿ ಕೆಳಗೆ ಬಿದ್ದಿದ್ದಾನೆ. 30ನೇ ಅಂತಸ್ತಿನಿಂದ ಕೆಳಗೆ ಬಿದ್ದ ಕೂಡಲೇ ಜಿಮ್ ಟ್ರೈನರ್ ಪ್ರಾಣಪಕ್ಷಿ ಹಾರಿ ಹೋಗಿದೆ.
ಈ ಕುರಿತ ವಿಡಿಯೋ ಇದೀಗ ವ್ಯಾಪಕ ವೈರಲ್ ಆಗಿದ್ದು, ಜಗತ್ತಿನಾದ್ಯಂತ ವ್ಯಾಪಕ ಸುದ್ದಿಗೆ ಗ್ರಾಸವಾಗಿದೆ.
ಸ್ಥಳೀಯರ ಆತಂಕ
ಭಾರೀ ಶಬ್ದ ಕೇಳಿಬಂದ ಹಿನ್ನೆಲೆಯಲ್ಲಿ ಸ್ಥಳೀಯ ನಿವಾಸಿಗಳು ಹೊರಗೆ ಬಂದು ನೋಡಿದಾಗ ಕಟ್ಟಡದ ಕೆಳಭಾಗದಲ್ಲಿ ಗಂಭೀರವಾಗಿ ಗಾಯಗೊಂಡ ಸ್ಥಿತಿಯಲ್ಲಿ ಆತ ಬಿದ್ದಿರುವುದನ್ನು ಕಂಡು ತಕ್ಷಣ ತುರ್ತು ಸೇವೆಗಳಿಗೆ ಮಾಹಿತಿ ನೀಡಿದ್ದಾರೆ.
ತಕ್ಷಣ ಸ್ಥಳಕ್ಕೆ ಧಾವಿಸಿದ ಪ್ಯಾರಾಮೆಡಿಕ್ಸ್ ತಂಡ ಗಾಯಾಳುವಿಗೆ ತುರ್ತು ಚಿಕಿತ್ಸೆ ನೀಡಲು ಪ್ರಯತ್ನಿಸಿತು. ಆದರೆ ಗಂಭೀರ ಗಾಯಗಳಿಂದಾಗಿ ಆತ ಸ್ವಲ್ಪ ಸಮಯದಲ್ಲೇ ಮೃತಪಟ್ಟಿದ್ದಾನೆ.
ಘಟನೆ ಬಳಿಕ ಪೊಲೀಸರು ಪ್ರದೇಶವನ್ನು ಸುತ್ತುವರಿದು ತನಿಖೆ ಆರಂಭಿಸಿದ್ದಾರೆ. ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಲಾಗುತ್ತಿದ್ದು, ಸಾಕ್ಷಿದಾರರ ಹೇಳಿಕೆಗಳನ್ನು ದಾಖಲಿಸುವ ಜೊತೆಗೆ ಮಹಿಳೆ ಮತ್ತು ಆಕೆಯ ಪತಿಯನ್ನೂ ವಿಚಾರಣೆ ನಡೆಸಲಾಗುತ್ತಿದೆ.
ಗುರುತು ಪತ್ತೆಯಾಗಿಲ್ಲ
ಇಲ್ಲಿಯವರೆಗೆ ಅಧಿಕಾರಿಗಳು ಸಂಬಂಧಪಟ್ಟವರ ಗುರುತನ್ನು ಬಹಿರಂಗಪಡಿಸಿಲ್ಲ. ಆದರೆ ಸ್ಥಳೀಯ ಮಾಧ್ಯಮಗಳ ವರದಿ ಪ್ರಕಾರ, ಈ ಪ್ರಕರಣವನ್ನು ಆಕಸ್ಮಿಕವಾಗಿ ಸಂಭವಿಸಿದ ಬೀಳುವಿಕೆ ಎಂದು ತನಿಖಾಧಿಕಾರಿಗಳು ಪರಿಗಣಿಸುತ್ತಿದ್ದಾರೆ. ಆದರೂ ಯಾವುದೇ ದುರುದ್ದೇಶ ಅಥವಾ ನಿರ್ಲಕ್ಷ್ಯ ಇದರಲ್ಲಿ ಪಾತ್ರವಹಿಸಿದೆಯೇ ಎಂಬುದನ್ನು ಪತ್ತೆಹಚ್ಚಲು ಪೊಲೀಸರು ಸವಿಸ್ತಾರ ತನಿಖೆ ನಡೆಸಿದ್ದಾರೆ.
Advertisement